ADVERTISEMENT

ಸಿದ್ದೇಶ್ವರ ಮಹಾರಥೋತ್ಸವಕ್ಕೆ ಕ್ಷಣಗಣನೆ

ಮದುವಣಗಿತ್ತಿಯಂತೆ ಸಿಂಗಾರಗೊಂಡ ಅಳವಂಡಿ ಗ್ರಾಮದಲ್ಲಿ ಸಂಭ್ರಮ

ಜುನಸಾಬ ವಡ್ಡಟ್ಟಿ
Published 30 ಜನವರಿ 2026, 5:48 IST
Last Updated 30 ಜನವರಿ 2026, 5:48 IST
ಅಳವಂಡಿ ಸಿದ್ಧೇಶ್ವರ ಜಾತ್ರೆ ಮಹಾರಥೋತ್ಸವ ಅಂಗವಾಗಿ ರಥವನ್ನು ಶೃಂಗರಿಸಲಾಗುತ್ತಿರುವುದು
ಅಳವಂಡಿ ಸಿದ್ಧೇಶ್ವರ ಜಾತ್ರೆ ಮಹಾರಥೋತ್ಸವ ಅಂಗವಾಗಿ ರಥವನ್ನು ಶೃಂಗರಿಸಲಾಗುತ್ತಿರುವುದು   

ಅಳವಂಡಿ: ಅಧ್ಯಾತ್ಮ, ಕೃಷಿ ಮತ್ತು ಸಾಮಾಜಿಕ ಹೋರಾಟಗಳ ಜೊತೆಗೆ ಭಾವೈಕ್ಯತೆಯ ತಾಣವಾಗಿಯೂ ಜನಪ್ರಿಯತೆ ಹೊಂದಿರುವ ಇಲ್ಲಿನ ಆದಿಯೋಗಿ ಸಿದ್ದೇಶ್ವರ ಮಠದ ಜಾತ್ರೆಯು ಶುಕ್ರವಾರ ಹಾಗೂ ಶನಿವಾರ ಜರುಗಲಿದೆ. ಜಾತ್ರೆಯ ವೈಭವದ ರಥೋತ್ಸವಕ್ಕೆ ಕ್ಷಣಗಣನೆ ಪ್ರಾರಂಭವಾಗಿದ್ದು, ಸಾವಿರಾರು ಜನ ರಥ ಎಳೆಯಲು ಸಜ್ಜಾಗಿದ್ದಾರೆ.

ಜಾತ್ರೆಯ ಕಾರಣಕ್ಕಾಗಿ ಸಿದ್ದೇಶ್ವರ ಮಠವನ್ನು ತರಹೇವಾರಿ ಬಣ್ಣಗಳ ವಿದ್ಯುತ್‌ ದೀಪಗಳ ಅಲಂಕಾರದಿಂದ ಮತ್ತು ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಗ್ರಾಮದ ಪ್ರತಿ ಮನೆಗಳಿಗೂ ಸುಣ್ಣ ಬಣ್ಣಗಳನ್ನು ಬಳಿದು ಶೃಂಗಾರ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಿಂದ ಗ್ರಾಮವನ್ನು ಸ್ವಚ್ಛ ಮಾಡಲಾಗಿದ್ದು, ಗ್ರಾಮವು ಜಾತ್ರೆಗೆ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ.

ಸಿದ್ದೇಶ್ವರ ದೇವಸ್ಥಾನ, ಗೋಪುರ, ದ್ವಾರ ಬಾಗಿಲುಗಳಿಗೆ ತಳಿರು ತೋರಣ ಕಟ್ಟಲಾಗಿದೆ. ಮಹಾರಥೋತ್ಸವಕ್ಕೆ ರಥವನ್ನು ಶೃಂಗರಿಸುವ ಕಾರ್ಯ ಭರದಿಂದ ಸಾಗಿತ್ತು. ಅಳವಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಸಜ್ಜಾಗಿದ್ದಾರೆ. ಈಗಾಗಲೇ ಕಳೆದ ಒಂದು ವಾರದಿಂದ ಅಳವಂಡಿ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮದ ಪ್ರಮುಖ ಬೀದಿ ಸೇರಿದಂತೆ ಪ್ರತಿ ವಾರ್ಡ್‌, ಜಾತ್ರೆಯ ಆವರಣದ ಸ್ವಚ್ಚತೆ ಮಾಡಲಾಗಿದೆ. ಕುಡಿಯುವ ನೀರಿಗೆ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ.

