ಅಳವಂಡಿ: ಸಮೀಪದ ಬೆಟಗೇರಿ ಗ್ರಾಮದ ಒಂದನೇ ಅಂಗನವಾಡಿ ಕೇಂದ್ರವು ಶೌಚಾಲಯ, ಕುಡಿಯುವ ನೀರು, ವಿದ್ಯುತ್ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ.
ಬೆಟಗೇರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಈ ಅಂಗನವಾಡಿ ಕೇಂದ್ರವು 16 ಮಕ್ಕಳು ಮತ್ತು ಬಾಣಂತಿಯರು, ಗರ್ಭಿಣಿಯರು ಸೇರಿ 42 ಜನರ ದಾಖಲಾತಿ ಹೊಂದಿದೆ.
ಆದರೆ ಕಳೆದ ನಾಲ್ಕೈದು ತಿಂಗಳಿನಿಂದ ಮಕ್ಕಳಿಗೆ ಅಡುಗೆ ಮಾಡಲು ಹಾಗೂ ಕುಡಿಯಲು ನೀರು ಇಲ್ಲದ ಪರಿಣಾಮ ಅಂಗನವಾಡಿ ಸಹಾಯಕಿ ಬೇರೆ ಕಡೆಯಿಂದ ಅಥವಾ ಮನೆಯಿಂದ ತಂದು ವ್ಯವಸ್ಥೆ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಕುಡಿಯಲು ಮನೆಯಿಂದಲೂ ನೀರು ತರುತ್ತಿದ್ದಾರೆ.
ಉಪಯೋಗಕ್ಕೆ ಬಾರದ ಶೌಚಾಲಯ: ಇಲ್ಲಿನ ಅಂಗನವಾಡಿ ಮಕ್ಕಳಿಗೆ ಶೌಚಾಲಯ ಇದ್ದರೂ ಇಲ್ಲದಂತಾಗಿದೆ. ಶೌಚಾಲಯಕ್ಕೆ ನೀರಿನ ಸೌಲಭ್ಯ ಇಲ್ಲದಂತಾಗಿ ಉಪಯೋಗಕ್ಕೆ ಬಾರದಂತಾಗಿದೆ. ಹಾಗಾಗಿ ಉತ್ತಮ ಶೌಚಾಲಯ ಸೌಲಭ್ಯ ಇಲ್ಲದ ಆವರಣದಲ್ಲಿ ಮೂತ್ರ ವಿಸರ್ಜನೆ ಮಾಡುವ ಸ್ಥಿತಿ ಎದುರಾಗಿದೆ.
ಸ್ವಚ್ಛತೆ ಇಲ್ಲದ ಆವರಣ: ಅಂಗನವಾಡಿ ಕೇಂದ್ರದ ಆವರಣದಲ್ಲಿ ಕಸ ಗಿಡ ಬೆಳೆದಿದ್ದು ಇದರಿಂದ ನಾನಾ ರೋಗಗಳಿಗೆ ಹಾಗೂ ಜಂತು ಹುಳುಗಳ ಆವಾಸ ಸ್ಥಾನವಾಗಿದೆ.
‘ಉತ್ತಮ ಶೌಚಾಲಯ, ನೀರಿನ ವ್ಯವಸ್ಥೆ, ಕುಡಿಯುವ ನೀರು, ಅಂಗನವಾಡಿ ಆವರಣದ ಸ್ವಚ್ಛತಾ ಸೌಲಭ್ಯಗಳನ್ನು ಕಲ್ಪಿಬೇಕಾದ ಇಲ್ಲಿನ ಸ್ಥಳೀಯ ಗ್ರಾಮ ಪಂಚಾಯಿತಿಯು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ’ ಎಂದು ಸ್ಥಳೀಯರು ಆರೋಪಿಸುತ್ತಾರೆ.
ಕೂಡಲೇ ಗ್ರಾಮ ಪಂಚಾಯಿತಿ ಸಿಬ್ಬಂದಿಯನ್ನು ಕಳಿಸಿ ಸ್ವಚ್ಛತೆ ಮಾಡಿಸಲಾಗುವುದು. ನೀರಿನ ವ್ಯವಸ್ಥೆ ಮಾಡಲಾಗುವುದು.– ದಾನಪ್ಪ ಸಂಗಟಿ, ಪಿಡಿಒ ಗ್ರಾ.ಪಂ ಬೆಟಗೇರಿ
ಅಂಗನವಾಡಿ ಕೇಂದ್ರಕ್ಕೆ ಉತ್ತಮ ಮೂಲ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕು.– ನೇತ್ರಾ, ಪಾಲಕರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.