ADVERTISEMENT

ಅಂಜನಾದ್ರಿ ಅಭಿವೃದ್ಧಿ; ನೀಲನಕ್ಷೆ ವಿಳಂಬ?

ಭೂಮಿ ನೀಡಲು ಹಗ್ಗಜಗ್ಗಾಟ, ಜಿಲ್ಲಾಡಳಿತಕ್ಕೆ ಆಕ್ಷೇಪಣೆ ಸಲ್ಲಿಕೆ

ಪ್ರಮೋದ
Published 17 ಜುಲೈ 2022, 3:16 IST
Last Updated 17 ಜುಲೈ 2022, 3:16 IST
ಅಂಜನಾದ್ರಿ ಬೆಟ್ಟ
ಅಂಜನಾದ್ರಿ ಬೆಟ್ಟ   

ಕೊಪ್ಪಳ: ಗಂಗಾವತಿ ತಾಲ್ಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಂಜನಾದ್ರಿಯ ಅಭಿವೃದ್ಧಿಗೆ ಭೂಮಿ ನೀಡಲು ರೈತರು ಹಾಗೂ ಜಿಲ್ಲಾಡಳಿತದ ನಡುವೆ ಹಗ್ಗಜಗ್ಗಾಟ ನಡೆದಿರುವ ಕಾರಣ ನೀಲನಕ್ಷೆ ವಿಳಂಬವಾಗುವ ಸಾಧ್ಯತೆಯಿದೆ.

ಅಂಜನಾದ್ರಿ ಕ್ಷೇತ್ರದ ಸಮೀಪ ಭೂಮಿ ನೀಡಬೇಕು ಎಂದು ಜಿಲ್ಲಾಡಳಿತ ಹೇಳುತ್ತಿದ್ದರೆ; ನಮ್ಮ ಬೇಡಿಕೆಯಷ್ಟು ಹಣ ನೀಡಿದರೆ ಮಾತ್ರ ಭೂಮಿ ಕೊಡುತ್ತೇವೆ ಎಂದು ರೈತರು ಹೇಳುತ್ತಿದ್ದಾರೆ. ಈ ಕುರಿತು ಚರ್ಚಿಸಲು ಆನೆಗೊಂದಿಯಲ್ಲಿ ನಡೆದ ಎರಡನೇ ಸುತ್ತಿನ ಸಭೆ ವಿಫಲಗೊಂಡಿದೆ. ಹೀಗಾಗಿ ರೈತರ ಮುಂದಿನ ನಡೆ ಏನು ಎನ್ನುವ ಪ್ರಶ್ನೆ ಎದುರಾಗಿದೆ.

ಅಂಜನಾದ್ರಿ ಬೆಟ್ಟದ ಕೆಳಭಾಗದ ಮುಂದಿನ ರಸ್ತೆಯ ವಿಸ್ತರಣೆಯಾಗಿ ಜಮೀನು ನೀಡಲು ರೈತರು ಮುಂದಾಗಿದ್ದಾರೆ. ಆದರೆ, ಉಳಿದ ಅಭಿವೃದ್ಧಿ ಕಾರ್ಯಕ್ಕೆ ಸಮೀಪದಲ್ಲಿಯೇ ಇರುವ ಸರ್ಕಾರಿ ಜಮೀನು ಬಳಸಿಕೊಳ್ಳಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ. ಭೂ ಸ್ವಾಧೀನ ವಿರೋಧಿಸಿ ಆನೆಗೊಂದಿ ಗ್ರಾಮದ ಆರ್‌. ರಮೇಶ್ ಬಾಬು ಎಂಬುವರು ಜಿಲ್ಲಾಡಳಿತಕ್ಕೆ ತಮ್ಮ ಆಕ್ಷೇಪ ಸಲ್ಲಿಸಿದ್ದಾರೆ. ಆಕ್ಷೇಪಣೆಯ ಪ್ರತಿಯನ್ನು ಮುಖ್ಯಮಂತ್ರಿ, ಪ್ರವಾಸೋದ್ಯಮ ಸಚಿವ ಮತ್ತು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೂ ರವಾನಿಸಿದ್ದಾರೆ.

