ADVERTISEMENT

ಸರಿಯಾಗಿ ವಾದ ಮಾಡಿದರೆ ಬಿಎಸ್‌ವೈ ಜೈಲಿಗೆ: ಯತ್ನಾಳ

ಮಾಧ್ಯಮಗಳ ಜೊತೆ ಜಟಾಪಟಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2025, 0:02 IST
Last Updated 1 ಏಪ್ರಿಲ್ 2025, 0:02 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ಕೊಪ್ಪಳ: ‘ಬಿಜೆಪಿ ಹಾಗೂ ಕಾಂಗ್ರೆಸ್‌ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದು, ಪೋಕ್ಸೊ ಪ್ರಕರಣದಲ್ಲಿ ಸರ್ಕಾರ ನ್ಯಾಯಾಲಯದಲ್ಲಿ ಸರಿಯಾಗಿ ವಾದ ಮಾಡಿದರೆ ಬಿ.ಎಸ್‌. ಯಡಿಯೂರಪ್ಪ ಜೈಲಿಗೆ ಹೋಗುತ್ತಾರೆ’ ಎಂದು ಬಿಜೆಪಿಯಿಂದ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಕಾಂಗ್ರೆಸ್ ಮುಸ್ಲಿಮರ ಪಕ್ಷ. ಅಲ್ಲಿಗೆ ಹೋಗುವುದಿಲ್ಲ. ಈ ಕುರಿತು ಸಾಕಷ್ಟು ಅಪಪ್ರಚಾರ ನಡೆಯುತ್ತಿದೆ. ಬಿ.ವೈ. ವಿಜಯೇಂದ್ರನ ನಕಲಿ ಸಾಮಾಜಿಕ ತಾಣಗಳು ಇದಕ್ಕಾಗಿ ಕೆಲಸ ಮಾಡುತ್ತಿವೆ. ಕೆಲವು ಮಾಧ್ಯಮಗಳು ಕೂಡ ವಿಜಯೇಂದ್ರ ಹಾಗೂ ಯಡಿಯೂರಪ್ಪಗೆ ಬೆಂಬಲವಾಗಿ ನಿಂತಿವೆ’ ಎಂದು ಹರಿಹಾಯ್ದರು.

‘ರಾಜ್ಯದಾದ್ಯಂತ ಸುತ್ತಾಡಿ ವಿಜಯದಶಮಿ ತನಕ ಜನರ ಅಭಿಪ್ರಾಯ ಸಂಗ್ರಹಿಸಿ ಬಳಿಕ ಮುಂದಿನ ನಡೆ ನಿರ್ಧರಿಸುವೆ. ವೀರಶೈವ ಲಿಂಗಾಯತರಿಗೆ ಮೀಸಲಾತಿ ತಪ್ಪಿಸಿದ್ದೇ ಅಪ್ಪ–ಮಗ. ನಮ್ಮನ್ನು ಜೈಲಿಗೆ ಹಾಕಿಸಲು ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿರುವ ಲಿಂಗಾಯತ ಐಪಿಎಸ್‌ ಅಧಿಕಾರಿಯೊಬ್ಬರನ್ನು ವಿಜಯೇಂದ್ರ ನಮ್ಮ ಬಳಿ ಕಳುಹಿಸಿದ್ದ’ ಎಂದರು. ಯಾರು ಆ ಐಪಿಎಸ್‌ ಅಧಿಕಾರಿ ಎಂದು ಪ್ರಶ್ನಿಸಿದ್ದಕ್ಕೆ ‘ಮಾಧ್ಯಮದವರೇ ನಾಟಕ ಕಂಪನಿ ಬಂದ್‌ ಮಾಡಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

‘ವಿಜಯೇಂದ್ರ ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುವ ಪ್ರಶ್ನೆಗಳನ್ನು ನನಗೆ ಕೇಳುತ್ತೀರಾ?’ ಎಂದರು. ನೀವು ಜೋರು ಮಾತನಾಡುವುದಾದರೆ ‘ಗೇಟ್‌ ಔಟ್‌’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೈಕಮಾಂಡ್‌ ವಿರುದ್ಧವೂ ಗರಂ: ‘ಅಪ್ಪ– ಮಗ ಲಿಂಗಾಯತರು ಹಾಗೂ ಬಿಜೆಪಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡಿದ್ದಾರೆ. ಮುಖ್ಯಮಂತ್ರಿ ಆಗಿ ಜೈಲಿಗೆ ಹೋದ ಯಡಿಯೂರಪ್ಪ, ಅಪ್ಪನ ಸಹಿ ನಕಲಿ ಮಾಡಿದ ಮಗ; ಇಂಥ ಕುಟುಂಬಕ್ಕೆ ಬಿಜೆಪಿ ಹೈಕಮಾಂಡ್‌ ನನ್ನನ್ನು ಉಚ್ಚಾಟಿಸುವ ಮೂಲಕ ಬೆಂಬಲವಾಗಿ ನಿಂತಿದೆ. ಹೈಕಮಾಂಡ್‌ ರಾಜ್ಯದಲ್ಲಿ ಬಿಜೆಪಿಯನ್ನು ಯಡಿಯೂರಪ್ಪಗೆ ಲೀಸ್‌ ಕೊಟ್ಟಿದೆಯಾ? ಅಥವಾ ಆ ಕುಟುಂಬಕ್ಕೆ ಮಾರಾಟವಾಗಿದೆಯೇ ಎನ್ನುವ ಪ್ರಶ್ನೆ ರಾಜ್ಯದ ಜನರಲ್ಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.