
ಕುಕನೂರು: ಪಟ್ಟಣದ ವಿವಿಧೆಡೆ ಅಳವಡಿಸಿದ ಫ್ಲೆಕ್ಸ್, ಬ್ಯಾನರ್ ಹಾಗೂ ಭಿತ್ತಿಚಿತ್ರಗಳು ವಾಹನ ಸವಾರರು ಮತ್ತು ಪಾದಚಾರಿಗಳ ಗಮನ ಸೆಳೆಯುವುದು ಸಾಮಾನ್ಯ. ಈ ವೇಳೆ ವಾಹನ ಚಾಲಕನ ಮನಸ್ಸು ಕ್ಷಣಾರ್ಧದಲ್ಲಿ ಇವುಗಳ ಮೇಲೆ ಹರಿದರೆ ಅಪಘಾತ ಸಂಭವಿಸುವ ಸಾಧ್ಯತೆಯೇ ಹೆಚ್ಚು. ಹೀಗಿದ್ದರೂ ಈ ಹಾವಳಿ ತಡೆಯಲು ಇಂದಿಗೂ ಸಾಧ್ಯವಾಗಿಲ್ಲ.
ಧಾರ್ಮಿಕ ಸಮಾರಂಭಗಳು ಜಾಹೀರಾತು ವ್ಯಾಮೋಹಕ್ಕೆ ಸಿಲುಕಿವೆ. ಪ್ರತಿಷ್ಠೆಯ ಸಂಗತಿಗಳಾಗಿ ಪರಿವರ್ತನೆ ಹೊಂದಿವೆ. ಹೀಗಾಗಿ ಉತ್ಸವ, ಹಬ್ಬ, ಜಯಂತಿಗಳ ವೇಳೆಯಲ್ಲಿ ಪ್ರಮುಖ ರಸ್ತೆಗಳ ಬಣ್ಣಗಳೇ ಬದಲಾಗುತ್ತವೆ. ರಸ್ತೆ ವಿಭಜಕದ ಕಂಬಿಗಳು ಇದಕ್ಕೆ ಹೊರತಾಗಿಲ್ಲ.
ಇನ್ನು ರಾಜಕೀಯ ಮುಖಂಡರ ಜನ್ಮದಿನ, ಸಮಾವೇಶ, ಕ್ರೀಡಾಕೂಟಗಳ ಸಂದರ್ಭದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ಫ್ಲೆಕ್ಸ್, ಬಂಟಿಂಗ್ಸ್‌ಗಳೇ ರಾರಾಜಿಸುತ್ತವೆ. ಜನರ ಗಮನ ಸೆಳೆಯುವ ಪ್ರಚಾರ ಸಾಮಗ್ರಿಗಳು ಜೀವಬಲಿಗೆ ಕಾಯುತ್ತಿರುವಂತೆ ಗೋಚರಿಸುತ್ತಿವೆ. ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯುಂಟು ಮಾಡುವ ಇವುಗಳ ಹಾವಳಿಗೆ ಕಡಿವಾಣ ಹಾಕುವ ಕೆಲಸ ನಾಮಕಾವಸ್ಥೆಗೆ ಸೀಮಿತವಾಗಿದೆ.
ವೀರಭದ್ರಪ್ಪ ವೃತ್ತ, ಪಟ್ಟಣದ ಬಸ್ ನಿಲ್ದಾಣದ ಮುಂಭಾಗ, ಪಟ್ಟಣ ಪಂಚಾಯಿತಿ ಮುಂಭಾಗ ಅಂಬೇಡ್ಕರ್ ವೃತ್ತ ಸೇರಿ ಹಲವು ಭಾಗಗಳಲ್ಲಿ ಫ್ಲೆಕ್ಸ್ ಹಾವಳಿ ವಿಪರೀತವಾಗಿದೆ. ಆಕಸ್ಮಿಕವಾಗಿ ಇವು ವಾಹನ ಚಾಲನೆಗೆ ತೊಂದರೆ ಉಂಟು ಮಾಡಿದರೆ ಬೇರೆಡೆ ಸಂಭವಿಸಿದ ದುರಂತ ಪಟ್ಟಣದಲ್ಲಿ ನಡೆದರೆ ಅಚ್ಚರಿಪಡಬೇಕಿಲ್ಲ.
ಅಸಹಾಯಕ ಪರಿಸ್ಥಿತಿ: ರಾಜಕೀಯ ನಾಯಕರ ಒತ್ತಡಕ್ಕೆ ಮಣಿದು ಸ್ಥಳೀಯ ಆಡಳಿತ ಕೈಚೆಲ್ಲಿ ಕುಳಿತಿರುವ ಪರಿಣಾಮ ಪೂರ್ವಾನುಮತಿ ಪಡೆಯದೇ ಅನಧಿಕೃತವಾಗಿ ಅಳವಡಿಸುವವರ ಸಂಖ್ಯೆ ಹೆಚ್ಚುತ್ತಿದೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಿಂದೇಟು ಹಾಕುವ ಪರಿಸ್ಥಿತಿ ಇದೆ. ಫ್ಲೆಕ್ಸ್‌ಗೆ ಬಳಸಿದ ಪ್ಲಾಸ್ಟಿಕ್ ಕೆಲವೇ ದಿನಗಳಲ್ಲಿ ಕಸದ ರಾಶಿ ಸೇರುತ್ತವೆ. ಇವುಗಳಿಂದ ಪರಿಸರಕ್ಕೆ ಹಾನಿಯುಂಟಾಗುತ್ತಿದೆ. ಇದನ್ನು ತಡೆಯಲು ಗಮನಹರಿಸುತ್ತಿಲ್ಲ.
ಫ್ಲೆಕ್ಸ್ ಬ್ಯಾನರ್ ನೆಲಕ್ಕುರುಳಿ ಸಾರ್ವಜನಿಕರ ಮೇಲೆ ಬಿದ್ದು ಅನಾಹುತವಾದಲ್ಲಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಅವಕಾಶವಿದೆ. ಅಳವಡಿಸಿದವರೇ ಸಂಪೂರ್ಣ ಜವಾಬ್ದಾರರು. ಅನಧಿಕೃತವಾಗಿ ಅಳವಡಿಸಿರುವುದನ್ನು ತೆರವುಗೊಳಿಸಲಾಗುವುದುನಬಿಸಾಬ್ ಕಂದಗಲ್ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ಪಟ್ಟಣದಲ್ಲಿ ಎಲ್ಲೆಂದರಲ್ಲಿ ಫ್ಲೆಕ್ಸ್ ಹಾಕುತ್ತಿರುವುದರಿಂದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ. ಫ್ಲೆಕ್ಸ್ ಹಾವಳಿಗೆ ಸಂಪೂರ್ಣ ಕಡಿವಾಣ ಹಾಕಬೇಕು. ಅನುಮತಿ ತೆಗೆದುಕೊಂಡು ಫ್ಲೆಕ್ಸ್ ಅಳವಡಿಕೆ ಮಾಡಿದಾಗ ಪಟ್ಟಣ ಪಂಚಾಯಿತಿಗೆ ಆದಾಯ ಬರುತ್ತದೆಶಂಕರ್ ಭಂಡಾರಿ ಸ್ಥಳೀಯ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.