ADVERTISEMENT

ಜಿಲೇಬಿ: ಜಾತ್ರೆ ಅಂಗವಾಗಿ ಎರಡು ದಿನಗಳ ಕಾಲ ನಡೆಯಲಿರುವ ಮಹಾ ದಾಸೋಹಕ್ಕೆ ಮಹಿಳಾ ಸಂಘದ ಸದಸ್ಯರು ಶೇಂಗಾ ಹೋಳಿಗೆ ಮತ್ತು ಅಳವಂಡಿ ಹಾಗೂ ತಳಕಲ್ ಗ್ರಾಮದ ಭಕ್ತರಿಂದ ಬೂಂದಿ, ಜಿಲೇಬಿ ಹಾಗೂ ರೊಟ್ಟಿ ತಯಾರಿಸಿ ಮಠಕ್ಕೆ ಸಮರ್ಪಿಸಿದ್ದಾರೆ. ಗ್ರಾಮದ ಸ್ಪಂದನ ಕಿರಿಯ ಪ್ರಾಥಮಿಕ ಶಾಲೆಯ ವತಿಯಿಂದ ಹಾಗೂ ಭಕ್ತರು ರೊಟ್ಟಿ, ದವಸ ಧಾನ್ಯ ಸೇರಿದಂತೆ ನಾನಾ ರೀತಿಯ ಖಾದ್ಯಗಳನ್ನು ಮಠಕ್ಕೆ ನೀಡಿದ್ದಾರೆ. ಗುರುವಾರ ಕೂಡ ಮಹಾದಾಸೋಹದ ಆವರಣವನ್ನು ಸಿದ್ಧತೆ ಮಾಡುವುದು ಕಂಡು ಬಂತು.

ಮಹಾದಾಸೋಹಕ್ಕೆ ಸಿದ್ಧಗೊಂಡಿರುವ ಆವರಣ 
ಅಳವಂಡಿಯ ಸಿದ್ದೇಶ್ವರ ಸಮುದಾಯ ಭವನದಲ್ಲಿ ಮುಂಡರಗಿಯ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಆರೋಗ್ಯ ತಪಾಸಣೆ ಶಿಬಿರ ನಡೆಯಿತು
ನಜುರುದ್ದೀನ್ ಬಿಸರಳ್ಳಿ
ಭರಮಪ್ಪ
ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಠದ ಪೀಠಾಧಿಪತಿ 
ಸಿದ್ದೇಶ್ವರ ಜಾತ್ರೆಯ ಅಂಗವಾಗಿ ಸಾಮೂಹಿಕ ವಿವಾಹ ಧರ್ಮಸಭೆ ಹಾಗೂ ನಾನಾ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಸಿದ್ದೇಶ್ವರ ಮಹಾರಥೋತ್ಸವ ಜರುಗಲಿದ್ದು ಸಹಸ್ರಾರು ಭಕ್ತರು ಭಾಗವಹಿಸಲಿದ್ದಾರೆ.
ಭರಮಪ್ಪ ಬಿಸರಳ್ಳಿ ಗ್ರಾಮದ ಮುಖಂಡ
ಅಳವಂಡಿಯ ಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಜಾತಿ ಭೇದ ಭಾವ ಎನ್ನದೆ ಎಲ್ಲ ಸಮಾಜದ ಜನ ಆಗಮಿಸುತ್ತಾರೆ. ಜೊತೆಗೆ ಸೇವೆ ಸಲ್ಲಿಸುತ್ತಾರೆ. ಸಿದ್ದೇಶ್ವರ ಮಠವು ತನ್ನದೇ ಆದ ಶ್ರೇಷ್ಠ ಇತಿಹಾಸ ಹೊಂದಿದೆ.
ನಜುರುದ್ದೀನ್ ಬಿಸರಳ್ಳಿ ಗ್ರಾಮದ ಮುಖಂಡ

