ಕೊಪ್ಪಳ: ಪ್ರೀತಿ ವಿಚಾರಕ್ಕಾಗಿ ಇಲ್ಲಿನ ಬಹದ್ದೂರ್ ಬಂಡಿ ರಸ್ತೆಯಲ್ಲಿರುವ ನದಿಮುಲ್ಲಾ ಖಾದ್ರಿ ಮಸೀದಿ ಮುಂಭಾಗದಲ್ಲಿ ಭಾನುವಾರ ರಾತ್ರಿ ಕೊಲೆಗೀಡಾದ ಕುರುಬರ ಓಣಿಯ ನಿವಾಸಿಯಾಗಿದ್ದ ಗವಿಸಿದ್ದಪ್ಪ ನಾಯಕನ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ.
ಒಟ್ಟು ನಾಲ್ಕು ಜನ ಸೇರಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಎಲ್ಲ ಆರೋಪಿಗಳ ಬಂಧನದ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ.
ಪ್ರತಿಭಟನೆ: ಗವಿಸಿದ್ಧಪ್ಪನ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಮೃತ ಯುವಕನ ಪೋಷಕರು ಹಾಗೂ ಸಂಬಂಧಿಕರು ಇಲ್ಲಿನ ಅಶೋಕ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.
ಕೆಲವು ವರ್ಷಗಳ ಹಿಂದೆ ನಗರದಲ್ಲಿ ಗವಿಸಿದ್ದಪ್ಪ ಮತ್ತು ಮುಸ್ಲಿಂ ಬಾಲಕಿ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಚಾರವಾಗಿ ಎರಡೂ ಸಮುದಾಯಗಳ ಹಿರಿಯರು ರಾಜೀ ಸಂಧಾನ ಮಾಡಿಸಿದ್ದರು. ಕೊಲೆ ಆರೋಪ ಹೊತ್ತು ಸಾಧಿಕ್ ಕೋಲ್ಕಾರ ಎಂಬಾತ ನಗರ ಪೊಲೀಸ್ ಠಾಣೆಗೆ ಶರಣಾಗಿದ್ದು, ಉಳಿದ ಆರೋಪಿಗಳ ಪತ್ತೆಯೂ ಆಗಿದೆ.
ಸಹೋದರಿಯರ ಆಕ್ರಂದನ: ಒಬ್ಬನೇ ತಮ್ಮನಾಗಿದ್ದ ಗವಿಸಿದ್ಧಪ್ಪನ ಸಾವಿನ ಸುದ್ದಿ ತಿಳಿದು ಸಹೋದರಿಯರು ಮಮ್ಮಲ ಮರಗಿದರು.
ಜಿಲ್ಲಾಸ್ಪತ್ರೆಯಲ್ಲಿದ್ದ ಗವಿಸಿದ್ದಪ್ಪ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ನಗರದ ಕುರುಬರ ಓಣಿಯ ಮನೆಗೆ ತಂದಾಗ ಸಹೋದರಿಯರು ‘ಹಿಂದೂ ಯುವಕ ಮುಸ್ಲಿಂ ಯುವತಿಯನ್ನು ಪ್ರೀತಿಸಬಾರದಾ?. ನಾವು ಹಿಂದೂ ಆಗಿ ಹುಟ್ಟಿದ್ದೇ ತಪ್ಪಾ? ಇಬ್ಬರೂ ಸೇರಿಯೇ ಪ್ರೀತಿ ಮಾಡಿದ್ದಾರೆ. ಆದರೆ ನನ್ನ ತಮ್ಮನನ್ನ ಮಾತ್ರ ಕೊಲೆ ಮಾಡಲಾಗಿದೆ. ನಮಗೆ ಏನೂ ಬೇಡ. ನನ್ನ ತಮ್ಮನನ್ನು ವಾಪಸ್ ತಂದುಕೊಡಿ’ ಎಂದು ಕಣ್ಣೀರಿಟ್ಟರು.
ಮನೆಯ ಬಳಿ ಮೃತದೇಹ ತರುತ್ತಿದ್ದಂತೆಯೇ ಗವಿಸಿದ್ಧಪ್ಪನ ಪೋಷಕರು, ಮೂವರು ಸಹೋದರಿಯರು, ಸಂಬಂಧಿಗಳ ದುಃಖದ ಕಟ್ಟೆ ಒಡೆಯಿತು. ಪೊಲೀಸ್ ಬಂದೋಬಸ್ತ್ ನಡುವೆ ಆಂಬುಲೆನ್ಸ್‌ನಲ್ಲಿ ಮೃತದೇಹ ತಂದು ಗವಿಮಠದ ಹಿಂಭಾಗದ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಪ್ರತಿಭಟನೆ: ಅಂತ್ಯಕ್ರಿಯೆ ಮುಗಿಸಿ ಸ್ಮಶಾನದಿಂದ ನೇರವಾಗಿ ನಗರದ ಅಶೋಕ ವೃತ್ತದಲ್ಲಿ ಕುಟುಂಬಸ್ಥರು ದಿಢೀರ್ ಪ್ರತಿಭಟನೆ ನಡೆಸಿ ‘ಸರ್ಕಾರ, ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು. ಮುಸ್ಲಿಂ ಬಾಲಕಿಯನ್ನು ಪ್ರೀತಿಸಿದ್ದಕ್ಕೆ ಕೊಲೆಯ ಶಿಕ್ಷೆಯೇ?’ ಎಂದು ಪ್ರಶ್ನಿಸಿದರು. ಪೊಲೀಸರು ಕುಟುಂಬದವರನ್ನು ಮನವೊಲಿಸಿ ವಾಪಸ್ ಕಳಿಸಿದರು.
