ADVERTISEMENT

‘ಉತ್ತಮ ಆರೋಗ್ಯಕ್ಕೆ ಆಯುರ್ವೇದ ಚಿಕಿತ್ಸೆ ಪರಿಣಾಮಕಾರಿ’

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 14:48 IST
Last Updated 30 ಮಾರ್ಚ್ 2024, 14:48 IST
ಯಲಬುರ್ಗಾ ಪಟ್ಟಣದ ಎಸ್.ಎ. ನಿಂಗೋಜಿ ಶಿಕ್ಷಣ ಸಂಸ್ಥೆಯಲ್ಲಿ ‘ನನ್ನ ಆರೋಗ್ಯ ನನ್ನ ಕೈಯಲ್ಲಿ’ ಆರೋಗ್ಯ ಅರಿವು ಕಾರ್ಯಕ್ರಮಕ್ಕೆ ಪಾರಂಪರಿಕ ವೈದ್ಯ ಹನಮಂತ ಮಳಲಿ ಚಾಲನೆ ನೀಡಿದರು
ಯಲಬುರ್ಗಾ ಪಟ್ಟಣದ ಎಸ್.ಎ. ನಿಂಗೋಜಿ ಶಿಕ್ಷಣ ಸಂಸ್ಥೆಯಲ್ಲಿ ‘ನನ್ನ ಆರೋಗ್ಯ ನನ್ನ ಕೈಯಲ್ಲಿ’ ಆರೋಗ್ಯ ಅರಿವು ಕಾರ್ಯಕ್ರಮಕ್ಕೆ ಪಾರಂಪರಿಕ ವೈದ್ಯ ಹನಮಂತ ಮಳಲಿ ಚಾಲನೆ ನೀಡಿದರು   

ಯಲಬುರ್ಗಾ: ‘ಸಾವಿರಾರು ವರ್ಷ ಇತಿಹಾಸವುಳ್ಳ ಆಯುರ್ವೇದ ಚಿಕಿತ್ಸಾ ಪದ್ಧತಿಯು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಈ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಂಡು ಧೀರ್ಘಕಾಲದವರೆಗೆ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಿದೆ’ ಎಂದು ಪಾರಂಪಾರಿಕ ವೈದ್ಯ ಹನಮಂತ ಮಳಲಿ ಹೇಳಿದರು.

ಪಟ್ಟಣದ ಎಸ್.ಎ.ನಿಂಗೋಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ‘ನನ್ನ ಆರೋಗ್ಯ ನನ್ನ ಕೈಯಲ್ಲಿ’ ಆರೋಗ್ಯ ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಆರೋಗ್ಯ ಸುಧಾರಣೆಗೆ ವೈಯಕ್ತಿಕವಾಗಿ ವಿಶೇಷ ಗಮನ ಕೊಡುವುದು ಮುಖ್ಯವಾಗಿದೆ. ಯಾಂತ್ರಿಕ ಜೀವನಶೈಲಿ ಮನುಷ್ಯನ ಆರೋಗ್ಯಕ್ಕೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವುದರಿಂದ ಅನಾರೋಗ್ಯ ಸಮಾಜ ನಿರ್ಮಾಣಗೊಳ್ಳುತ್ತಿರುವುದು ಆತಂಕದ ಸಂಗತಿಯಾಗಿದೆ. ಇದರ ನಿಯಂತ್ರಣಕ್ಕೆ ತ್ವರಿತ ಕ್ರಮ ಕೈಗೊಳ್ಳಲು ಪ್ರತಿಯೊಬ್ಬರೂ ಮುಂದಾಗಬೇಕಾಗಿದೆ’ ಎಂದರು.

ADVERTISEMENT

‘ಪೂರ್ವಜರು ನೈಸರ್ಗಿಕವಾಗಿ ದೊರೆಯುವ ಔಷಧ ಗುಣಗಳುಳ್ಳ ವನಸ್ಪತಿಗಳನ್ನು ಸರಿಯಾಗಿ ಬಳಸಿಕೊಳ್ಳುವ ಮೂಲಕ ನೂರಾರು ವರ್ಷಗಳ ಕಾಲ ಬದುಕಿ ಬಾಳುತ್ತಿದ್ದರು. ಈಗ ಮತ್ತೆ ಅದೇ ಪದ್ಧತಿಯು ಹೆಚ್ಚು ಜನಪ್ರಿಯವಾಗುತ್ತಿದೆ’ ಎಂದು ಅಭಿಪ್ರಾಯಪಟ್ಟರು.

ಸಂಸ್ಥೆಯ ಅಧ್ಯಕ್ಷ ಎಸ್.ಎ. ನಿಂಗೋಜಿ ಮಾತನಾಡಿ, ‘ನಿಸರ್ಗ ಚಿಕಿತ್ಸೆ ಎಂದೇ ಕರೆಯಲ್ಪಡುವ ಆಯುರ್ವೇದ ಪದ್ಧತಿಯು ದೇಶಿ ಸಂಸ್ಕೃತಿಯ ಒಂದು ಭಾಗವಾಗಿದೆ. ಹಿಂದಿನ ವೈಭವ ಮತ್ತೆ ಮರುಕಳಿಸುವತ್ತ ಆಯುರ್ವೇದಕ್ಕೆ ಮತ್ತೆ ಹೆಚ್ಚಿನ ಮಹತ್ವದ ದೊರೆಯುತ್ತಿದೆ’ ಎಂದರು.

ರತ್ನಮ್ಮ ನಿಂಗೋಜಿ ಅಧ್ಯಕ್ಷತೆ ವಹಿಸಿದ್ದರು. ವರ್ತಕ ಸಂಗಣ್ಣ ಟೆಂಗಿನಕಾಯಿ, ಸಂಸ್ಥೆಯ ನಿರ್ದೇಶಕ ವೀರಣ್ಣ ನಿಂಗೋಜಿ, ಸಾಹಿತಿ ಕೆ.ಬಿ.ಬ್ಯಾಳಿ, ಗೋಪಾಲ ಬಿನ್ನಾಳ, ವಿ.ವಿ ಪತ್ತಾರ, ಮಲ್ಲನಗೌಡ ಮಾಸಕಟ್ಟಿ, ರಾಘವೇಂದ್ರ ಬಿ, ಅಂದಪ್ಪ ಬಂಡಿಹಾಳ, ವಿರೇಶ ಕೊಣ್ಣೂರ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.