
ಕೊಪ್ಪಳ: ಕೇಂದ್ರ ರೈಲ್ವೆ ಸಚಿವ ವಿ.ಸೋಮಣ್ಣ ಅವರ ಮೇಲೆ ಹಲ್ಲೆಗೆ ಯತ್ನಿಸಿದವರ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಳ್ಳುವಂತೆ ಬಿಜೆಪಿ ನಿಯೋಗ ಪೊಲೀಸರನ್ನು ಒತ್ತಾಯಿಸಿದೆ.
ಬುಧವಾರ ಇಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್.ಎಲ್.ಅರಸಿದ್ದಿ ಅವರನ್ನು ಭೇಟಿ ಮಾಡಿದ ಪಕ್ಷದ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಕೆ.ಬಸವರಾಜ್, ವಿಧಾನ ಪರಿಷತ್ತಿನ ಸದಸ್ಯೆ ಹೇಮಲತಾ ನಾಯಕ, ಜಿಲ್ಲಾ ಬಿಜೆಪಿ ಅಧ್ಯಕ್ಷ ಬಸವರಾಜ ಧಡೇಸೂಗೂರು ಇತರರು ನಂತರ ಮಾತನಾಡಿ,‘ಹಿಟ್ನಾಳ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘಿಸಲಾಗಿದೆ ಎಂದು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಮೂಲಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಚಿವ ಸೋಮಣ್ಣ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಸಂಸದ ಹಾಗೂ ಶಾಸಕರ ತವರು ಊರಿನಲ್ಲಿ ಇಂಥ ಘಟನೆ ನಡೆದಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟಿಸಿದೆ’ ಎಂದರು.
‘ಶಿಷ್ಠಾಚಾರ ಉಲ್ಲಂಘನೆ ಎಂಬುದು ಕೇವಲ ನೆಪ ಆದರೆ ಸಚಿವರಿಗೆ ಅವಮಾನ ಮಾಡಬೇಕೆಂಬ ದುರುದ್ದೇಶ ಪೂರ್ವಯೋಜಿತ, ಕೇಂದ್ರ ಸಚಿವರಿಗೇ ರಕ್ಷಣೆ ಇಲ್ಲವೆಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಜಿಲ್ಲೆಯ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಸೋಮಣ್ಣ ಇಲ್ಲಿಗೆ ಆಗಮಿಸಿದ್ದರು. ಆದರೆ ಇಲ್ಲಿಯ ಕಾಂಗ್ರೆಸ್ ನಾಯಕರಿಗೆ ಅಭಿವೃದ್ಧಿ ಬೇಕಿಲ್ಲ ಹಾಗಾಗಿ ತಮ್ಮ ಪಟಾಲಂ ಮೂಲಕ ಇಂಥ ದೃಷ್ಕೃತ್ಯಗಳಿಗೆ ಕುಮ್ಮಕ್ಕು ನೀಡುವುದನ್ನೇ ತಮ್ಮ ಜಾಯಮಾನವನ್ನಾಗಿಸಿಕೊಂಡಿದ್ದಾರೆ. ಈ ಘಟನೆ ಉದ್ದೇಶಪೂರ್ವಕವಾಗಿಯೇ ನಡೆದಿದ್ದು ಷಡ್ಯಂತ್ರ ರೂಪಿಸಲಾಗಿದೆ’ ಎಂದು ಆರೋಪಿಸಿದರು.
ಈ ಘಟನೆಯಲ್ಲಿ ಭಾಗಿಯಾದವರ ಹಾಗೂ ಅದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ವಿಳಂಬ ಮಾಡದೆ ಸ್ವಯಂ ಪ್ರೇರಣೆಯಿಂದ ಎಫ್‌ಐಆರ್ ದಾಖಲಿಸಿಕೊಂಡು ತೀವ್ರಗತಿಯಲ್ಲಿ ತನಿಖೆ ನಡೆಸುವಂತೆ ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿರುವುದಾಗಿ ವಿವರಿಸಿದರು.
ಪಕ್ಷದ ಪ್ರಮುಖರಾದ ಅಪ್ಪಣ್ಣ ಪದಕಿ, ಎಸ್.ಆರ್.ಭೂಸನೂರಮಠ, ಪೀರಾ ಹುಸೇನ ಹೊಸಳ್ಳಿ, ರಾಘವೇಂದ್ರ ಪಾನಗಂಟಿ, ಈಶಪ್ಪ ಮಾದಿನೂರ, ರಾಜು ಬಾಕಳೆ, ಸುನೀಲ್ ಹೆಸರೂರ, ಉಮೇಶ, ರಮೇಶ ನಾಡಗೇರ, ರಾಜು ವಸ್ತ್ರದ ಇತರರು ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.