ADVERTISEMENT

ಕೊಪ್ಪಳ: ನಾಳೆಯಿಂದ ಬಾಲ್‌ಬ್ಯಾಡ್ಮಿಂಟನ್‌ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 24 ಮೇ 2024, 4:10 IST
Last Updated 24 ಮೇ 2024, 4:10 IST
ಐ.ಎಸ್‌. ಬೊಮ್ಮನಾಳ
ಐ.ಎಸ್‌. ಬೊಮ್ಮನಾಳ   

ಕೊಪ್ಪಳ: ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಮೇ 25 ಹಾಗೂ 26ರಂದು ರಾಜ್ಯಮಟ್ಟದ ಆಹ್ವಾನಿತ ಪುರುಷರ ಬಾಲ್‌ ಬ್ಯಾಡ್ಮಿಂಟನ್‌ ಟೂರ್ನಿ ಆಯೋಜನೆಯಾಗಿದ್ದು 25 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಜಿಲ್ಲೆಯ ಅತ್ಯಂತ ಹಳೆ ಬಾಲ್‌ ಬ್ಯಾಡ್ಮಿಂಟನ್‌ ಕ್ಲಬ್‌ಗಳಲ್ಲಿ ಒಂದಾದ ಬ್ಲೂ ಸ್ಟಾರ್‌ 17 ವರ್ಷಗಳ ಬಳಿಕ ರಾಜ್ಯಮಟ್ಟದ ಆಹ್ವಾನಿತ ಟೂರ್ನಿಯನ್ನು ನಗರದಲ್ಲಿ ಆಯೋಜಿಸಿದೆ. ಈ ಕ್ಲಬ್‌ ಮೊದಲ ಬಾರಿಗೆ 1980ರಲ್ಲಿ ಟೂರ್ನಿ ನಡೆಸಿತ್ತು. ಬಳಿಕ 1991, 2000 ಮತ್ತು 2007ರಲ್ಲಿ ಟೂರ್ನಿಯನ್ನು ಸಂಘಟಿಸಿ ಗವಿಸಿದ್ಧೇಶ್ವರ ಕಾಲೇಜು ಮೈದಾನದಲ್ಲಿ ಪಂದ್ಯಗಳನ್ನು ಆಯೋಜಿಸಿತ್ತು. ದೀರ್ಘ ಬಿಡುವಿನ ಬಳಿಕ ಟೂರ್ನಿ ಆಯೋಜನೆಯಾಗಿದ್ದು ಜಿಲ್ಲೆಯ ಕ್ರೀಡಾಪ್ರೇಮಿಗಳಿಗೆ ಖುಷಿ ನೀಡಿದೆ.

ಚಾಂಪಿಯನ್ ತಂಡಕ್ಕೆ ₹25 ಸಾವಿರ, ದ್ವಿತೀಯ ₹20 ಸಾವಿರ, ತೃತೀಯ ₹15 ಸಾವಿರ, ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ₹10 ಸಾವಿರ ಮತ್ತು ಟ್ರೋಫಿ ಲಭಿಸುತ್ತದೆ. ಬರುವ ಎಲ್ಲ ಕ್ರೀಡಾಪಟುಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಸಂಘಟಕರೇ ನೋಡಿಕೊಳ್ಳುವರು. ಆಹ್ವಾನಿತ ಟೂರ್ನಿಯಾದ ಕಾರಣ ಪ್ರತಿ ತಂಡದಲ್ಲಿ ಇಬ್ಬರು ರಾಷ್ಟ್ರೀಯ ಮಟ್ಟದ ಆಟಗಾರರು ‍ಪಾಲ್ಗೊಳ್ಳಲು ಅವಕಾಶವಿದೆ. ಯಾವುದೇ ವಯಸ್ಸಿನ ಮಿತಿಯೂ ಇರುವುದಿಲ್ಲ.

ADVERTISEMENT

ಈ ಕುರಿತು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬ್ಲೂ ಸ್ಟಾರ್‌ ಸಂಘದ ಅಧ್ಯಕ್ಷ ಐ.ಎಸ್‌. ಬೊಮ್ಮನಾಳ ಕಾರ್ಯದರ್ಶಿ ಸಿದ್ದು ಬುಳ್ಳಾ ‘ಕೊಪ್ಪಳ ಜಿಲ್ಲೆಯ ನಾಲ್ಕು ಸೇರಿ ಇದುವರೆಗೆ 25 ತಂಡಗಳು ಹೆಸರು ನೋಂದಾಯಿಸಿವೆ. ಬೆಂಗಳೂರು, ಭದ್ರಾವತಿ, ಹಾಸನ, ಮೈಸೂರು, ಕೆನರಾ ಬ್ಯಾಂಕ್‌, ದಾವಣಗೆರೆಗಳಿಂದ ತಂಡಗಳು ಬರಲಿವೆ. ಎರಡು ದಿನಗಳ ಕಾಲ ನಡೆಯುವ ಟೂರ್ನಿಯಲ್ಲಿ ಲೀಗ್‌ ಹಾಗೂ ನಾಕೌಟ್‌ ಮಾದರಿಯಲ್ಲಿ ಪಂದ್ಯಗಳು ಜರುಗಲಿವೆ’ ಎಂದು ತಿಳಿಸಿದರು.

’ಈಗಾಗಲೇ ಘೋಷಣೆ ಮಾಡಿರುವ ಬಹುಮಾನದ ಜೊತೆಗೆ ವೈಯಕ್ತಿಕ ಉತ್ತಮ ಸಾಧನೆಗೂ ಬಹುಮಾನ ನೀಡಲಾಗುತ್ತದೆ. ಪ್ರತಿ ತಂಡಕ್ಕೆ ₹1000 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಮುಂಬರುವ ವರ್ಷಗಳಲ್ಲಿ ಪ್ರತಿವರ್ಷವೂ ಟೂರ್ನಿ ಆಯೋಜಿಸುವ ಬಗ್ಗೆ ಯೋಜನೆ ರೂಪಿಸಲಾಗುವುದು’ ಎಂದು ತಿಳಿಸಿದರು.

ಹೆಸರು ನೋಂದಾಯಿಸಲು ಹಾಗೂ ಇನ್ನಷ್ಟು ಮಾಹಿತಿಗಾಗಿ ಬಯಸುವವರು ಬೊಮ್ಮನಾಳ (9900288805) ಮತ್ತು ಸಿದ್ದು ಬುಳ್ಳಾ (9845863018) ಸಂಪರ್ಕಿಸುವಂತೆ ಅವರು ಕೋರಿದ್ದಾರೆ.

ಸಂಘದ ಖಜಾಂಚಿ ಗ್ಯಾನಚಂದ ಜಾಂಗಡಾ, ಉಪಾಧ್ಯಕ್ಷ ಪ್ರಭು ನಿಡಶೇಷಿ ಹಾಗೂ ಸದಸ್ಯ ಗವಿ ಬಿನ್ನಾಳ ಪಾಲ್ಗೊಂಡಿದ್ದರು.

ಕೊಪ್ಪಳದ ತಾಲ್ಲೂಕು ಪಂಚಾಯಿತಿ ಕ್ರೀಡಾಂಗಣದಲ್ಲಿ ಟೂರ್ನಿ ಆಯೋಜನೆ ಕೊಪ್ಪಳ ಜಿಲ್ಲೆಯ ನಾಲ್ಕು ತಂಡಗಳ ಹೆಸರು ನೋಂದಣಿ ಸಂಘದ ವತಿಯಿಂದ ಐದನೇ ಬಾರಿಗೆ ಟೂರ್ನಿ ಆಯೋಜನೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.