ADVERTISEMENT

ಅಂಬೇಡ್ಕರ್‌ ಆದರ್ಶ ಅಳವಡಿಸಿಕೊಳ್ಳಲು ಸಲಹೆ: ಸಿ.ವಿ. ಚಂದ್ರಶೇಖರ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:01 IST
Last Updated 26 ಜನವರಿ 2023, 5:01 IST
ಕೊಪ್ಪಳ ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್ ಉದ್ಘಾಟಿಸಿದರು
ಕೊಪ್ಪಳ ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ನಡೆದ ಅಂಬೇಡ್ಕರ್ ಪುತ್ಥಳಿ ಅನಾವರಣ ಕಾರ್ಯಕ್ರಮವನ್ನು ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್ ಉದ್ಘಾಟಿಸಿದರು   

ಕೊಪ್ಪಳ: ‘ಪ್ರತಿಯೊಬ್ಬರೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಬಾಬು ಜಗಜೀವನ್‍ರಾಂ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಸರ್ವೋದಯಕ್ಕೆ ಮುನ್ನುಡಿ ಬರೆಯಬೇಕು’ ಬಿಜೆಪಿ ಮುಖಂಡ ಸಿ.ವಿ. ಚಂದ್ರಶೇಖರ್‌ ಹೇಳಿದರು.

ತಾಲ್ಲೂಕಿನ ಬೇಳೂರು ಗ್ರಾಮದಲ್ಲಿ ಬುಧವಾರ ಆಪ್ತರಕ್ಷಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣಗೊಳಿಸಿ ಮಾತನಾಡಿ ‘ಕಳೆದ ಕೆಲವು ದಶಕಗಳಲ್ಲಿ ಹಲವಾರು ದಲಿತ ಕುಟುಂಬಗಳ ಬಾಳು ಬೆಳಕಾಗಿದೆ. ಇಂದು ಸಮಾಜ ಸಮಾನತೆಯತ್ತ ಸಾಗುತ್ತಿದೆ. ಅಸ್ಪ್ರಶ್ಯತೆಯ ಆಚರಣೆ ಬಹುತೇಕ ಮರೆಯಾಗಿದೆ. ನೂರಾರು ಬುದ್ದಿವಂತ ದಲಿತರು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ. ಇದು ಸಾಧ್ಯವಾಗಿದ್ದು ಅಂಬೇಡ್ಕರ್ ಅವರು ನೀಡಿದ ಸಂವಿಧಾನದಿಂದ’ ಎಂದರು.

‘ಉತ್ತಮ ಮನುಷ್ಯರಾಗಲು ಸಂಸ್ಕಾರ ಹಾಗೂ ಶಿಕ್ಷಣ ಅಗತ್ಯ. ದಲಿತ ಕುಟುಂಬದವರು ತಮ್ಮ ಮಕ್ಕಳಿಗೆ ಸಂಸ್ಕಾರ, ಶಿಕ್ಷಣ ಹಾಗೂ ಸ್ವಚ್ಚತೆಯ ಪಾಠಗಳನ್ನು ಕಲಿಸಬೇಕು. ಅವರಿಗೆ ನೂರಾರು ಅವಕಾಶಗಳಿವೆ. ಯಾವುದೇ ದಲಿತ ವ್ಯಕ್ತಿಯು ಅವಕಾಶವಂಚಿತನಾಗಬಾರದು’ ಎಂದರು.

ADVERTISEMENT

ಕಾತರಕಿ-ಗುಡ್ಲಾನೂರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾ ಹಳ್ಳಿಕೇರಿ, ಸದಸ್ಯರಾದ ವಿರೂಪಾಕ್ಷಗೌಡ, ಮಲ್ಲಪ್ಪ ಭರಮಪ್ಪ, ಶಾಂತಮ್ಮ ಹುಬ್ಬಳ್ಳಿ, ಯಮನವ್ವ ದೊಡ್ಡಮನಿ, ಗುತ್ತಿಗೆದಾರರಾದ ರಮೇಶ ದೊಡ್ಡಮನಿ, ಗಾಳೆಪ್ಪ ದೊಡ್ಡಮನಿ, ಆಪ್ತರಕ್ಷಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ರವಿ ಡಿ. ಬಿಸರಳ್ಳಿ, ಉಪಾಧ್ಯಕ್ಷ ಯಗ್ಗಪ್ಪ ಡಿ. ಗಂಗಾವತಿ, ಸಂಸ್ಥೆಯ ಸಂಗಪ್ಪ ಆರ್. ದೊಡ್ಡಮನಿ, ಯಂಕಪ್ಪ ಎನ್. ಪೂಜಾರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.