
ಕೊಪ್ಪಳ: ‘ಸಮಾಜದಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿರುವ ಆರ್ಯವೈಶ್ಯ ಸಮುದಾಯದ ಜನತೆಯನ್ನು ಒಂದೆಡೆ ಸೇರಿಸಬೇಕು. ಒಂದೆಡೆ ಸೇರಿ ಮುನ್ನಡೆದಾಗ ಸಮಾಜದ ಸಂಘಟನೆಯೂ ಸಾಧ್ಯವಾಗುತ್ತದೆ. ಪರಸ್ಪರ ಸಹಕಾರವೂ ದೊರೆಯುತ್ತದೆ’ ಎಂದು ಕೊಪ್ಪಳ ಆರ್ಯವೈಶ್ಯ ಸಂಘದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಹೇಳಿದರು.
ಕರ್ನಾಟಕ ಆರ್ಯವೈಶ್ಯ ಅಧಿಕಾರಿಗಳ ಮತ್ತು ವೃತ್ತಿನಿರತ ಸಂಘಗಳ ಒಕ್ಕೂಟದಿಂದ ನಗರದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಪ್ರಥಮ ಆರ್ಯವೈಶ್ಯ ವಕೀಲರ ಸಮಾವೇಶ, ಹಿರಿಯ ವಕೀಲರಿಗೆ ವಾಸವಿ ಕಾನೂನು ಸಿರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು ‘ವಿವಿಧ ವೃತ್ತಿಗಳಲ್ಲಿ ಇರುವವರು ಸೇರಿ ಸಮಾಜದ ಬೆಳವಣಿಗೆಗೆ ನೆರವಾಗಬೇಕು. ಸಮಾಜಕ್ಕೆ ಸಂಬಂಧಿಸಿದ ರಾಜ್ಯಮಟ್ಟದ ಯಾವುದೇ ಕಾರ್ಯಕ್ರಮಗಳನ್ನು ಕೊಪ್ಪಳದಲ್ಲಿ ಮಾಡಿದರೂ ಬೆಂಬಲವಿದೆ. ಸಿರಿವಂತರ ನಡುವೆಯೂ ಆರ್ಯವೈಶ್ಯ ಸಮಾಜದಲ್ಲಿ ಸಾಕಷ್ಟು ಜನ ಬಡವರಿದ್ದಾರೆ. ಅವರನ್ನು ನಮ್ಮೊಡನೆ ಕರೆದುಕೊಂಡು ಸಾಗಬೇಕಿದೆ’ ಎಂದರು.
ಒಕ್ಕೂಟದ ರಾಜ್ಯಾಧ್ಯಕ್ಷ ಎಸ್.ಎಲ್. ಕೋರಾ ಮಾತನಾಡಿ ‘ಸಮುದಾಯದ ವಿವಿಧ ವೃತ್ತಿಗಳ ಜನರನ್ನು ಒಂದುಗೂಡಿಸಲಾಗಿದೆ. ಸ್ವಾತಂತ್ರ್ಯ ಪೂರ್ವದಿಂದಲೂ ಸಮಾಜವನ್ನು ಕಟ್ಟಿದ ಹೆಗ್ಗಳಿಕೆ ನಮ್ಮ ಸಮುದಾಯಕ್ಕೆ ಹಾಗೂ ವಕೀಲರಿಗೆ ಇದೆ. ಜಿಲ್ಲಾಕೇಂದ್ರಗಳಲ್ಲಿ ನಮ್ಮ ಒಕ್ಕೂಟದ ಕಚೇರಿ ಆರಂಭಿಸುವ ಇರಾದೆಯಿದ್ದು, ಎಲ್ಲರೂ ನೆರವಾಗಬೇಕು’ ಎಂದು ಮನವಿ ಮಾಡಿದರು.
ಭಾಗ್ಯನಗರ ಶಂಕರಾಚಾರ್ಯ ಮಠದ ಶಿವರಾಮ ಕೃಷ್ಣಾನಂದಸ್ವಾಮೀಜಿ ಮಾತನಾಡಿ ‘ಅನೇಕ ಎಳೆಗಳು ಕೂಡಿದರೆ ಹೇಗೆ ಹಗ್ಗವಾಗುತ್ತದೆಯೊ; ಅದೇ ರೀತಿ ಎಲ್ಲರೂ ಸೇರಿದರೆ ಸಮಾಜಕ್ಕೆ ಬಲ ಬರುತ್ತದೆ. ಆರ್ಯವೈಶ್ಯರು ಬ್ರಾಹ್ಮಣರಷ್ಟೇ ಬುದ್ಧಿವಂತರಾಗಿದ್ದು, ಈ ಸಮಾಜದ ವಕೀಲರು ಎಲ್ಲರಿಗೂ ನ್ಯಾಯ ಒದಗಿಸುವ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಕೃತಕ ಬುದ್ದಿಮತ್ತೆ, ಕಾನೂನು ಹಾಗೂ ನ್ಯಾಯದ ಭವಿಷ್ಯತ್, ಸೈಬರ್ ಸುರಕ್ಷತೆ ಮತ್ತು ಸಾಮಾಜಿಕ ಜೀವನ ಎಂಬ ವಿಷಯದ ಕುರಿತು ಉಪನ್ಯಾಸ ನಡೆಯಿತು.
ಹಿರಿಯ ವಕೀಲರಾದ ಅಶೋಕ ಕೋಂಡಾ, ಒಕ್ಕೂಟದ ಕಲಬುರಗಿ ವಿಭಾಗೀಯ ಉಪಾಧ್ಯಕ್ಷ ಗುರುಪ್ರಸಾದ್, ರಾಕೇಶ ಪಾನಘಂಟಿ, ಬೆಂಗಳೂರು, ಚಿತ್ರದುರ್ಗ, ವಿಜಯನಗರ, ಬಳ್ಳಾರಿ, ಕಲಬುರಗಿ, ಯಾದಗಿರಿ, ದಾವಣಗೆರೆ, ರಾಯಚೂರು ಹೀಗೆ ವಿವಿಧ ಜಿಲ್ಲೆಗಳಿಂದ ಆರ್ಯವೈಶ್ಯ ಸಮಾಜದ ನೂರಾರು ವಕೀಲರು ಭಾಗವಹಿಸಿದ್ದರು.
ಸಮಾಜದ ವಕೀಲರನ್ನು ಪರಸ್ಪರ ಪರಿಚಯ ಮಾಡಿಕೊಳ್ಳಲು ಭವಿಷವ್ಯದಲ್ಲಿ ನೆರವು ಪಡೆದುಕೊಳ್ಳಲು ಇಂಥ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ. ಕಾನೂನಿಗೆ ಸಂಬಂಧಿಸಿದ ವಿಷಯ ತಿಳಿದುಕೊಳ್ಳಲು ನೆರವಾಗುತ್ತದೆ.ಡಿ. ಗುರುರಾಜ ಆವೋಪಾಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ
ಇದೇ ರೀತಿ ಪ್ರತಿವರ್ಷವೂ ಕಾರ್ಯಕ್ರಮಗಳನ್ನು ಮಾಡಬೇಕಿದೆ. ಸಮಾಜದ ಎಲ್ಲ ಸಮಾರಂಭಗಳಿಗೆ ಕೊಪ್ಪಳ ವೇದಿಕೆ ಒದಗಿಸಲು ಬದ್ಧವಾಗಿದೆ.ರಾಘವೇಂದ್ರ ಪಾನಘಂಟಿ ಆರ್ಯವೈಶ್ಯ ಅಧಿಕಾರಿಗಳ ವೃತ್ತಿನಿರತರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.