
ಗಂಗಾವತಿ: ನಗರದ ರೈಲು ನಿಲ್ದಾಣಕ್ಕೆ ಅಂಜನಾದ್ರಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡುವಂತೆ ಆಗ್ರಹಿಸಿ ಸರ್ವಾಂಗೀಣ ಅಭಿವೃದ್ಧಿ ಹೋರಾಟ ಸಮಿತಿ ಕಾರ್ಯಕರ್ತರು ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.
ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ ಮ್ಯಾಗಳಮನಿ ಮಾತನಾಡಿ, ‘ರಾಮಾಯಣ ಕಾಲದ ಇತಿಹಾಸ ಹೊಂದಿರುವ ಗಂಗಾವತಿ ತಾಲ್ಲೂಕಿನಲ್ಲಿ ಸಾಕಷ್ಟು ಪ್ರವಾಸಿ ಸ್ಥಳಗಳನ್ನು ಕಾಣಬಹುದಾಗಿದೆ. ಅಂಜನಾದ್ರಿ ಬೆಟ್ಟ, ಶಬರಿಗುಹೆ, ಪಂಪಾಸರೋವರ ಸೇರಿದಂತೆ ಹಲವು ಪ್ರದೇಶಗಳಿವೆ. ಇಲ್ಲಿಗೆ ಸಾಕಷ್ಟು ಜನ ಭಕ್ತರು, ಪ್ರವಾಸಿಗರು ಭೇಟಿ ನೀಡುತ್ತಾರೆ’ ಎಂದರು.
‘ಗಂಗಾವತಿ ರೈಲು ನಿಲ್ದಾಣಕ್ಕೆ ಅಂಜನಾದ್ರಿ ರೈಲ್ವೆ ನಿಲ್ದಾಣ ಎಂದು ನಾಮಕರಣ ಮಾಡಬೇಕು. ಅಲ್ಲದೆ ಗಂಗಾವತಿ-ಬೆಂಗಳೂರಿಗೆ ಹೋಗುವ ರೈಲಿಗೆ ಅಂಜನಾದ್ರಿ ಎಕ್ಸಪ್ರೆಸ್ಸ್ ಎಂದು ನಾಮಕರಣ ಮಾಡಬೇಕು. ಈಚೆಗೆ ಉದ್ಯೋಗ ಖಾತರಿ ಯೋಜನೆ ತಿದ್ದುಪಡಿ ಮಾಡಿ, ಗಾಂಧೀಜಿ ಹೆಸರು ಕೈ ಬಿಟ್ಟಿರುವುದು ಸರಿಯಲ್ಲ. ಕೂಡಲೇ ನಿರ್ಧಾರ ಹಿಂಪಡೆಯಬೇಕು’ ಎಂದು ಆಗ್ರಹಿಸಿದರು.
ಗ್ರೇಡ್-2 ತಹಶೀಲ್ದಾರ್ ಮಹಾಂತಗೌಡ ಪಾಟೀಲ, ಸಮಿತಿ ಪದಾಧಿಕಾರಿ ರಾಘವೇಂದ್ರ ಕಡೆಬಾಗಿಲು, ದುರ್ಗೇಶ ಹೊಸಳ್ಳಿ, ಬಸವರಾಜ ನಾಯಕ, ಅರವಿಂದ ಯೋಗಿ, ಮೇಘರಾಜ, ರಾಮಣ್ಣ ರುದ್ರಾಕ್ಷಿ, ಬೋಗೇಶ ಆನೆಗುಂದಿ, ಗಣೇಶ, ಹನುಮೇಶ ಖಾಟಾಪುರ, ಮಂಜುನಾಥ ಹಿರೇಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.