
ಕೊಪ್ಪಳ: ‘ಹಲವಾರು ಪದವಿಗಳನ್ನು ಪಡೆದಿರುವ ಕಾನೂನು ತಜ್ಞರು, ಸಂಶೋಧಕರು, ಆರ್ಥಿಕ ತಜ್ಞರು ಆಗಿದ್ದ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚನೆಗೂ ಮುನ್ನ ಸುಮಾರು 58 ದೇಶಗಳ ಸಂವಿಧಾನಗಳ ಕುರಿತು ಅಧ್ಯಯನ ಮಾಡಿದ್ದರು. ಸಂವಿಧಾನದಲ್ಲಿ ಅವರು ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದ್ದಾರೆ’ ಎಂದು ಕೊಪ್ಪಳದ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಮಂಜುನಾಥ ಹಿರೇಮಠ ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ‘ಅಂಬೇಡ್ಕರ್ ಅವರು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರಾಗಿ ಕರಡುರಚನೆ ಮಾಡಿಕೊಂಡು ಗುಣಮಟ್ಟದ ಸಂವಿಧಾನ ದೇಶಕ್ಕೆ ನೀಡಿದರು. ಭಾರತವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದು, ಅತ್ಯಂತ ದೊಡ್ಡ ಸಂವಿಧಾನ ಹೊಂದಿದೆ ಹೆಗ್ಗಳಿಕೆಗೆ ಭಾಜನವಾಗಿದೆ’ ಎಂದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ ‘ನಮ್ಮ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯು ಸುಂದರ ಮತ್ತು ಅದ್ಬುತವಾಗಿದೆ. ನಮ್ಮ ದೇಶದಲ್ಲಿ ರಾಮಾಯಣ, ಮಹಾಭಾರತ ಮತ್ತು ಭಗವದ್ಗೀತೆ ಎಷ್ಟು ಪ್ರಾಮುಖ್ಯತೆ ಪಡೆದಿವೆಯೊ ಅದಕ್ಕೆ ಸರಿಸಮಾನವಾಗಿಯೇ ಸಂವಿಧಾನ ಮಹತ್ವದ ಗ್ರಂಥವಾಗಿದೆ. ಸಂವಿಧಾನವನ್ನು ಅಂಗೀಕರಿಸಿ ಅದನ್ನು ಜಾರಿಗೊಳಿಸಿದ್ದು ಇಲ್ಲಿಯವರೆಗೆ ನಮ್ಮ ದೇಶವು ಸುರಕ್ಷಿತವಾಗಿ ನಡೆಯುತ್ತಿದೆ. ಭಾರತವು ಜಗತ್ತಿನ ಅತ್ಯಂತ ದೊಡ್ಡ ಪ್ರಜಾಸತಾತ್ಮಕವಾಗಿರುವಂತಹ ದೇಶವಾಗಿದೆ’ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಆಹಾರ ಇಲಾಖೆ ಉಪನಿರ್ದೇಶಕ ಸೋಮಶೇಖರ ಬಿರಾದಾರ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೆಶಕ ಅಜ್ಜಪ್ಪ ಸೊಗಲದ, ಡಿಡಿಪಿಯು ಜಗದೀಶ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಾಗೃತಿ ಜಾಥಾ ವೇದಿಕೆ
ಕಾರ್ಯಕ್ರಮಕ್ಕೂ ಮೊದಲು ಕೊಪ್ಪಳದ ಅಂಬಿಗರ ಚೌಡಯ್ಯ ಉದ್ಯಾನದಲ್ಲಿರುವ ಬಿ. ಆರ್.ಅಂಬೇಡ್ಕರ್. ಬಸವೇಶ್ವರ ಹಾಗೂ ಬಾಬು ಜಗಜೀವನರಾಂ ಅವರ ಪುತ್ಥಳಿಗೆ ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಪುಷ್ಪನಮನ ಸಲ್ಲಿಸಿದದರು. ಬಳಿಕ ತಾಲ್ಲೂಕು ಕ್ರೀಡಾಂಗಣದಲ್ಲಿ ಸಂವಿಧಾನ ಜಾಗೃತಿ ಜಾಥಕ್ಕೆ ಚಾಲನೆ ನೀಡಿದರು. ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಬಸವರಾಜ ತಹಶೀಲ್ದಾರ್ ವಿಠ್ಠಲ ಚೌಗುಲಾ ತಾಲ್ಲೂಕು ಪಂಚಾಯಿತಿ ಇಒ ದುಂಡಪ್ಪ ತುರಾದಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.