
ಅಳವಂಡಿ ಸಮೀಪದ ಕಂಪ್ಲಿ ಗ್ರಾಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಸಿಸಿ ರಸ್ತೆ ನಿರ್ಮಾಣಕ್ಕೆ ಅಡಿಗಲ್ಲು ನೇರವೇರಿಸಿದರು
ಅಳವಂಡಿ: ‘ಈ ಭಾಗದ ಬಹುದಿನಗಳ ಬೇಡಿಕೆಯಾದ ಅಳವಂಡಿ - ಬೆಟಗೇರಿ ಏತ ನೀರಾವರಿ ಯೋಜನೆಯ ಕಾಮಗಾರಿ ಮುಗಿದಿದ್ದು ಕೆಲವೇ ದಿನಗಳಲ್ಲಿ ಟ್ರೈಯಲ್ ರನ್ ಚೆಕ್ ಮಾಡಲಾಗುವುದು’ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ಅಳವಂಡಿ ಜಿ.ಪಂ ವ್ಯಾಪ್ತಿಯಲ್ಲಿ ಕಂಪ್ಲಿ, ಅಳವಂಡಿ, ಗುಡಗೇರಿ ಕವಲೂರು, ಮುರ್ಲಾಪುರ, ಘಟ್ಟಿರೆಡ್ಡಿಹಾಳ, ಬೆಳಗಟ್ಟಿ, ಹಟ್ಟಿ, ಹೈದರ್ ನಗರ, ಕೇಸಲಾಪುರ ಹಾಗೂ ರಘುನಾಥನಹಳ್ಳಿ ಗ್ರಾಮಗಳಲ್ಲಿ ₹3.86 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಲ್ಯಾಣ ಪಥ ಯೋಜನೆಯಡಿ, ಸಿಎಂ ಅವರು ನೀಡಿರುವ ವಿಶೇಷ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಅಳವಂಡಿ, ರಘುನಾಥನಹಳ್ಳಿ, ನಿಲೋಗಿಪುರ ಸೇತುವೆ ನಿರ್ಮಾಣ ಮಾಡಲು ಕ್ರಮವಹಿಸಿದ್ದೇನೆ. ಕ್ಷೇತ್ರದ ಪ್ರತಿ ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ತಂದು ನಾನಾ ಯೋಜನೆಯ ಕೆಲಸಗಳನ್ನು ಕೈಗೆತ್ತಿಕೊಂಡಿದ್ದೇನೆ. ಅಳವಂಡಿಯ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗುವುದು. ಕೆಪಿಎಸ್ ಶಾಲೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಲಾಗುವುದು. ವಿಂಡ್ ಮಿಲ್ ಹಾಗೂ ಸೋಲಾರ್ ಕಂಪನಿಗಳಿಗೆ ಜಮೀನು ನೀಡಬೇಡಿ ಎಂದು ರೈತರಿಗೆ ಮನವಿ ಮಾಡಿದರು.
ಮುಖಂಡರಾದ ಗೂಳಪ್ಪ ಹಲಗೇರಿ, ಕೃಷ್ಣಾರೆಡ್ಡಿ ಗಲಬಿ, ಭರಮಪ್ಪ ನಗರ, ಗಾಳೆಪ್ಪ ಪೂಜಾರ, ಭೀಮಣ್ಣ ಬಚನಹಳ್ಳಿ , ತೋಟಪ್ಪ, ಶಾಹೀದ್, ಮಲ್ಲಪ್ಪ, ಗುರು ಬಸವರಾಜ, ಅನ್ವರ್, ಪರಶುರಾಮ, ಸುರೇಶ, ಗವಿಸಿದ್ದಪ್ಪ ಕರಡಿ, ಮಹಾಂತೇಶ, ನಾಗರಾಜ್, ಹನುಮಂತ, ಪರಶುರಾಮ, ಹೊನ್ನಕೇರಪ್ಪ, ಅಂದಾನಪ್ಪ, ಪಂಪಣ್ಣ, ಹೊನ್ನಪ್ಪಗೌಡ, ನೀಲಪ್ಪ, ನಿಂಗಪ್ಪ, ತೋಟಯ್ಯ, ಅಕ್ಬರ್ , ತಹಸೀಲ್ದಾರ್ ವಿಠಲ್ ಚೌಗಲೆ, ತಾ.ಪಂ ಇಒ ದುಂಡಪ್ಪ ತುರಾದಿ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಇತರರು ಇದ್ದರು.
ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿ, ಮಾರುಕಟ್ಟೆ ಅಭಿವೃದ್ಧಿಪಡಿಸಿ - ರೈತರ ಒತ್ತಾಯ
ರೈತರು ಹೆಚ್ಚಾಗಿ ಮೆಕ್ಕೆಜೋಳ ಬೆಳೆ ಬೆಳೆದಿದ್ದು, ಆದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದ ಕಾರಣ ರೈತರು ಕಷ್ಟದಲ್ಲಿದ್ದಾರೆ.ಮೆಕ್ಕೆಜೋಳ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ಹಾಗೂ ಅಳವಂಡಿ ಗ್ರಾಮದಲ್ಲಿರುವ ಉಪ ಎಪಿಎಂಸಿ ಮಾರುಕಟ್ಟೆಯನ್ನು ರಸ್ತೆ ಸೇರಿದಂತೆ ಅನೇಕ ಮೂಲ ಸೌಕರ್ಯ ಕಲ್ಪಿಸಬೇಕು ಹಾಗೂ ಇಲ್ಲಿನ ರೈತರು ಬೆಳೆದ ಬೆಳೆಯನ್ನು ಒಣಗಿಸಲು ಮೈದಾನ ಇಲ್ಲದ್ದರಿಂದ ಶಾಲಾ ಮೈದಾನವನ್ನು ಉಪಯೋಗಿಸುತ್ತಿದ್ದು, ಇದರಿಂದ ಶಾಲಾ ಕಾಲೇಜು ಮಕ್ಕಳಿಗೆ ತೊಂದರೆಯಾಗಿದೆ ಹಾಗಾಗಿ ಕೂಡಲೇ ಮೈದಾನ ಹಾಗೂ ಉಪ ಎಪಿಎಂಸಿ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡುವಂತೆ ರೈತರು ಆಗ್ರಹಿಸಿದರು. ರೈತರ ಬೇಡಿಕೆಯಂತೆ ಮೆಕ್ಕೆಜೋಳ ಜೋಳ ಬೆಳೆಗೆ ಈಗಾಗಲೇ ಬೆಂಬಲ ಬೆಲೆ ಮಾಡುವಂತೆ ಸಚಿವರಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ. ಕೂಡಲೇ ಬೆಂಬಲ ಬೆಲೆ ಸಿಗಲಿದೆ. ಜೊತೆಗೆ ಉಪ ಮಾರುಕಟ್ಟೆಯನ್ನು ಅಭಿವೃದ್ಧಿ ಮಾಡಲಾಗುವುದು ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.