ADVERTISEMENT

ಸಾಮಾಜಿಕ ಪಿಡುಗು ತೊಲಗಿಸಲು ಶ್ರಮಿಸಿದ ದಾರ್ಶನಿಕ ಬಸವಣ್ಣ: ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 10 ಮೇ 2024, 16:10 IST
Last Updated 10 ಮೇ 2024, 16:10 IST
ಗಂಗಾವತಿ ನಗರದ ಕೃಷ್ಣದೇವರಾಯ ವೃತ್ತದ ಬಳಿ ಶುಕ್ರವಾರ ನಡೆದ ಬಸವಣ್ಣನವರ ಜಯಂತಿಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿದರು
ಗಂಗಾವತಿ ನಗರದ ಕೃಷ್ಣದೇವರಾಯ ವೃತ್ತದ ಬಳಿ ಶುಕ್ರವಾರ ನಡೆದ ಬಸವಣ್ಣನವರ ಜಯಂತಿಯಲ್ಲಿ ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿದರು   

ಗಂಗಾವತಿ: ನಗರದ ಕೃಷ್ಣದೇವರಾಯ ವೃತ್ತದಲ್ಲಿ ಜಗಜ್ಯೋತಿ ಬಸವಣ್ಣನವರ ಪ್ರತಿಮೆ ಬಳಿ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು.

ಶಾಸಕ ಜಿ.ಜನಾರ್ದನರೆಡ್ಡಿ ಮಾತನಾಡಿ, ‘ಬಸವಣ್ಣ 12ನೇ ಶತಮಾನದಲ್ಲಿ ಅನುಭವ ಮಂಟಪದಡಿ ಎಲ್ಲ ಜಾತಿ, ವರ್ಗದ ಜನರನ್ನು ಒಂದುಗೂಡಿಸಿ ಸಮಾನತೆಯ ಮೂಲಕ ವಿಶ್ವದ ಪ್ರಜಾಪ್ರಭುತ್ವಕ್ಕೆ ಭದ್ರ ಬುನಾದಿ ಹಾಕಿದ ಯುಗ ಪುರುಷ. ವಚನಗಳಿಂದ ಸಾಮಾಜಿಕ ಪಿಡುಗುಗಳ ಬಗ್ಗೆ ಜನರಿಗೆ ಅರಿವು ಮೂಡಿಸಿದ ಮಹಾನ್ ದಾರ್ಶನಿಕ. ಅಂತಹ ಜೀವನ ತತ್ವಗಳು ಬದುಕಿಗೆ ದಾರಿದೀಪ’ ಎಂದರು.

ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ‘ಬಸವಣ್ಣನವರು ಇವನ್ಯಾರವ, ಇವನ್ಯಾರವ ಎನ್ನದೆ, ಪ್ರತಿಯೊಬ್ಬರನ್ನು ನಮ್ಮವರು ಎಂದು ಪ್ರೀತಿ ಪೂರ್ವಕವಾಗಿ ಅಪ್ಪಿಕೊಂಡು ಮುನ್ನಡೆದಿದ್ದಾರೆ’ ಎಂದರು‌

ADVERTISEMENT

ಇದಕ್ಕೂ ಮುನ್ನ ಬಸವಣ್ಣನ ಪ್ರತಿಮೆ ಬಳಿ ಭಾವಚಿತ್ರ ಇಟ್ಟು, ಹಾರ ಹಾಕಿ, ವಿಶೇಷ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿ, ಬಸವದಳ ಧ್ವಜ ಹಾರಿಸುವ ಮೂಲಕ ಜಯಂತಿ ಆಚರಿಸಿದರು.

ಬಿಜೆಪಿ ಕಾರ್ಯಾಲಯ: ಗಂಗಾವತಿ ನಗರದ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ನಾಯಕರು, ಕಾರ್ಯಕರ್ತರು ಶುಕ್ರವಾರ ಹೇಮರೆಡ್ಡಿ ಮಲ್ಲಮ್ಮ ಮತ್ತು ಬಸವಣ್ಣನವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಜಯಂತಿ ಆಚರಿಸಿದರು.

ಮಹಾಲಿಂಗಪ್ಪ, ಆರ್.ಪಿ.ರೆಡ್ಡಿ, ತಿಪ್ಪೇರುದ್ರಸ್ವಾಮಿ, ಜಿ.ಶ್ರೀಧರ, ಆನಂದ ಅಕ್ಕಿ, ಸಿದ್ದರಾಮಯ್ಯ ಸ್ವಾಮಿ, ಮಂಜುನಾಥ ಮಸ್ಕಿ, ಹೊಸಕೇರಾ ಶಂಕರಗೌಡ, ಕಾಶಿನಾಥ ಚಿತ್ರಗಾರ, ಶ್ರೀನಿವಾಸ ದೂಳ, ರಾಜೇಶ ರೆಡ್ಡಿ ಸೇರಿ ಸಮಾಜದ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.