ಅಳವಂಡಿ: ಅಳವಂಡಿಯಲ್ಲಿ ಬಹುತೇಕ ಮನೆಯಲ್ಲಿ ಕನಿಷ್ಠ ಒಬ್ಬರಾದರೂ ಶಿಕ್ಷಕರು ಇದ್ದಾರೆ. ಒಂದೇ ಮನೆಯಲ್ಲಿ ಐದಾರು ಶಿಕ್ಷಕರಿರುವ ಹಲವು ಕುಟುಂಬಗಳು ಇಲ್ಲಿವೆ. ಅಳವಂಡಿಯಲ್ಲಿ ಎಲ್ಲೇ ನಿಂತು ಒಂದು ಕಲ್ಲನ್ನು ಎಸೆದರೆ, ಅದು ಒಬ್ಬ ಶಿಕ್ಷಕರ ಅಂಗಳದಲ್ಲಿ ಹೋಗಿ ಬೀಳುವದೆಂಬ ಪ್ರತೀತಿ ಇದೆ.
ಕೊಪ್ಪಳ ತಾಲ್ಲೂಕಿನ ಅಳವಂಡಿ ಜಿಲ್ಲೆಯ ದೊಡ್ಡ ಹೋಬಳಿ ಕೇಂದ್ರವಾಗಿ ಗುರುತಿಸಿಕೊಂಡಿದೆ. ಸಾಹಿತ್ಯ, ಕಲೆ, ಸಂಸ್ಕೃತಿ, ಭಾವೈಕ್ಯಕ್ಕೆ ವಿಶಿಷ್ಟ ಕೊಡುಗೆ ನೀಡುತ್ತಾ ಬಂದಿದೆ. ಅದರಂತೆ ಶಿಕ್ಷಣ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ.
1980ರ ದಶಕದಲ್ಲಿ ಪಿಯುಸಿ ನಂತರ ಐಟಿಸಿ ಎಂಬ ಶಿಕ್ಷಕ ವೃತ್ತಿಯ ತರಬೇತಿಯ ಒಂದು ಕೋರ್ಸ್ ಸಮೀಪದ ಗದಗ ಜಿಲ್ಲೆ ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜಿನಲ್ಲಿ ಆರಂಭವಾಗಿತ್ತು. ಹಾಗಾಗಿ ಅಳವಂಡಿಯ ಸಿದ್ದೇಶ್ವರ ಪಿಯು ಕಾಲೇಜಿನಲ್ಲಿ ಶಿಕ್ಷಣ ವಿಷಯದಲ್ಲಿ ಪಿಯುಸಿ ಆಯ್ಕೆ ಮಾಡಿಕೊಂಡು ಓದಿದವರು ಮುಂಡರಗಿಯ ಕೆ.ಆರ್.ಬೆಲ್ಲದ ಕಾಲೇಜಿನಲ್ಲಿ ಐಟಿಸಿ ಶಿಕ್ಷಕ ತರಬೇತಿಯನ್ನು ಮುಗಿಸಿಕೊಂಡು, ಬಳಿಕ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡುತ್ತಿದ್ದರು.
ನಂತರ ಕೆಲ ದಿನಗಳ ಬಳಿಕ ಅಳವಂಡಿಯಲ್ಲಿ ಕೂಡ ಟಿಸಿಎಚ್ ಕಾಲೇಜು ಪ್ರಾರಂಭವಾಯಿತು. ಇದರಿಂದ ಬಡ, ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಲ್ಲಿ ಪ್ರವೇಶ ಅವಕಾಶ ನೀಡಲಾಯಿತು. ಹಾಗಾಗಿ ಅನೇಕರಿಗೆ ಶಿಕ್ಷಕರು ಆಗುವ ಸೌಭಾಗ್ಯ ದೊರೆಯಿತು ಎಂದು ಇಲ್ಲಿನ ಶಿಕ್ಷಕರು ಹೇಳುತ್ತಾರೆ.
ಮಾಹಿತಿ ಪ್ರಕಾರ ರಾಜ್ಯದ ಅನೇಕ ಭಾಗಗಳಲ್ಲಿ ಇಲ್ಲಿಯ ಶಿಕ್ಷಕರು ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಶಿಕ್ಷಕರಾಗಿ, ಉಪನ್ಯಾಸಕರಾಗಿ ಸುಮಾರು 400 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸುಮಾರು 100 ಜನ ಶಿಕ್ಷಕರು ನಿವೃತ್ತರಾಗಿದ್ದಾರೆ.
ಆದರೆ ಇತ್ತೀಚಿನ ದಿನಗಳಲ್ಲಿ ನಡೆದ ಶಿಕ್ಷಕರ ನೇಮಕಾತಿಗಳಲ್ಲಿ ಅಳವಂಡಿ ಗ್ರಾಮದಿಂದ ಕಡಿಮೆ ಸಂಖ್ಯೆಯಲ್ಲಿ ಆಯ್ಕೆಯಾಗಿರುವುದು ನೋವಿನ ಸಂಗತಿ. ಇಂದಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯನ್ನು ಎದುರಿಸುವಲ್ಲಿ ಇಂದಿನ ಪೀಳಿಗೆ ವಿಫಲವಾಗುತ್ತಿದೆ. ಯುವಕರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರ ಸಂಖ್ಯೆ ಕ್ಷೀಣಿಸುತ್ತಿದೆ ಎಂದು ಶಿಕ್ಷಕರೊಬ್ಬರು ಕಳವಳ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.