ADVERTISEMENT

ಹೇಮಲತಾಗೆ ಟಿಕೆಟ್‌: ಬಿಜೆಪಿ ಕಾರ್ಯಕರ್ತರ ಹರ್ಷ

ಕಲ್ಯಾಣ ಕರ್ನಾಟಕಕ್ಕೆ ಪ್ರಾತಿನಿಧ್ಯ, ವಾಲ್ಮೀಕಿ ಸಮಾಜ, ಮಹಿಳಾ ಕೋಟಾದಡಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಮೇ 2022, 3:09 IST
Last Updated 25 ಮೇ 2022, 3:09 IST
ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು, ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಹೊರಡಲು ಸಿದ್ಧರಾದ ಹೇಮಲತಾ ನಾಯಕ ಅವರನ್ನು ಕೊಪ್ಪಳದಲ್ಲಿ ಮಂಗಳವಾರ ಅಭಿಮಾನಿಗಳು ಅಭಿನಂದಿಸಿದರು
ವಿಧಾನ ಪರಿಷತ್‌ಗೆ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು, ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಹೊರಡಲು ಸಿದ್ಧರಾದ ಹೇಮಲತಾ ನಾಯಕ ಅವರನ್ನು ಕೊಪ್ಪಳದಲ್ಲಿ ಮಂಗಳವಾರ ಅಭಿಮಾನಿಗಳು ಅಭಿನಂದಿಸಿದರು   

ಕೊಪ್ಪಳ: ಬಿಜೆಪಿ ರಾಜ್ಯ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ, ಇಲ್ಲಿನ ವಕೀಲರೂ ಆಗಿರುವಹೇಮಲತಾ ನಾಯಕ ಅವರು ವಿಧಾನ ಪರಿಷತ್‌ ಕಣಕ್ಕೆ ಇಳಿದಿದ್ದಾರೆ. ಇದರಿಂದ ಜಿಲ್ಲೆಯ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿದೆ.

ಬಿಜೆಪಿಯಿಂದ ಸ್ಪರ್ಧಿಸುವಂತೆ ಮಂಗಳವಾರ ಬೆಳಿಗ್ಗೆ ಹೇಮಲತಾ ಅವರಿಗೆ ಕರೆ ಬಂದ ತಕ್ಷಣ ಕಾರ್ಯಕರ್ತರು ಸಂಭ್ರಮಪಟ್ಟರು. ಪಕ್ಷದಿಂದಲೇ ಕಳುಹಿಸಿದ ಹೆಲಿಕಾಪ್ಟರ್‌ನಲ್ಲಿ ಅವರನ್ನು ಬೆಂಗಳೂರಿಗೆ ಬೀಳ್ಕೊಟ್ಟರು.ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಜೊತೆಗೂಡಿ ಅವರು ತಮ್ಮ ಉಮೇದುವಾರಿಕೆ ಸಲ್ಲಿಸಿದರು.

ಎರಡು ದಶಕಗಳಿಂದಲೂ ಕಟ್ಟಾ ಬಿಜೆಪಿ ಕಾರ್ಯಕರ್ತೆ ಆಗಿರುವ ಹೇಮಲತಾ, ಸಂಘ ಪರಿವಾರದಲ್ಲೂ ಗುರುತಿಸಿಕೊಂಡಿದ್ದಾರೆ. ಒಂದು ಅವಧಿಗೆ ರಾಜ್ಯ ವಕೀಲರ ಸಂಘದ ಮಹಿಳಾ ಘಟಕದ ಅಧ್ಯಕ್ಷರೂ ಆಗಿದ್ದರು. ಬಿಜೆಪಿ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಜಿಲ್ಲೆಯ ಭಾಗ್ಯನಗರ ಪಟ್ಟಣ ಪಂಚಾಯಿತಿಗೆ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ, ಅಧಿಕಾರ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ADVERTISEMENT

ಅವರ ಪತಿ ಪರಿಷಿತ್‌ರಾಜ ನಿವೃತ್ತ ಪ್ರಾಧ್ಯಾಪ‍ಕರಾಗಿದ್ದು, ಈಗ ಉದ್ಯಮಿಯಾಗಿದ್ದಾರೆ. ಇವರುಸುರಪುರ ಸಂಸ್ಥಾನದ ಪಾಳೇಗಾರರ ಸಹೋದರ ಸಂಬಂಧಿ. ಹೇಮಲತಾ ಕೂಡ ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕ ಶಿವನಗೌಡ ನಾಯಕ ಅವರ ಸಹೋದರ ಸಂಬಂಧಿ.