ಮಠದ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸ್ವಾಮೀಜಿ ಅಳವಂಡಿಯ ಸಿದ್ದೇಶ್ವರ ಮಠದ ಪೀಠಾಧಿಪತಿ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಸಾಮಾಜಿಕ ಮತ್ತು ಧಾರ್ಮಿಕ ಕೈಂಕರ್ಯಗಳ ಮೂಲಕ ಈ ಭಾಗದ ನಡೆದಾಡುವ ದೇವರಾಗಿ ಭಕ್ತರ ಮನದಲ್ಲಿ ಉಳಿದಿದ್ದಾರೆ. ಜೊತೆಗೆ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಅವರ ಕ್ರೀಯಾಶೀಲತೆ ಮೂಲಕ ಮಠದಲ್ಲಿ ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರಿಂದ ಮಠಕ್ಕೆ ಹೊಸ ಕಳೆ ತಂದಿದ್ದಾರೆ. ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಯೋಗ ಪಟುಗಳಾಗಿದ್ದು ಆಧ್ಯಾತ್ಮದತ್ತ ಒಲವು ತೋರಿಸುತ್ತಾ ಸಾಧಕರ ನಿರ್ಮಾಣ ಕೇಂದ್ರ ಶಿವಯೋಗಿ ಮಂದಿರದಲ್ಲಿ ಅಷ್ಟಾಂಗ ಯೋಗ ಧ್ಯಾನ ಕೈಗೊಂಡಿದ್ದಾರೆ. ಜ್ಯೋತಿಷ್ಯ ವೇದ ಶಾಸ್ತ್ರಗಳ ಅಧ್ಯಯನ ಮಾಡಿದ್ದಾರೆ. ನಾಡಿನ ಅನೇಕ ಭಾಗದಲ್ಲಿ ಅಧ್ಯಯನ ಮಾಡಿದ್ದಾರೆ.

ಜಾತ್ರೆಯಲ್ಲಿ ಇಂದು ಶುಕ್ರವಾರ ಬೆಳಿಗ್ಗೆ ಸಿದ್ದೇಶ್ವರನಿಗೆ ಮಹಾ ರುದ್ರಾಭಿಷೇಕ ವಿಶೇಷ ಪೂಜೆ ಸರ್ವಧರ್ಮ ಸಾಮೂಹಿಕ ವಿವಾಹ ಹಾಗೂ ಧರ್ಮಸಭೆ ನಡೆಯಲಿದೆ. ಧರ್ಮಸಭೆಯಲ್ಲಿ ಮಾನಿಹಳ್ಳಿ ಪುರವರ್ಗ ಮಠದ ಮಳೆಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಹಿರೇಸಿಂದೋಗಿ ಕಪ್ಪತಮಠದ ಚಿದಾನಂದ ಸ್ವಾಮೀಜಿ ಅಳವಂಡಿಯ ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹಿರೇಹಡಗಲಿ ಹಾಲಸ್ವಾಮಿ ಮಠದ ಶಿವಯೋಗಿ ಹಾಲಸ್ವಾಮೀಜಿ ಕುಷ್ಟಗಿಯ ಸದಾನಂದ ಮಹಾರಾಜರು ಕೂಲಹಳ್ಳಿಯ ಪಟ್ಟದ ಚಿನ್ಮಯ ಸ್ವಾಮೀಜಿ ಹಾಗೂ ನಾಡಿನ ಮಠಾಧೀಶರು ರಾಜಕೀಯ ಧುರೀಣರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ. ಸಂಜೆ 4.30ಕ್ಕೆ ಸಿದ್ದೇಶ್ವರ ಧ್ವಜ ಲೀಲಾವು ಶ್ರೀಗಳಿಂದ ಹಾಗೂ ಮುಖ್ಯ ಅತಿಥಿಗಳಿಂದ ಧ್ವಜಾರೋಹಣ ಸಂಜೆ 5.30ಕ್ಕೆ  ಸಿದ್ದೇಶ್ವರ ಮಹಾರಥೋತ್ಸವ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.