ADVERTISEMENT

ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಿ: ಸುರೇಶ ಬಿ.ಇಟ್ನಾಳ

ಅಂಜನಾದ್ರಿಯಲ್ಲಿ ಪ್ರಗತಿ ಪರಿಶೀಲನಾ ಸಭೆಳ ಜಿಲ್ಲಾಧಿಕಾರಿ ಸುರೇಶ ಇಟ್ನಾಳ ಸೂಚನೆ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2025, 5:09 IST
Last Updated 22 ಸೆಪ್ಟೆಂಬರ್ 2025, 5:09 IST
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಶನಿವಾರ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ, ಶಾಸಕ ಜಿ.ಜನಾರ್ದನರೆಡ್ಡಿ‌ ಭೇಟಿ ನೀಡಿದರು
ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಶನಿವಾರ ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ, ಶಾಸಕ ಜಿ.ಜನಾರ್ದನರೆಡ್ಡಿ‌ ಭೇಟಿ ನೀಡಿದರು   

ಗಂಗಾವತಿ: ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಕಾಮಗಾರಿಗಳನ್ನು ನವೆಂಬರ್‌ ಅಂತ್ಯದೊಳಗೆ ಪೂರ್ಣಗೊಳಿಸಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಜಿಲ್ಲಾಧಿಕಾರಿ ಸುರೇಶ ಬಿ.ಇಟ್ನಾಳ ಅವರು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಶನಿವಾರ ಭೇಟಿ ನೀಡಿ ವೀಕ್ಷಿಸಿ,ನಂತರ ಪ್ರವಾಸೋದ್ಯಮ ಇಲಾಖೆ ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಂಜನಾದ್ರಿಗೆ ಸಂಪರ್ಕ ಕಲ್ಪಿಸುವ ಹಿಂಬದಿ ರಸ್ತೆಗಳಿಗೆ ಒತ್ತು ನೀಡಿ, ಅಂಜನಾದ್ರಿ ಬೆಟ್ಟದ ಬಳಿ ಪ್ರಗತಿಯಲ್ಲಿರುವ ಪ್ರವಾಸಿ ಮಂದಿರವು ಡಿಸೆಂಬರ್ ವೇಳೆಗೆ ನಡೆಯುವ ಹನುಮಮಾಲ ಸಂದರ್ಭದಲ್ಲಿ ಪೂರ್ಣಗೊಂಡಿರಬೇಕು ಎಂದರು.

ADVERTISEMENT

ಹಾಗೆ ಡಾರ್ಮಿಟರಿ ಬ್ಲಾಕ್‌ಗಳಿಗೆ ಅಗತ್ಯವಿರುವ, ವಿದ್ಯುತ್ ಸಂಪರ್ಕ, ಕುಡಿಯುವ ನೀರು, ಸೆಪ್ಟಿಕ್ ಟ್ಯಾಂಕ್, ಬೋರ್‌ವೆಲ್‌, ಪಾತ್ ವೇ ಕಾಮಗಾರಿಗಳಿಗೆ ಶೀಘ್ರವಾಗಿ ಟೆಂಡರ್ ಕರೆದು ಅನುಷ್ಠಾನಗೊಳಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಇನ್ನೂ ಪ್ರದಕ್ಷಿಣ ಪಥ, ಥೀಮ್ ಆಧಾರಿತ ಮೆಟ್ಟಿಲುಗಳ ಕಾಮಗಾರಿಗೆ ಬೇಕಿರುವ ಭೂಮಿಗೆ, ಅರಣ್ಯ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಸಿದ್ಧತೆ ಕೈಗೊಳ್ಳಬೇಕು. ಅಂಜ‌ನಾದ್ರಿ ಬೆಟ್ಟದ ಮುಖ್ಯರಸ್ತೆ ವಿಸ್ತರಿಸುವ ಜೊತೆಗೆ ವಿದ್ಯುತ್ ಕಂಬಗಳನ್ನು ಅಳವಡಿಸಲು ಗಂಗಾವತಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ‘ಅಂಜನಾದ್ರಿ ಅಭಿವೃದ್ಧಿಯ ವಿವಿಧ ಕಾಮಗಾರಿಗಳಾದ ಪ್ರದಕ್ಷಿಣ ಪಥ, ಮೆಟ್ಟಿಲುಗಳ ವಿನ್ಯಾಸ ನಿರ್ಮಾಣದ ಕಾರ್ಯ ಆದಷ್ಟು ಬೇಗನೆ ಪೂರ್ಣಗೊಳಿಸಬೇಕು. ಭಕ್ತರಿಗೆ ಶಾಶ್ವತ ಪ್ರಸಾದ ನಿಲಯ ಒದಗಿಸಬೇಕು ಅಂಜನಾ‌ದ್ರಿ ಬೆಟ್ಟದ ರೋಪ್ ವೇ ಕಾಮಗಾರಿಯ ಡಿಪಿಆರ್ ಸಿದ್ಧತೆಯಾಗಿದ್ದು, ಟೆಂಡರ್ ಹಂತದಲ್ಲಿದೆ. ಅಧಿಕಾರಿಗಳು ಕಾರ್ಯರೂಪಕ್ಕೆ ತರಬೇಕು’ ಎಂದರು. 

ಜಿ.ಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಅಂಜನಾದ್ರಿಯಲ್ಲಿ ಭಕ್ತರು ಉಳಿದುಕೊಳ್ಳಲು ತಂಗುದಾಣಗಳು, ಶಾಪಿಂಗ್ ಕಾಂಪ್ಲೆಕ್ಸ್ ನಿರ್ಮಾಣ ಕೊನೆಯ ಹಂತದಲ್ಲಿವೆ. ಇತರ ಕಾಮಗಾರಿಗಳನ್ನು ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದರು.

ಕೊಪ್ಪಳ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಮಾಲಗಿತ್ತಿ, ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ರಮೇಶ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಪಾಟೀಲ, ಪುರಾತತ್ವ ಮತ್ತು ವಸ್ತು ಪರಂಪರೆ ಸಂಗ್ರಹಾಲಯ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ನಾಯ್ಕ್, ತ‌ಹಶಿಲ್ದಾರ್ ಯು.ನಾಗರಾಜ, ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್.ಪ್ರಕಾಶರಾವ್, ಸೃಷ್ಟಿ ಆರ್ಕಿಟೆಕ್ಟ್ ಮುಖ್ಯಸ್ಥ ಶ್ರೀಪಾದ, ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.