ಕೊಪ್ಪಳ: ರಾಯಚೂರಿನಿಂದ ಕೊಪ್ಪಳ ಜಿಲ್ಲೆ ಪ್ರತ್ಯೇಕವಾಗಿ 25 ವರ್ಷಗಳು ಪೂರ್ಣಗೊಂಡರೂ ಜಿಲ್ಲೆಗೆ ಪ್ರತ್ಯೇಕ ಅಂಚೆ ವಿಭಾಗೀಯ ಕಚೇರಿ ಇರಲಿಲ್ಲ. ಈ ಕಚೇರಿಯನ್ನು ಮಂಜೂರು ಮಾಡುವಂತೆ ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಬೇಡಿಕೆಗೆ ಕೊನೆಗೂ ಮನ್ನಣೆ ಸಿಕ್ಕಿದೆ.
ಗದಗ ವಿಭಾಗೀಯ ಅಂಚೆ ಕಚೇರಿಯಿಂದ ಕೊಪ್ಪಳ ಜಿಲ್ಲೆಯನ್ನು ವಿಭಜಿಸಲಾಗಿದ್ದು ಜಿಲ್ಲೆಗೆ ಹೊಸ ವಿಭಾಗೀಯ ಕಚೇರಿಗೆ ಆರಂಭಿಸಲು ಅನುಮತಿ ನೀಡಿ ಅಂಚೆ ಇಲಾಖೆಯ ನಿರ್ದೇಶನಾಲಯ ಬುಧವಾರ ಆದೇಶ ಹೊರಡಿಸಿದೆ. ಇದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ. ಇದರಿಂದಾಗಿ ಅಂಚೆ ಗ್ರಾಹಕರು ಹಾಗೂ ನೌಕರರ ಖುಷಿ ಹೆಚ್ಚಿದೆ.
ಕಲ್ಯಾಣ ಕರ್ನಾಟಕ ವ್ಯಾಪ್ತಿಯ ಜಿಲ್ಲೆಗಳ ನೌಕರರು ಮತ್ತು ಸಿಬ್ಬಂದಿ ಗದಗ ವಿಭಾಗದ ಅಡಿಯಲ್ಲಿ ಕೆಲಸ ಮಾಡಬೇಕಾದ ಅನಿವಾರ್ಯತೆಯಿದ್ದ ಕಾರಣ ಅವರಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ವರ್ಗಾವಣೆಯಾದಾಗ ಸಮಸ್ಯೆಯಾಗುತ್ತಿತ್ತು. ಗ್ರಾಹಕರು ತಮ್ಮ ಸಮಸ್ಯೆಗಳನ್ನು ಅಥವಾ ದೂರುಗಳನ್ನು ಹೇಳಿಕೊಳ್ಳಲು ಗದಗ ವಿಭಾಗೀಯ ಕಚೇರಿಗೆ ಹೋಗಬೇಕಾದ ಅನಿವಾರ್ಯತೆಯಿತ್ತು. ವಿಮಾ ನಗದೀಕರಣ ಕಾರ್ಯವೂ ಇನ್ನು ಮುಂದೆ ಸುಲಭವಾಗಲಿದೆ.
ಕೊಪ್ಪಳದಲ್ಲಿ ಅಂಚೆ ವಿಭಾಗೀಯ ಕಚೇರಿ ಒಂದು ಅಥವಾ ಒಂದೂವರೆ ತಿಂಗಳ ಅವಧಿಯಲ್ಲಿ ಕಾರ್ಯಾರಂಭ ಮಾಡಲಿದೆ. ಕೊಪ್ಪಳದಲ್ಲಿ ಹೊಸ ಕಟ್ಟಡ, ಕೊಪ್ಪಳ ವಿಭಾಗಕ್ಕೆ ಸಂಬಂಧಿಸಿದ ಕಡತಗಳನ್ನು ಗದಗ ವಿಭಾಗದಿಂದ ಪಡೆದುಕೊಳ್ಳುವುದು, ಅಧಿಕಾರಿಗಳ ವರ್ಗಾವಣೆ ಮತ್ತು ವಿಭಾಗೀಯ ಕಚೇರಿಗಳ ಸಾಫ್ಟ್‌ವೇರ್‌ಗಳ ಅಪ್‌ಡೇಟ್ ಸೇರಿದಂತೆ ಹಲವು ತಾಂತ್ರಿಕ ಕೆಲಸಗಳು ಆಗಬೇಕಾಗಿವೆ. ಇವುಗಳಿಗೆ ಗರಿಷ್ಠ ಒಂದೂವರೆ ತಿಂಗಳು ಬೇಕಾಗಬಹುದು ಎಂದು ಅಂಚೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ.
