ಕೊಪ್ಪಳ: ‘ಆಯುರ್ವೇದವು ಒಂದು ಸಂಪೂರ್ಣ ಚಿಕಿತ್ಸಾ ಪದ್ಧತಿಯಾಗಿದ್ದು, ಅಂತರರಾಷ್ಟ್ರೀಯ ಮಟ್ಟದಲ್ಲೂ ಮಾನ್ಯತೆ ಪಡೆಯುವ ಸಾಮರ್ಥ್ಯ ಹೊಂದಿದೆ. ಈ ನಿಟ್ಟಿನಲ್ಲಿ ಗವಿಮಠವು ತನ್ನದೇ ಆದ ಸಾಮಾಜಿಕ ಆರೋಗ್ಯ ಸೇವೆ ಸಲ್ಲಿಸುತ್ತಿದೆ’ ಎಂದು ಬೆಂಗಳೂರಿನ ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಉಪಕುಲಪತಿ ಡಾ. ಬಿ.ಸಿ.ಭಗವಾನ್ ಹೇಳಿದರು.
ಎರಡು ದಿನಗಳ ಗವಿದೀಪ್ತಿ-ಕೌಶಲ್ಯ ಭಾರತಿ 2.0 ಅಂತರರಾಷ್ಟ್ರೀಯ ಆಯುರ್ವೇದ ವಿಚಾರ ಸಂಕಿರಣ ಸಮಾರೋಪದಲ್ಲಿ ಶನಿವಾರ ಮಾತನಾಡಿದ ಅವರು ‘ನಶಾಮುಕ್ತ ಭಾರತ ಹಾಗೂ ಅಂಗಾಂಗ ದಾನ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಪ್ರತಿಯೊಬ್ಬರೂ ಅಂಗಾಂಗ ದಾನ ಪ್ರತಿಜ್ಞೆ ಮಾಡಬೇಕು‘ ಎಂದು ಹೇಳಿದರು.
ಇಲ್ಲಿನ ಗವಿಸಿದ್ದೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ರಾಜೀವಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ, ಬೆಂಗಳೂರು ಹಾಗೂ ಆರೋಗ್ಯ ಭಾರತಿ ಕರ್ನಾಟಕ ಉತ್ತರ ವಲಯ ಸಹಯೋಗದಲ್ಲಿ ವಿಚಾರ ಸಂಕಿರಣ ಆಯೋಜನೆಯಾಗಿತ್ತು.
ಆಯುರ್ವೇದದಲ್ಲಿ ಸಾಧನೆಗೈದ ವೈದ್ಯರಾದ ಎ.ಐ.ಸಣಕಲ್, ಲಕ್ಷ್ಮಣಾಚಾರ್ಯ ಡಿಂಗಾರೆ, ಮಮತಾ.ಕೆ.ವಿ, ಸಿದ್ದೇಶ ಆರಾಧ್ಯಮಠ ಅವರಿಗೆ ‘ಕೌಶಲ್ಯರತ್ನ’ ಮತ್ತು ದಿಲೀಪ್ ಪುರಾಣಿಕ್ ಅವರಿಗೆ ʼಜೀವಮಾನದ ಸಾಧನೆ ಪ್ರಶಸ್ತಿʼ ಪ್ರದಾನ ಮಾಡಲಾಯಿತು.
ಬೋರ್ಡ್ ಆಫ್ ಆಯುರ್ವೇದದ ಮಾಜಿ ಅಧ್ಯಕ್ಷ ಡಾ.ಬಿ.ಎಸ್.ಪ್ರಸಾದ, ಗವಿಸಿದ್ಧೇಶ್ವರ ಆಯುರ್ವೇದ ಕಾಲೇಜಿನ ಕಾರ್ಯಾಧ್ಯಕ್ಷ ಸಂಜಯ ಕೊತಬಾಳ, ಪ್ರಾಚಾರ್ಯ ಅಧ್ಯಕ್ಷ ಡಾ. ಮಹಾಂತೇಶ ಸಾಲಿಮಠ, ಉಪಪ್ರಾಂಶುಪಾಲ ಡಾ. ಸುರೇಶ ಹಕ್ಕಂಡಿ, ಮಹೇಶ ಮುದಗಲ್, ಡಾ. ಕೆ.ಬಿ.ಹಿರೇಮಠ, ಡಾ. ಸಿದ್ದನಗೌಡ ಪಾಟೀಲ, ಡಾ. ಎಸ್.ಕೆ ಬನ್ನಿಗೋಳ, ಡಾ. ನೇಹಾ ಹಾಗೂ ಡಾ. ಐಶ್ವರ್ಯ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.