ಕುಷ್ಟಗಿ: ‘ಸಮಾಜ ಸುಸ್ಥಿತಿಯಲ್ಲಿದ್ದು ಜನರ ಬದುಕು ಹಸನಾಗುವುದಕ್ಕೆ ಮಹಾಭಾರತ ಹಾಗೂ ರಾಮಾಯಣ ಎರಡೂ ಮಹಾಗ್ರಂಥಗಳನ್ನು ಅರ್ಥೈಸಿಕೊಂಡರೆ ಸಾಕು’ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ತಹಶೀಲ್ದಾರ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,‘ ಭಗವದ್ಗೀತೆಯಲ್ಲಿ ಬರುವ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಸಮಾಜ ಸುಭಿಕ್ಷೆಯಲ್ಲಿ ಇರಲು ಸಾಧ್ಯ. ಯಾದವ ಸಮಾಜದ ಏಳಿಗೆಗೆ ಸರ್ಕಾರದಿಂದ ದೊರೆಯಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಕಲ್ಲಿಸುವ ಮೂಲಕ ಆ ಸಮಾಜದ ಋಣ ತೀರಿಸಲಾಗುವುದು’ ಎಂದು ಹೇಳಿದರು.
ಯಾದವ ಸಮಾಜದ ಯುವ ಮುಖಂಡ ಉಮೇಶ ಯಾದವ ಮಾತನಾಡಿ,‘ಬದಲಾಗುತ್ತಿರುವ ಸಾಮಾಜಿಕ, ಶೈಕ್ಷಣಿಕ, ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಗೆ ಅನುಗುಣವಾಗಿ ಯಾದವ ಸಮುದಾಯ ಶೈಕ್ಷಣಿಕವಾಗಿ ಬೆಳೆಯುವತ್ತ ಆಸಕ್ತಿ ವಹಿಸಬೇಕು. ಸಾಂಪ್ರದಾಯಿಕ ವೃತ್ತಿಗೆ ಅಂಟಿಕೊಳ್ಳದೆ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸುವತ್ತ ಮುತುವರ್ಜಿವಹಿಸಬೇಕು’ ಎಂದರು.
ಶಿಕ್ಷಕ ದುರುಗಪ್ಪ ಗೊಲ್ಲರ ವಿಶೇಷ ಉಪನ್ಯಾಸ ನೀಡಿದರು.
ತಹಶೀಲ್ದಾರ್ ಅಶೋಕ ಶಿಗ್ಗಾಂವಿ ಹಾಗೂ ಇತರರು ಮಾತನಾಡಿದರು.
ಪ್ರಮುಖರಾದ ಕೆ.ಮಹೇಶ, ಬಸವರಾಜ ಹಳ್ಳೂರು, ತಾಲ್ಲೂಕು ಯಾದವ ಸಮಾಜದ ಅಧ್ಯಕ್ಷ ಶಿವಪ್ಪ ಮಿರ್ಜಿ, ಹನುಮಸಾಗರ ಗ್ರಾಮ ಪಂಚಾಯಿತಿ ಅಧ್ಯಕ್ಷ ರುದ್ರಗೌಡ, ಭೀಮನಗೌಡ ಕತ್ತಿ, ದುರುಗಪ್ಪ ಬಣಗಾರ, ಶರಣಪ್ಪ ತೆಗ್ಗಿನಮನಿ, ಮುತ್ತಪ್ಪ ಕಡೆಕೊಪ್ಪ, ದುರುಗಪ್ಪ ಬಿಸನಾಳ, ರಾಮನಗೌಡ ಕತ್ತಿ ಯಾದವ ಸಮಾಜದ ಪ್ರಮುಖರು ಹಾಗೂ ಯುವಕರು ಇದ್ದರು. ದ್ಯಾಮಣ್ಣ ಗೊಲ್ಲರ ನಿರೂಪಿಸಿದರು.
ನಂತರ ಶ್ರೀಕೃಷ್ಣ ಹೆಸರಿನ ವೃತ್ತವನ್ನು ಶಾಸಕ ದೊಡ್ಡನಗೌಡ ಪಾಟೀಲ ಗೋವಿಗೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿದರು.
ಪಟ್ಟಣದ ರಾಘವೇಂದ್ರಸ್ವಾಮಿ ಮಠದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಿಸಲಾಯಿತು. ಶನಿವಾರ ರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ನೀಡಲಾಯಿತು. ಭಾನುವಾರ ಅಲಂಕೃತ ರಥದಲ್ಲಿ ಶ್ರೀಕೃಷ್ಣನ ಉತ್ಸವ ಮೂರ್ತಿ ಇರಿಸಿ ರಥ ಎಳೆಯಲಾಯಿತು. ಈ ಸಂದರ್ಭದಲ್ಲಿ ಬ್ರಾಹ್ಮಣ ಸಮಾಜದ ಅನೇಕ ಹಿರಿಯರು, ಯುವಕರು, ಭಜನಾ ಮಂಡಳಿ ಸದಸ್ಯರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.