ADVERTISEMENT

ಪ್ರಾಣಿ ವಧೆ: ಕೃಷ್ಣದೇವರಾಯ ಸ್ಮಾರಕಕ್ಕೆ ಭದ್ರತಾ ಸಿಬ್ಬಂದಿ ನಿಯೋಜನೆ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2025, 15:38 IST
Last Updated 21 ಏಪ್ರಿಲ್ 2025, 15:38 IST
   

ಗಂಗಾವತಿ (ಕೊಪ್ಪಳ ಜಿಲ್ಲೆ): ತಾಲ್ಲೂಕಿನ ಆನೆಗೊಂದಿಯಲ್ಲಿರುವ ವಿಜಯನಗರ ಸಾಮ್ರಾಜ್ಯದ ರಾಜ ಶ್ರೀಕೃಷ್ಣದೇವರಾಯನ ಸಮಾಧಿ ಸ್ಮಾರಕದ ಮೇಲೆ (64 ಕಂಬಗಳ ಮಂಟಪ) ಇತ್ತೀಚೆಗೆ ಪ್ರಾಣಿ ವಧೆ ಮಾಡಿದ್ದರಿಂದ ಅಲ್ಲಿನ ಸ್ಥಳವನ್ನು ಸ್ವಚ್ಛಗೊಳಿಸಲಾಗಿದ್ದು, ತಾತ್ಕಾಲಿಕವಾಗಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ರಾಜ್ಯ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆ ಸರ್ಕಾರಕ್ಕೆ ವರದಿ ನೀಡಿದೆ.

ಸ್ಮಾರಕದ ಮೇಲೆ ಪ್ರಾಣಿ ವಧೆ ಮಾಡಿದ ವಿಡಿಯೊ ಸಾಮಾಜಿಕ ತಾಣಗಳಲ್ಲಿ ಹರಿದಾಡಿತ್ತು. ಈ ಕುರಿತು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಕೆ. ವೈಷ್ಣವಿ ಅವರು ಇಲಾಖೆಗೆ ವರದಿ ಕೇಳಿದ್ದರು.

ಇದಕ್ಕೆ ಉತ್ತರಿಸಿರುವ ಇಲಾಖೆಯ ಹಂಪಿಯ ವಿಭಾಗದ ಉಪ ನಿರ್ದೇಶಕ ಆರ್. ಶೇಜೇಶ್ವರ, ‘ಮಾಧ್ಯಮಗಳಲ್ಲಿ ಈ ಕುರಿತು ವರದಿಯಾದ ಬಳಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಆನೆಗೊಂದಿ ಭಾಗದಲ್ಲಿ ಒಟ್ಟು 74 ರಾಜ್ಯ ಸಂರಕ್ಷಿತ ಸ್ಮಾರಕಗಳಿದ್ದು, ಅದರಲ್ಲಿ ಈ ಮಂಟಪವೂ ಒಂದಾಗಿದೆ. ಇದರ ಬಗ್ಗೆ ಸ್ಥಳೀಯ ಜನರಿಗೆ ತಿಳಿವಳಿಕೆ ನೀಡಿ ಮುಂದೆ ಈ ರೀತಿ ಮಾಡದಂತೆ ಸೂಚಿಸಲಾಗಿದೆ. ಹಂಪಿ ಸ್ಮಾರಕಗಳ ಬಳಿ ನೌಕರರನ್ನು ಕಳುಹಿಸಿ ಸ್ವಚ್ಛತೆ ಮಾಡಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಈ ಮಂಟಪದಲ್ಲಿ 64 ಕಂಬಗಳು ವಾಸ್ತುಶಾಸ್ತ್ರದ ಕಲೆಗಳನ್ನು ಪ್ರತಿಬಿಂಬಿಸುತ್ತದೆ. ಕೃಷ್ಣದೇವರಾಯನು ಕಲೆ ಮತ್ತು ಸಾಹಿತ್ಯದ ಮಹಾನ್‌ ಪೋಷಕರಾಗಿದ್ದರಿಂದ ಆತನ ನೆನಪಿಗಾಗಿ ಮಂಟಪ ನಿರ್ಮಿಸಿರಬಹುದು’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.