ADVERTISEMENT

ಅಳವಂಡಿ ಆಸ್ಪತ್ರೆ ಮೇಲ್ದರ್ಜೆಗೆ ಯಾವಾಗ: ಸಾರ್ವಜನಿಕರ ಪ್ರಶ್ನೆ

ಜುನಸಾಬ ವಡ್ಡಟ್ಟಿ
Published 13 ಡಿಸೆಂಬರ್ 2025, 6:59 IST
Last Updated 13 ಡಿಸೆಂಬರ್ 2025, 6:59 IST
ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೋರನೋಟ
ಅಳವಂಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಹೋರನೋಟ   

ಅಳವಂಡಿ: ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಮಾತು ಮಾತಾಗಿಯೇ ಉಳಿದಿದ್ದು, ಹಲವು ವರ್ಷಗಳ ಮೇಲ್ದರ್ಜೆಗೇರುವ ಕನಸು ಇನ್ನೂ ಈಡೇರಿಲ್ಲ.

ಅಳವಂಡಿ ಗ್ರಾಮದಲ್ಲಿ 1998 ರಲ್ಲಿ ಪ್ರಾಥಮಿಕ ಕೇಂದ್ರ ಆರಂಭಿಸಲಾಗಿದ್ದು, ಈ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಳಪಡುವ ಗ್ರಾಮಗಳಾದ ಅಳವಂಡಿ, ಕಂಪ್ಲಿ, ಬೈರಾಪುರ, ಬೋಚನಹಳ್ಳಿ, ಮೋರನಾಳ, ಬಿಕನಳ್ಳಿ, ಮೈನಹಳ್ಳಿ, ಹಂದ್ರಾಳ ಹಾಗೂ ಹಣವಾಳ ಸೇರಿದಂತೆ ಅನೇಕ ಗ್ರಾಮದ ಜನರು ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುತ್ತಾರೆ.

ಗ್ರಾಮೀಣ ಸೇವೆ ಅಡಿಯಲ್ಲಿ ಓರ್ವ ಎಂಬಿಬಿಎಸ್ ವೈದ್ಯಾಧಿಕಾರಿ ಹಾಗೂ ಗುತ್ತಿಗೆ ಆಧಾರದ ಮೇಲೆ ಆಯುಷ್ ವೈದ್ಯಾಧಿಕಾರಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಒಟ್ಟು ಇಲ್ಲಿನ ಹಲವು ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು, ಇನ್ನೂ ಕೆಲವು ಹುದ್ದೆಗಳು ಖಾಲಿ ಇವೆ.

ADVERTISEMENT

ಅಳವಂಡಿಯು ಹೋಬಳಿ ಕೇಂದ್ರವಾಗಿದ್ದು, ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸುವಂತೆ ಕ್ಷೇತ್ರದ ಶಾಸಕರು, ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಇಲ್ಲಿ ಸದ್ಯ ಜ್ವರ, ಕೆಮ್ಮು, ನೆಗಡಿ ಸೇರಿದಂತೆ ಸಣ್ಣ ಪುಟ್ಟ ಕಾಯಿಲೆಗಳಿಗೆ ಮಾತ್ರ ಚಿಕಿತ್ಸೆ ದೊರೆಯುತ್ತದೆ. ಈ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸಿದರೆ ನಾನಾ ಸೌಲಭ್ಯ, ಅಗತ್ಯ ಸಿಬ್ಬಂದಿಗಳು, ಅತ್ಯಾಧುನಿಕ ವೈದ್ಯಕೀಯ ಉಪಕರಣಗಳು, ಮೂಲ ಸೌಕರ್ಯ ದೊರೆತು ಸಾರ್ವಜನಿಕರಿಗೆ ಉತ್ತಮ ಉತ್ತಮ ಸೇವೆ ಸಿಗಲಿದೆ. ಜೊತೆಗೆ ಹೋಬಳಿ ಕೇಂದ್ರದ ವ್ಯಾಪ್ತಿಯ ನಾನಾ ಗ್ರಾಮಗಳ ಜನರಿಗೆ ಅನುಕೂಲವಾಗಲಿದೆ. ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸುವ ಕೆಲಸ‌ ಬೇಗ ಆಗಬೇಕು ಎನ್ನುವುದು ಜನರ ಒತ್ತಾಯವಾಗಿದೆ.‌

ಅಳವಂಡಿ ಪಿಎಚ್‌ಸಿಯನ್ನು ಸಿಎಚ್‌ಸಿ ಮಾಡುವ ಅಗತ್ಯವಿದೆ. ಈಗಾಗಲೇ ಶಾಸಕರಿಗೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಹಲವು ವರ್ಷಗಳ ಈ ಬೇಡಿಕೆಯ ಬಗ್ಗೆ ಮುತುವರ್ಜಿ ವಹಿಸಬೇಕು.
ಗುರು ಬಸವರಾಜ ಹಳ್ಳಿಕೇರಿ ಗ್ರಾ.ಪಂ ಸದಸ್ಯ
ಕೂಡಲೇ ಜನಪ್ರತಿನಿಧಿಗಳು ಕಾಳಜಿ ವಹಿಸಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಬೇಕು. ಇದರಿಂದ ಜನರಿಗೆ ಅನೇಕ ಆರೋಗ್ಯ ಸೇವೆಗಳು ದೊರೆಯುತ್ತವೆ. ಜೊತೆಗೆ ‌ಖಾಯಂ ವೈದ್ಯರ ಅವಶ್ಯಕತೆ ಇದೆ
ಸತೀಶ ಜಾಣಗಾರ ಅಳವಂಡಿ ಗ್ರಾಮಸ್ಥ
ಅಳವಂಡಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಲು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಅಳವಂಡಿ ಸಿಎಚ್‌ಸಿ ಸಮುದಾಯ ಆರೋಗ್ಯ ಕೇಂದ್ರವಾಗುವ ಭರವಸೆ ಇದೆ.
ಡಾ.ರಾಮಾಂಜನೇಯ ಟಿಎಚ್ಒ
‘ಶಾಸಕರು ಗಮನ ಹರಿಸಲಿ’
ಕ್ಷೇತ್ರದ ಶಾಸಕ ರಾಘವೇಂದ್ರ ಹಿಟ್ನಾಳ್ ಅವರಿಗೆ ಹಲವು ಬಾರಿ ಅಳವಂಡಿ ಆಸ್ಪತ್ರೆಯನ್ನು ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಲು ಮನವಿ ಮಾಡಿದ್ದೇವೆ. ಈಗಾಲಾದರೂ ಹೋಬಳಿ ಜನರ ಆರೋಗ್ಯದ ದೃಷ್ಟಿಯಿಂದ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆರಿಸಲು ಶಾಸಕರು ವಿಶೇಷ ಗಮನ ಹರಿಸಬೇಕು ಎನ್ನುತ್ತಾರೆ ಇಲ್ಲಿನ ನಾಗರಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.