ರಾಜಕೀಯ ನಾಯಕರ ಭೇಟಿ: ಕೊಲೆಯಾದ ಯುವಕನ ಮನೆಗೆ ಜೆಡಿಎಸ್ ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ರಾಜು ನಾಯಕ, ನಗರಾಧ್ಯಕ್ಷ ಸೋಮನಗೌಡ ವಗರನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸೂಗೂರು, ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಹೊರತಟ್ನಾಳ, ರಮೇಶ ಕುಣಿಕೇರಿ ಭೇಟಿ ನೀಡಿ ಸಾಂತ್ವನ ಹೇಳಿದರು.
ನಗರದ ಸರ್ಕಾರಿ ಜಿಲ್ಲಾಸ್ಪತ್ರೆಯ ಹಿಂಭಾಗದ ಆವರಣಕ್ಕೆ ಸೋಮವಾರ ಶಾಸಕ ರಾಘವೇಂದ್ರ ಹಿಟ್ನಾಳ ಭೇಟಿ ನೀಡಿ ಯುವಕ ಗವಿಸಿದ್ದಪ್ಪ ನಾಯಕನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ಹಿಂದೂಗಳನ್ನು ಗುರಿಯಾಗಿಸಿ ಕೊಲೆ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದೆ ಬಹದ್ದೂರ್ ಬಂಡಿ ಗ್ರಾಮದಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆಯಾದಾಗ ಪಿಎಸ್ಐಗೆ ಕರೆ ಮಾಡಿ ಹೇಳಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಪ್ರತಾಪ್ ಹಿಂದೂ ಸಂಘಟನೆ ಕಾರ್ಯಕರ್ತ
ಕೊಲೆ ಆರೋಪಿಗಳನ್ನು ಬಂಧಿಸಬೇಕು. ಕೊಪ್ಪಳದ ಕೆಲಸ ಕಾಂಗ್ರೆಸ್ ಪ್ರಮುಖರು ಆರೋಪಿಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದಾರೆ. ರಾಜ್ಯಾಧ್ಯಕ್ಷರ ಜೊತೆ ಚರ್ಚಿಸಿ ದೊಡ್ಡಮಟ್ಟದಲ್ಲಿ ಹೋರಾಟ ನಡೆಸಲಾಗುವುದು.ಬಸವರಾಜ ದಢೇಸೂಗೂರು ಬಿಜೆಪಿ ಜಿಲ್ಲಾಧ್ಯಕ್ಷ
ಮಧ್ಯರಾತ್ರಿಯೇ ವರ್ತಿಕಾ ಕಟಿಯಾರ್ ಭೇಟಿ:
ಬಳ್ಳಾರಿ ವಲಯದ ಐಜಿಪಿ ವರ್ತಿಕಾ ಕಟಿಯಾರ್ ಸೋಮವಾರ ಮಧ್ಯರಾತ್ರಿಯೇ ಕೊಪ್ಪಳಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕೊಲೆ ಆರೋಪಿ ಸಾಧಿಕ್ ಕೋಲ್ಕಾರ್ ಜೊತೆ ಮಾತನಾಡಿ ಬಳಿಕ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.ಗವಿಸಿದ್ದಪ್ಪ ನಾಯಕ ಅವರ ತಂದೆ ನಿಂಗಜ್ಜ ಸೇರಿ ಕುಟುಂಬಸ್ಥರನ್ನು ನಗರಠಾಣೆಗೆ ಕರೆಯಿಸಿ ಮಾತನಾಡಿದರು.
'ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದ್ದಕ್ಕೆ ಕೊಲೆ’:
ಕೊಲೆಗೀಡಾದ ಗವಿಸಿದ್ಧಪ್ಪ ತಂದೆ ನಿಂಗಪ್ಪ ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ‘ನನ್ನ ಮಗ ಮುಸ್ಲಿಂ ಹುಡುಗಿಯನ್ನು ಪ್ರೀತಿಸಿ ಆಕೆಯನ್ನೇ ಮದುವೆಯಾಗಲು ಇಚ್ಛಿಸಿದ್ದ. ಕೊಲೆ ಆರೋಪಿ ಸಾಧಿಕ್ ಹುಸೇನ್ ಕೋಲ್ಕಾರ್ ತನ್ನ ಜೊತೆ ಮೂರು ಜನರನ್ನು ಕರೆದುಕೊಂಡು ಎರಡು ಮಚ್ಚುಗಳಿಂದ ಕುತ್ತಿಗೆಗೆ ಹೊಡೆದು ಸಾಯಿಸಿದ್ದಾರೆ’ ಎಂದು ತಿಳಿಸಿದ್ದಾರೆ. ಎಫ್‌ಐಆರ್ ದಾಖಲಾಗಿದೆ.
ಕೃತ್ಯಕ್ಕೂ ಮುನ್ನ ರೀಲ್ಸ್:
ಶರಣಾದ ಆರೋಪಿ ಸಾಧಿಕ್ ಕೃತ್ಯ ಎಸಗುವ ಕೆಲ ದಿನಗಳ ಮೊದಲು ಕೈಯಲ್ಲಿ ಮಚ್ಚು ಹಿಡಿದುಕೊಂಡು ರೀಲ್ಸ್ ಮಾಡಿದ್ದ ಎನ್ನಲಾದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಎಸ್.ಪಿ. ರಾಮ್ ಎಲ್. ಅರಸಿದ್ಧಿ ಅವರು ’ವಿಡಿಯೊವನ್ನು ಪರಿಶೀಲಿಸಲಾಗಿದೆ. ಅಗತ್ಯಬಿದ್ದರೆ ತನಿಖೆ ವೇಳೆ ಅದರ ಬಗ್ಗೆಯೂ ವಿಚಾರಣೆ ನಡೆಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.