‘ಹೇಮಲತಾ ವಾಲ್ಮೀಕಿ ಸಮುದಾಯಕ್ಕೆ ಸೇರಿದರು. ಕಲ್ಯಾಣ ಕರ್ನಾಟಕದ ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ ಸೇರಿದಂತೆ ಎಲ್ಲ ಜಿಲ್ಲೆಗಳಲ್ಲಿಯೂ ವಾಲ್ಮೀಕಿ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ವಾಲ್ಮೀಕಿ ಸಮುದಾಯ, ಕಲ್ಯಾಣ ಕರ್ನಾಟಕ ಹಾಗೂ ಮಹಿಳಾ ಪ್ರಾತಿನಿಧ್ಯ ಕೋಟಾದಡಿ ಹೇಮಲತಾ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ‘ ಎನ್ನುವುದು ಪಕ್ಷದ ಮೂಲಗಳ ಮಾಹಿತಿ.

‘ಹೇಮಲತಾ ಅವರು ಒಳ್ಳೆಯ ವಾಗ್ಮಿ. ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಸಿದ್ಧಾಂತಗಳ ಬಗ್ಗೆ ಹೆಚ್ಚು ಶ್ರದ್ಧೆ ಇಟ್ಟುಕೊಂಡಿದ್ದಾರೆ. ಅವರ ಸಂಘಟನಾ ಚತುರತೆಯ ಕಾರಣ ಪಕ್ಷದ ಜಿಲ್ಲಾ ಮಹಿಳಾ ಘಟಕ ಸದೃಢವಾಗಿದೆ. ಅವರಿಗೆ ಟಿಕೆಟ್‌ ನೀಡಿದ್ದು ಖುಷಿ ತಂದಿದೆ’ ಎಂದು ಪಕ್ಷದ ಮುಖಂಡರು ಸಂಭ್ರಮ ಹಂಚಿಕೊಂಡರು.

‘ಹೇಮಲತಾ ಅವರ ಆಯ್ಕೆಯ ಮೂಲಕ ‘ಪ‍ಕ್ಷದ ನಿಷ್ಠಾವಂತ ಕಾರ್ಯಕರ್ತರಿಗೂ ಆದ್ಯತೆ ಇದೆ’ ಎಂಬ ಸಂದೇಶವನ್ನು ಬಿಜೆಪಿ ರವಾನಿಸಿದೆ’ ಎನ್ನುತ್ತಾರೆ ಅವರು.

ರಾಜಕೀಯ ಹಿನ್ನೆಲೆ ಏನು?

ಈಗಿನ ಸಂಸದ ಸಂಗಣ್ಣ ಕರಡಿ ಅವರು2006ರಲ್ಲಿ ಜೆಡಿಎಸ್ ಸೇರ್ಪಡೆಯಾಗಿದ್ದರು. ಆಗ ಹೇಮಲತಾ ನಾಯಕ ಕೂಡ ಜೆಡಿಎಸ್ ಸೇರಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾಗಿದ್ದರು. 2007ರ ನಗರಸಭಾ ಚುನಾವಣೆಯಲ್ಲಿ ಕೊಪ್ಪಳದ 19ನೇ ವಾರ್ಡಿನಲ್ಲಿ ಸ್ಪರ್ಧಿಸಿ ಪರಾಭವಗೊಂಡಿದ್ದರು. ನಗರಸಭಾ ಚುನಾವಣೆಗೆ ಸ್ಪರ್ಧಿಸಿದ್ದ ಅವರಿಗೆಈಗ ವಿಧಾನ ಪರಿಷತ್‌ಗೆ ಸ್ಪರ್ಧಿಸುವ ಅವಕಾಶ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.