ADVERTISEMENT

ಕೇಂದ್ರದ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ

ಪತ್ರಿಕಾಗೋಷ್ಠಿಯಲ್ಲಿ ಸಂಸದ ಸಂಗಣ್ಣ ಕರಡಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2020, 13:40 IST
Last Updated 2 ಜೂನ್ 2020, 13:40 IST
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೇಂದ್ರ ಸರ್ಕಾರ ಎರಡನೇ ಬಾರಿಯ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು
ಕೊಪ್ಪಳ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಕೇಂದ್ರ ಸರ್ಕಾರ ಎರಡನೇ ಬಾರಿಯ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಂಸದ ಸಂಗಣ್ಣ ಕರಡಿ ಮಾತನಾಡಿದರು   

ಕೊಪ್ಪಳ: ‘ಭಷ್ಟಾಚಾರ ಮುಕ್ತ ಹಾಗೂ ಪಾರದರ್ಶಕ ಆಡಳಿತದಿಂದಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಸತತ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದಿದ್ದು, ಇದೀಗ ಒಂದು ವರ್ಷ ಪೂರೈಸಿದೆ‘ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.

ಕೇಂದ್ರ ಸರ್ಕಾರ ಎರಡನೇ ಬಾರಿಯ ಅಧಿಕಾರದಲ್ಲಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಘಟಕದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 353 ಸ್ಥಾನಗಳನ್ನು ಪಡೆದು ಬಹುಮತ ಸಾಧಿಸಿದರೆ. ಬಿಜೆಪಿ ಏಕ ಪಕ್ಷವೇ 303 ಸ್ಥಾನಗಳನ್ನು ಗೆದ್ದು ದಾಖಲೆ ನಿರ್ಮಿಸಿತ್ತು. ಅಲ್ಲದೆ ರಾಜ್ಯದಲ್ಲಿಯೂ 28 ಸ್ಥಾನಗಳಲ್ಲಿ 25 ಸ್ಥಾನಗಳ ಗೆಲುವಿನೊಂದಿಗೆ ಬಿಜೆಪಿ ಇತಿಹಾಸ ನಿರ್ಮಿಸಿದೆ ಎಂದರು.

ADVERTISEMENT

ಸಬ್‌ ಕಾ ಸಾಥ್,‌ ಸಬ್‌ ಕಾ ವಿಕಾಸ್ ಘೋಷವಾಕ್ಯದೊಂದಿಗೆ ಎರಡನೇ ಬಾರಿಗೆ ಸ್ಥಾಪನೆಗೊಂಡ ಕೇಂದ್ರ ಸರ್ಕಾರ ಆಡಳಿತ ವ್ಯವಸ್ಥೆಯಲ್ಲಿ ಸುಧಾರಣೆ, ತಂತ್ರಜ್ಞಾನ ಅಳವಡಿಕೆ ಮಾಡಿದೆ. ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ತ್ರಿವಳಿ ತಲಾಖ್‌ ಮಸೂದೆಯನ್ನು ರದ್ದುಗೊಳಿಸಿತು. ಜಮ್ಮು-ಕಾಶ್ಮೀರ ರಾಜ್ಯಕ್ಕೆ ಇದ್ದ ವಿಶೇಷಾಧಿಕಾರ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡುವ ಮೂಲಕ ಒಂದೇ ದೇಶ-ಒಂದೇ ಕಾನೂನು ಘೋಷಣೆಯನ್ನು ಎತ್ತಿ ಹಿಡಿದಿದೆ ಎಂದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ, ಎನ್‌ಆರ್‌ಸಿ)ಯನ್ನು ಜಾರಿಗೆ ತರಲಾಯಿತು. ಇದಕ್ಕೆ ಬಹುತೇಕ ರಾಜ್ಯಗಳ ಪಕ್ಷಾತೀತವಾಗಿ ಬೆಂಬಲ ದೊರೆಯಿತು. ರಾಮಮಂದಿರ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲ ಆದರೆ. ತೀರ್ಪಿನ ನಂತರ ದೇಶದಲ್ಲಿ ಕಿಂಚಿತ್ತೂ ಗಲಭೆ ನಡೆಯದಂತೆ ನಿಭಾಯಿಸಿದ ಕೇಂದ್ರದ ತಂತ್ರಗಾರಿಕೆ ಮೆಚ್ಚುವಂತಹದ್ದು ಎಂದರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅಪರಾಧಕ್ಕೆ ಮರಣದಂಡನೆ ಶಿಕ್ಷೆ ನೀಡುವ ಕಾಯ್ದೆಯನ್ನು ತರಲಾಯಿತು. ಚಂದ್ರಯಾನದಲ್ಲಿ ನಿರೀಕ್ಷಿತ ಯಶಸ್ಸು ಲಭಿಸದಿದ್ದರೂ, ಈ ಸಾಧನೆ ಮಾಡಿದ ವಿಶ್ವದ ಕೇಲವೇ ರಾಷ್ಟ್ರಗಳ ಸಾಲಿಗೆ ಭಾರತ ಸೇರ್ಪಡೆಗೊಂಡಿತು. ಮೂರು ಕಂತುಗಳಲ್ಲಿ ರೈತರಿಗೆ ₹ 6,000 ಸಹಾಯಧನ ನೀಡುವ ಯೋಜನೆ ಜಾರಿ ಮಾಡುವ ಮೂಲಕ ರೈತಪರ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ ಎಂದು ಸಂಗಣ್ಣ ಕರಡಿ ಹೇಳಿದರು.

ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡನಗೌಡ ಪಾಟೀಲ್‌, ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರಗೌಡ ಪಾಟೀಲ್ ಹಲಗೇರಿ‌, ಮಾಜಿ ಶಾಸಕರಾದ ಕೆ.ಶರಣಪ್ಪ, ನವೀನ್‌ ಗುಳಗಣ್ಣನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.