ಅಳವಂಡಿ: ರೈತರ ಜೀವನಾಡಿ, ಈ ಭಾಗದ ಬಹುದಿನಗಳ ಬೇಡಿಕೆ ಆಗಿರುವ ಅಳವಂಡಿ-ಬೇಟಗೇರಿ ಏತ ನೀರಾವರಿ ಯೊಜನೆಯನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಿ ರೈತರಿಗೆ ಅರ್ಪಣೆ ಮಾಡುತ್ತೇವೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಗ್ರಾಮದಲ್ಲಿ ಅಳವಂಡಿ-ಬೇಟಗೇರಿ ಏತನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ ನಿರ್ಮಾಣಕ್ಕೆ ಭೂಮಿ ಕೊಟ್ಟ ರೈತರಿಗೆ ಭೂಸ್ವಾಧೀನದ ಪರಿಹಾರ ಚೆಕ್ ವಿತರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
‘ರೈತರಿಗೆ ಪರಿಹಾರ ಧನದ ಚೆಕ್ ವಿತರಣೆ ಮಾಡುವುದು ವಿಳಂಬ ಆಗಿತ್ತು. ಇಂದು ಇದಕ್ಕೆ ಕಾಲ ಕೂಡಿ ಬಂದಿದೆ’ ಎಂದರು.
‘ಅಳವಂಡಿ-ಬೇಟಗೇರಿ ಏತ ನೀರಾವರಿ ಯೋಜನೆ ಅಡಿಯಲ್ಲಿ ಕಾಲುವೆ, ಉಪಕಾಲುವೆ ನಿರ್ಮಾಣದ ಸಲುವಾಗಿ ಭೂಸ್ವಾಧೀನವಾದ ಕೊಪ್ಪಳ ತಾಲೂಕಿನ ಕವಲೂರು, ಅಳವಂಡಿ, ಹಿರೇಸಿಂದೋಗಿ, ಮೈನಹಳ್ಳಿ, ಬಿಕನಳ್ಳಿ, ಹಂದ್ರಾಳ ಗ್ರಾಮಗಳ 173 ಫಲಾನುಭವಿಗಳಿಗೆ ₹ 8 ಕೋಟಿ 70 ಲಕ್ಷ ಪರಿಹಾರ ಚೆಕ್ ವಿತರಣೆ ಮಾಡಿದರು.
ಕಟ್ಟಡಕ್ಕೆ ಅಡಿಗಲ್ಲು: ಅಳವಂಡಿ ಗ್ರಾಮದ ಸರ್ಕಾರಿ ಪ್ರಥಮ ಕಾಲೇಜಿನ ಆವರಣದಲ್ಲಿ₹ 90 ಲಕ್ಷ ಅನುದಾನದಲ್ಲಿ ನೂತನ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ನೆರವೇರಿಸಿದರು.
ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ತಹಶೀಲ್ದಾರ್ ವಿಠಲ್ ಚೌಗಲೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ, ಗ್ರಾ.ಪಂ ಅಧ್ಯಕ್ಷೆ ಶಂಕ್ರಮ್ಮ ಜೋಗಿನ್, ಉಪಾಧ್ಯಕ್ಷೆ ಶಾರಮ್ಮ ಇಳಗೇರಾ, ಮುಖಂಡರಾದ ಭರಮಪ್ಪ ನಗರ, ಕೃಷ್ಣಾರೆಡ್ಡಿ ಗಲಬಿ, ಗಾಳೆಪ್ಪ ಪೂಜಾರ, ವೆಂಕನಗೌಡ ಹಿರೇಗೌಡ್ರ ಹಾಗೂ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.