ADVERTISEMENT

ಕೊಪ್ಪಳ| ‘ಅಜ್ಜನ ಜಾತ್ರೆ’ಯ ಮಹಾರಥೋತ್ಸವ ಇಂದು: ಎಲ್ಲೆಲ್ಲೂ ಹಬ್ಬದ ವಾತಾವರಣ

ಪ್ರಮೋದ 
Published 8 ಜನವರಿ 2023, 5:37 IST
Last Updated 8 ಜನವರಿ 2023, 5:37 IST
   

ಕೊಪ್ಪಳ: ರಾಜ್ಯದ ’ಅಜ್ಜನ ಜಾತ್ರೆ’ ಎಂದೇ ಖ್ಯಾತಿಯಾದ ಇಲ್ಲಿನ ಗವಿಸಿದ್ಧೇಶ್ವರ ಮಠದಲ್ಲಿ ರಥೋತ್ಸವದ ‘ಮಹಾಸಂಭ್ರಮ’ಕ್ಕೆ ವೇದಿಕೆ ಸಜ್ಜುಗೊಂಡಿದೆ. ಕೋವಿಡ್‌ ಕಾರಣದಿಂದಾಗಿ ಹಿಂದಿನ ಮೂರು ವರ್ಷ ದೊಡ್ಡ ಪ್ರಮಾಣದಲ್ಲಿ ಮಹಾರಥೋತ್ಸವ ನಡೆದಿರಲಿಲ್ಲ. ಆದರೆ, ಈ ಬಾರಿ ಹಿಂದಿನ ಎಲ್ಲ ಜಾತ್ರೆಗಳ ವೈಭವವನ್ನು ಮೀರಿ ಜನ ಸೇರುವ ನಿರೀಕ್ಷೆಯಿದೆ.

ಭಾನುವಾರ (ಜ. 8) ಸಂಜೆ 5.30ಕ್ಕೆ ನಡೆಯಲಿರುವ ಮಹಾರಥೋತ್ಸವವನ್ನು ಈಶಾ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್‌ ಉದ್ಘಾಟಿಸುವರು. ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ತೇರು ಎಳೆಯುವ ಹಾಗೂ ಆ ಜನಸಂದಣಿಯನ್ನು ಕಣ್ತುಂಬಿಕೊಳ್ಳುವ ವೈಭವದ ಕ್ಷಣಕ್ಕಾಗಿ ಜಿಲ್ಲೆ, ಹೊರಜಿಲ್ಲೆ ಹಾಗೂ ಹೊರರಾಜ್ಯಗಳ ಜನ ಕಾತರದಿಂದ ಕಾಯುತ್ತಿದ್ದಾರೆ.

ಗವಿಮಠದ ಮುಂಭಾಗದಲ್ಲಿರುವ ವಿಶಾಲವಾದ ಮೈದಾನದಲ್ಲಿ ರಥೋತ್ಸವ ಜರುಗಲಿದೆ. ರಥಬೀದಿಯಲ್ಲಿ ಸಂಪ್ರದಾಯಿಕವಾಗಿ ಮತ್ತು ಸಾಂಸ್ಕೃತಿಕವಾಗಿ ತೇರು ಸ್ವಾಗತಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಯುವತಿಯರು ಹಾಗೂ ಮಹಿಳೆಯರು ಈ ಬೀದಿಯಲ್ಲಿ ಬಿಡಿಸಿರುವ ವಿವಿಧ ಬಣ್ಣಗಳ ಹಾಗೂ ಕಲಾಕೃತಿಗಳ ರಂಗೋಲಿಯ ಚಿತ್ತಾರ ಇಲ್ಲಿನ ಜನರನ್ನು ಆಕರ್ಷಿಸುತ್ತಿವೆ. ರಥೋತ್ಸವದ ಬಳಿಕ ಮಠದ ಆವರಣದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತೇರು ಅಲಂಕೃತಗೊಂಡಿದೆ.

ADVERTISEMENT

ಬಂದ ಭಕ್ತಾದಿಗಳ ಆತಿಥ್ಯಕ್ಕಾಗಿ ಗವಿಮಠ ಸಿದ್ಧತೆ ಮಾಡಿಕೊಂಡಿದೆ. ರಥೋತ್ಸವದ ಒಂದುವಾರಕ್ಕೂ ಮೊದಲೇ ಗವಿಮಠದ ಆವರಣದಲ್ಲಿ ಜಾತ್ರೆಯ ಸಂಭ್ರಮ ಮನೆ ಮಾಡಿದೆ.

ಒಂದು ವಾರದಿಂದ ತಡರಾತ್ರಿ ಹಾಗೂ ಬೆಳಗಿನ ಜಾವದಿಂದಲೇ ಭಕ್ತರು ಬರುತ್ತಲೇ ಇದ್ದಾರೆ. ಬಾಣಸಿಗರು ಹಗಲಿರುಳು ಎನ್ನದೇ ಬೃಹತ್‌ ಆಕಾರದ ಕೊಪ್ಪರಿಕೆಗಳ ಮುಂದೆ ನಿಂತು ಅನ್ನ ಮಾಡುತ್ತಿದ್ದರು. ಹತ್ತಿದ ಒಲೆಗೆ ವಿರಾಮವಿರಲಿಲ್ಲ. ತಡರಾತ್ರಿ ಬಂದರೂ ಭಕ್ತರಿಗೆ ಊಟದ ಕೊರತೆ ಕಾಡಲಿಲ್ಲ.

ಮನವಿ: ತೇರಿಗೆ ಭಕ್ತರು ಭಕ್ತಿಯಿಂದ ಉತ್ತತ್ತಿ ಅರ್ಪಿಸುವುದು ಸಂಪ್ರದಾಯವಾಗಿದ್ದು, ಬಾಳೆಹಣ್ಣು ಎಸೆಯಬಾರದು ಎಂದು ಗವಿಮಠ ಮನವಿ ಮಾಡಿದೆ.

ಬಾಳೆ ಹಣ್ಣು ಎಸೆಯುವುದರಿಂದ ಜಾತ್ರೆಗೆ ಬರುವ ಲಕ್ಷಾಂತರ ಭಕ್ತರು ಕಾಲು ಜಾರಿ ಬೀಳುವ ಅಪಾಯವಿರುತ್ತದೆ. ಆದ್ದರಿಂದ ಭಕ್ತರು ಬಾಳೆಹಣ್ಣು ಸೇರಿದಂತೆ ಯಾವುದೇ ರೀತಿಯ ಹಣ್ಣುಗಳನ್ನು ಎಸೆಯಬಾರದು ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.