ಜಿಲ್ಲೆಯಲ್ಲಿ ಕೊಪ್ಪಳ, ಕುಷ್ಟಗಿ ಮತ್ತು ಗಂಗಾವತಿ ಅಂಚೆ ಉಪವಿಭಾಗಗಳು ಇದ್ದು, 34 ಉಪ ಅಂಚೆ ಕಚೇರಿಗಳು ಮತ್ತು 185 ಗ್ರಾಮೀಣ ಶಾಖಾ ಅಂಚೆ ಕಚೇರಿಗಳು ಇವೆ. ಇವುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಮತ್ತು ಗ್ರಾಹಕರಿಗೆ ಇನ್ನು ಮುಂದೆ ತಮ್ಮ ಜಿಲ್ಲೆಯಲ್ಲಿಯೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವಕಾಶ ಲಭಿಸಿದೆ.
ಧಾರವಾಡ ವಿಭಾಗದ ವ್ಯಾಪ್ತಿಯಲ್ಲಿದ್ದ ಗದಗವನ್ನು 1980ರಲ್ಲಿ ಪ್ರತ್ಯೇಕ ವಿಭಾಗವನ್ನಾಗಿ ಮಾಡಲಾಯಿತು. 1997ರಲ್ಲಿ ಕೊಪ್ಪಳ ಪ್ರತ್ಯೇಕ ಜಿಲ್ಲೆಯಾದರೂ 2003ರ ಅಕ್ಟೋಬರ್ 1ರಂದು ಕೊಪ್ಪಳ ಜಿಲ್ಲೆಯನ್ನು ಗದಗ ವಿಭಾಗಕ್ಕೆ ಸೇರ್ಪಡೆ ಮಾಡಲಾಯಿತು. ಈ ಜಿಲ್ಲೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿದ್ದರೂ ಮುಂಬೈ ಕರ್ನಾಟಕ ವ್ಯಾಪ್ತಿಯ ಗದಗ ಜಿಲ್ಲೆಗೆ ಅಂಚೆ ವಿಭಾಗವನ್ನು ಸೇರಿಸಿದ್ದು ಜಿಲ್ಲೆಯ ಜನರ ಬೇಸರಕ್ಕೂ ಕಾರಣವಾಗಿತ್ತು. ಆದ್ದರಿಂದ ಅನೇಕ ವರ್ಷಗಳಿಂದ ಪ್ರತ್ಯೇಕ ವಿಭಾಗಕ್ಕೆ ಬೇಡಿಕೆಯಿತ್ತು. ಅದು ಈಗ ಈಡೇರಿದೆ.
ಮಹತ್ವದ ಹೆಜ್ಜೆ: ಸಂಸದ ಸಂಗಣ್ಣ ಕರಡಿ
ಕೊಪ್ಪಳದಲ್ಲಿ ಅಂಚೆ ವಿಭಾಗೀಯ ಕಚೇರಿ ಆರಂಭಿಸಬೇಕು ಎಂದು ಸಂಸದನಾದ ಮೊದಲ ದಿನದಿಂದಲೂ ಮಾಡಿದ ಪ್ರಯತ್ನಕ್ಕೆ ಈಗ ಫಲ ಲಭಿಸಿದೆ. ವಿಭಾಗೀಯ ಕಚೇರಿ ಮಾಡಲು ಒಂದಷ್ಟು ಮಾನದಂಡಗಳಿದ್ದವು. ಅವುಗಳಿಗೆ ಅನುಗುಣವಾಗಿ ಮಾನದಂಡ ಪೂರೈಸಲಾಗಿದೆ. ಈಗ ವಿಭಾಗೀಯ ಕಚೇರಿ ಮಂಜೂರು ಮಾಡಿದ್ದು ಖುಷಿ ನೀಡಿದೆ ಎಂದು ಸಂಸದ ಸಂಗಣ್ಣ ಕರಡಿ ಪ್ರತಿಕ್ರಿಯಿಸಿದ್ದಾರೆ. ‘ನಮ್ಮ ಜಿಲ್ಲೆ ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿರುವ ಕಾರಣ ಅಂಚೆ ನೌಕರರಿಗೆ ಸೌಲಭ್ಯಗಳನ್ನು ಪಡೆದುಕೊಳ್ಳಲು ಮೊದಲು ತಾಂತ್ರಿಕವಾಗಿ ತೊಂದರೆಗಳಿದ್ದವು. ಈಗ ಅವೆಲ್ಲವೂ ಪರಿಹಾರವಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕೊಪ್ಪಳಕ್ಕೆ ಪ್ರತ್ಯೇಕ ಅಂಚೆ ವಿಭಾಗೀಯ ಕಚೇರಿ ಮಂಜೂರಾಗಿದ್ದಕ್ಕೆ ಖುಷಿಯಿದೆ. ಗರಿಷ್ಠ ಒಂದೂವರೆ ತಿಂಗಳಲ್ಲಿ ಎಲ್ಲ ಪ್ರಕ್ರಿಯೆ ಪೂರ್ಣಗೊಳ್ಳಲಿವೆ.ಮಹಾಂತೇಶ ತೊಗರಿ, ಅಂಚೆ ನಿರೀಕ್ಷಕರು ಕೊಪ್ಪಳ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.