ADVERTISEMENT

‘ಜೀವನದಲ್ಲಿ ನಿರ್ದಿಷ್ಟ ಗುರಿ ತಲುಪಿ’

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2023, 12:45 IST
Last Updated 8 ನವೆಂಬರ್ 2023, 12:45 IST
ಅಳವಂಡಿ ಸಮೀಪದ ಮುರ್ಲಾಪುರ ಗ್ರಾಮದ ದೇವಿ ಪುರಾಣ ಮಂಗಲದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಮಾತನಾಡಿದರು
ಅಳವಂಡಿ ಸಮೀಪದ ಮುರ್ಲಾಪುರ ಗ್ರಾಮದ ದೇವಿ ಪುರಾಣ ಮಂಗಲದ ಅಂಗವಾಗಿ ನಡೆದ ಧಾರ್ಮಿಕ ಸಭೆಯಲ್ಲಿ ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಮಾತನಾಡಿದರು   

ಅಳವಂಡಿ:‘ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು, ಅದನ್ನು ಉಪಯೋಗ ಮಾಡಿಕೊಂಡು ಜೀವನದಲ್ಲಿನ ನಿರ್ದಿಷ್ಟ ಗುರಿಯನ್ನು ತಲುಪಬೇಕು’ ಎಂದು ಹಿರೇಸಿಂದೋಗಿ ಕಾಲೇಜಿನ ಪ್ರಾಚಾರ್ಯ ಹನುಮಂತಪ್ಪ ಅಂಡಗಿ ಹೇಳಿದರು.

ಸಮೀಪದ ಮುರ್ಲಾಪುರ ಗ್ರಾಮದಲ್ಲಿ 133ನೇ ವರ್ಷದ ಆದಿಶಕ್ತಿ ಪುರಾಣ ಪ್ರವಚನದ ಮುಕ್ತಾಯ ಸಮಾರಂಭದ ಅಂಗವಾಗಿ ನಡೆದ ದೇವಿಯ ಹಾಗೂ ಅನ್ನದಾನೇಶ್ವರ ಶ್ರೀ ಅಡ್ಡಪಲ್ಲಕ್ಕಿ ಮಹೋತ್ಸವ ಹಾಗೂ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಬುಧವಾರ ಅವರು ಮಾತನಾಡಿದರು.

‘ಯುವಕರು ಕನಸು ಕಾಣಬೇಕು ಹಾಗೂ ಆ ಕನಸು ನನಸಾಗುವಂತೆ ಸಾಧನೆ ಮಾಡಬೇಕು. ಸಾಧಕರನ್ನು ಸಮಾಜ ಗೌರವಿಸುತ್ತದೆ. ಮೊಬೈಲ್‌ನ್ನು ಜ್ಞಾನವೃದ್ಧಿ ಹಾಗೂ ಒಳ್ಳೆಯ ಉದ್ದೇಶಕ್ಕಾಗಿ ಬಳಕೆ ಮಾಡಿ ಎಂದು ಸಲಹೆ ನೀಡಿದರು.

ADVERTISEMENT

ಅಡವಿ ಮಲ್ಲನಕೇರಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ,‘ಹಣ ಆಸ್ತಿ ಗಳಿಸುವದು ಬದುಕು ಅಲ್ಲ. ಎಲ್ಲರೊಡಗೂಡಿ ಬದುಕುವದು ನಿಜವಾದ ಜೀವನ. ಜಾತ್ರೆ, ಹಬ್ಬ, ಹರಿದಿನ, ಧಾರ್ಮಿಕ ಕಾರ್ಯ ಮುಂತಾದ ಸಾಮಾಜಿಕ ಕಾರ್ಯಕಗಳಲ್ಲಿ ಪಾಲ್ಗೊಳ್ಳುವದರಿಂದ ಒಗ್ಗಟ್ಟಿನ ಭಾವನೆ ಮೂಡಲಿದೆ’ ಎಂದರು.

ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಶ್ರೀಗಳಿಂದ ಷಟಸ್ಥಲ ಧ್ವಜಾರೋಹಣ, ಶ್ರೀಗಳ ಪಾದಪೂಜೆ ಕಾರ್ಯಕ್ರಮ ನಡೆಯಿತು. ನಂತರ ತಳಿರು ತೋರಣದಿಂದ ಶೃಂಗರಿಸಿದ ಅಡ್ಡಪಲ್ಲಕ್ಕಿಯಲ್ಲಿ ದೇವಿಯ ಉತ್ಸವ ಮೂರ್ತಿ ಹಾಗೂ ಅಡವಿ ಮಲ್ಲನಕೇರಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅಡ್ಡಪಲ್ಲಕ್ಕಿ ಮೆರವಣಿಗೆಯು ಕಳಶ, ಕುಂಭ, ಡೊಳ್ಳು, ಭಜನೆ, ನಂದಿಕೋಲು ಮುಂತಾದ ಸಕಲ ವಾದ್ಯ ಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ದೇವಸ್ಥಾನ ತಲುಪಿತು.

ನಂತರ ಮಹಾ ದಾಸೋಹ ಕಾರ್ಯಕ್ರಮ ನಡೆಯಿತು. ಪುರಾಣ ಪಠಣಕಾರ ಪ್ರವೀಣಸ್ವಾಮಿ ಹುಲಕಂತಿಮಠ, ಪ್ರವಚನಕಾರ ಕುಮಾರಸ್ವಾಮಿ ಹಿರೇಮಠ, ಸಂಗೀತಕಾರ ಯಂಕಣ್ಣ ವರಕನಹಳ್ಳಿ, ತಬಲಾ ವಾದಕ ಮೌನೇಶ ಬಡಿಗೇರ, ಆದಿಶಕ್ತಿ ಪುರಾಣ ಸಮಿತಿ, ಅನ್ನದಾನೇಶ್ವರ ಭಜನಾ ಸಂಘ, ಗಜಾನನ ಯುವಕ ಸಂಘ, ಗ್ರಾಮದ ಸಕಲ ಸದ್ಭಕ್ತರು ಹಾಜರಿದ್ದರು.

ಅಳವಂಡಿ ಸಮೀಪದ ಮುರ್ಲಾಪುರ ಗ್ರಾಮದಲ್ಲಿ ದೇವಿ ಪುರಾಣ ಮಂಗಲದ ಅಂಗವಾಗಿ ಅಡವಿ ಮಲ್ಲನಕೇರಿಯ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅಡ್ಡಪಲ್ಲಕ್ಕಿ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.