ADVERTISEMENT

ಅಂಜನಾದ್ರಿ ಮಾತ್ರ ಕೇಂದ್ರೀಕೃತ ಮಾಡದೆ ನವ ವೃಂದಾವನ ಹಾಗೂ ಇತರ ಐತಿಹಾಸಿಕ ಸ್ಥಳಗಳನ್ನು ಅಭಿವೃದ್ಧಿ ಮಾಡಬೇಕು. ಆನೆಗೊಂದಿ ಗ್ರಾಮ ವ್ಯಾಪ್ತಿಯಲ್ಲಿ ಬರುವ ತಳವಾರಘಟ್ಟದ ಬಳಿ ಯಾತ್ರಿ ನಿವಾಸ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳನ್ನು ಕಲ್ಪಿಸಿದರೆ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗುತ್ತದೆ ಎನ್ನುವುದು ರೈತರ ವಾದ.

ಇದನ್ನು ಜಿಲ್ಲಾಡಳಿತ ಸ್ಪಷ್ಟವಾಗಿ ನಿರಾಕರಿಸಿದ್ದು, ‘ಸರ್ಕಾರ ಸೂಚಿಸಿದ ಜಾಗದಲ್ಲಿಯೇ ಭೂ ಸ್ವಾಧೀನ ಮಾಡಲಾಗುತ್ತದೆ. ಎರಡ್ಮೂರು ದಿನಗಳಲ್ಲಿ ನೋಟಿಸ್ ಜಾರಿ ಮಾಡಲಾಗುವುದು‘ ಜಿಲ್ಲಾಧಿಕಾರಿ ವಿಕಾಸ್‌ ಕಿಶೋರ ಸುರಳ್ಕರ್‌ ಹೇಳಿದ್ದಾರೆ.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಂಜನಾದ್ರಿ ಸಮೀಪದಲ್ಲಿ ಭೂಮಿ ಹೊಂದಿರುವ ರೈತ ಪ್ರಶಾಂತ ‘ತಳವಾರಘಟ್ಟ ಬಳಿ ಇರುವ ಭೂಮಿ ಬಳಸಿಕೊಂಡರೆ ಅಲ್ಲಿ ಯಥೇಚ್ಛವಾಗಿ ನೀರು ಸಿಗುತ್ತದೆ. ಅಂಜನಾದ್ರಿಯಲ್ಲಿನ ಕೃಷಿ ಭೂಮಿ ಬದಲು ಖಾಲಿ ಭೂಮಿ ಬಳಸಿಕೊಳ್ಳಿ ಎಂದು ಹೇಳಿದರೂ ಜಿಲ್ಲಾಡಳಿತ ಕೇಳುತ್ತಿಲ್ಲ. ಇದಕ್ಕೆ ಈಗಾಗಲೇ ನನ್ನ ತಂದೆ ಅಕ್ಷೇಪ ಸಲ್ಲಿಸಿದ್ದಾರೆ’ ಎಂದು ತಿಳಿಸಿದರು.

ಕಿಷ್ಕಿಂದ ಕ್ಷೇತ್ರ ಸಂರ‍್ಷಕ್ಷಣಾ ಸಮಿತಿ ಸದಸ್ಯ ಸುದರ್ಶನ ವರ್ಮ ಪ್ರತಿಕ್ರಿಯಿಸಿ ‘ಸರ್ಕಾರದ ನಿಯಮದ ಪ್ರಕಾರ ಅಭಿವೃದ್ಧಿ ಕಾರ್ಯಕ್ಕೆ ಭೂಮಿ ಬಿಟ್ಟುಕೊಡಬೇಕು. ಆದರೆ, ಸರ್ಕಾರ ಕೊಡುವ ಪರಿಹಾರದ ಮೊತ್ತದಲ್ಲಿ ನಮ್ಮ ಭಾಗದಲ್ಲಿ ಭೂಮಿ ಖರೀದಿಸಲು ಆಗುವುದಿಲ್ಲ. ರಸ್ತೆ ವಿಸ್ತರಣೆಗೆ ಮಾತ್ರ ಭೂಮಿ ಕೊಡುತ್ತೇವೆ. ಉಳಿದ ಕಡೆ ನಮ್ಮ ಸಮ್ಮತಿಯಿಲ್ಲ’ ಎಂದರು.

‘ಸತ್ಯ ಶೋಧನಾ ಸಮಿತಿ ರಚಿಸಲಿ’

ಕೊಪ್ಪಳ: ‘ಅಂಜನಾದ್ರಿ ಬೆಟ್ಟದ ಸುತ್ತಮುತ್ತಲಿನ ಪರಿಸ್ಥಿತಿ, ಇರುವ ಅನಾನುಕೂಲಗಳ ಬಗ್ಗೆ ಅರಿತುಕೊಳ್ಳಲು ಸರ್ಕಾರ ಸತ್ಯ ಶೋಧನಾ ಸಮಿತಿ ರಚಿಸಬೇಕು’ ಎಂದು ಕಿಷ್ಕಿಂದ ಕ್ಷೇತ್ರ ಸಂರಕ್ಷಣಾ ಸಮಿತಿ ಸದಸ್ಯ ಸುದರ್ಶನ ವರ್ಮ ಆಗ್ರಹಿಸಿದ್ದಾರೆ.

‘ಕ್ಷೇತ್ರದ ಅಭಿವೃದ್ಧಿಗೆ ನಮ್ಮ ವಿರೋಧವಿಲ್ಲ. ಆದರೆ, ಪ್ರವಾಹ ಬಂದಾಗ ಬೆಟ್ಟದ ಕೆಳಗಿನ ಹೊಲಗಳಿಗೆ ನೀರು ನುಗ್ಗುತ್ತದೆ. ಅಭಿವೃದ್ಧಿಗೆ ಪೂರಕವಲ್ಲದ ಜಾಗ ಎಂದು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡಲಾಗಿದೆ. ಆದ್ದರಿಂದ ಸಮಿತಿ ರಚಿಸಿ ಸ್ಥಳೀಯರನ್ನು ಹಾಗೂ ರೈತರನ್ನು ಸೇರ್ಪಡೆ ಮಾಡಬೇಕು. ಬಳಿಕ ಮುಂದಿನ ಯೋಜನೆ ರೂಪಿಸಬೇಕು’ ಎಂದರು.

ತುಂಡು ಭೂಮಿ ರೈತರ ಸಮಸ್ಯೆ

ಕೊಪ್ಪಳ: ಉದ್ದೇಶಿತ ಭೂ ಸ್ವಾಧೀನಕ್ಕೆ ಸರ್ಕಾರ ಗುರುತಿಸಿರುವ ಜಾಗದಲ್ಲಿ ಹಲವು ರೈತರು ಒಂದು ಎಕರೆಗಿಂತಲೂ ಕಡಿಮೆ ಭೂಮಿ ಹೊಂದಿದ್ದಾರೆ. ಅರ್ಧ ಭೂಮಿ ಸರ್ಕಾರಕ್ಕೆ ಹೋದರೆ; ಉಳಿಯುವ ಇನ್ನರ್ಧ ಭೂಮಿ ಉಳಿಸಿಕೊಂಡು ಏನು ಮಾಡಬೇಕು? ಎನ್ನುವುದು ಆ ರೈತರ ಪ್ರಶ್ನೆಯಾಗಿದೆ.

ತುಂಡು ಭೂಮಿ ಹೊಂದಿರುವ ರೈತರ ಪೈಕಿ ಕೆಲವರು ಈಗಾಗಲೇ ಸಾಲ ಮಾಡಿಕೊಂಡಿದ್ದಾರೆ. ಸರ್ಕಾರದಿಂದ ಬರುವ ಪರಿಹಾರದ ಹಣದಲ್ಲಿ ಸಾಲ ತೀರಿಸಿ ಕುಟುಂಬ ನಿರ್ವಹಣೆಗೆ ಹಣ ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಅವರಿಗೆ ಎದುರಾಗಿದೆ. ಸ್ವಂತ ಭೂಮಿ ಕಳೆದುಕೊಂಡು ಮತ್ತೆ ಕಾರ್ಮಿಕರಾಗಿ ದುಡಿಯಬೇಕಾದ ಪರಿಸ್ಥಿತಿ ಎದುರಾಗುವ ಆತಂಕ ಅವರನ್ನು ಕಾಡುತ್ತಿದೆ.

***

ಭೂ ಸ್ವಾಧೀನಕ್ಕೆ ನೋಟಿಸ್‌ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. ನೋಟಿಸ್‌ ಕೊಟ್ಟರೆ ಕೋರ್ಟ್‌ ಮೊರೆ ಹೋಗುತ್ತೇವೆ.
ಪ್ರಶಾಂತ
- ರೈತ, ಆನೆಗೊಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.