ಅಳವಂಡಿ: ಸಮೀಪದ ಮೈನಹಳ್ಳಿ ಗ್ರಾಮದ ಆರಾಧ್ಯ ದೇವತೆ ಶಿವಶರಣೆ ಬುಡ್ಡಮ್ಮದೇವಿಯ ರಥೋತ್ಸವ ಗುರುವಾರ ಅದ್ದೂರಿಯಾಗಿ ನೆರವೇರಿತು.
ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವಕ್ಕೆ ಚಾಲನೆ ಸಿಗುತ್ತಿದ್ದಂತೆ ಭಕ್ತರು ಭಕ್ತಿ–ಭಾವದಿಂದ ರಥೋತ್ಸವಕ್ಕೆ ಉತ್ತತ್ತಿ, ಹಣ್ಣು, ಹೂಗಳನ್ನು ಎಸೆದು ಹರಕೆ ತೀರಿಸಿದರು. ರಥೋತ್ಸವವನ್ನು ಭಕ್ತ ಸಮೂಹ ವಿಶೇಷ ಹೂವಿನ ಹಾರ, ಹಣ್ಣು, ಬಾಳೆದಿಂಡು, ಮಾವಿನ ಎಲೆಗಳಿಂದ ಸಿಂಗರಿಸಲಾಗಿತ್ತು.
ಬೆಳಿಗ್ಗೆ ಬುಡ್ಡಮ್ಮ ದೇವಿಯ ಮೂರ್ತಿಯನ್ನು ಡೊಳ್ಳು, ಭಜನೆ ಮೆರವಣಿಗೆ ಮುಖಾಂತರ ಗ್ರಾಮದ ಮುಖ್ಯ ಬೀದಿಗಳಲ್ಲಿ ಸಂಚರಿಸಿ ನಂತರ ದೇವಸ್ಥಾನಕ್ಕೆ ತಲುಪಿತು. ದೇವಿಗೆ ವಿಶೇಷ ಪೂಜೆ, ಅಭಿಷೇಕ ನಡೆಯಿತು. ರಥೋತ್ಸವವು ಪಾದಗಟ್ಟಿವರೆಗೂ ತಲುಪಿ ನಂತರ ವಾಪಸ್ ಬಂದಾಗ ಭಕ್ತರ ಬುಡ್ಡಮ್ಮ ದೇವಿ ಮಹಾರಾಜಕೀ ಜೈ ಎಂದು ಘೋಷಣೆ ಕೂಗಿದರು. ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
ಚಿದಾನಂದ ಸ್ವಾಮೀಜಿ, ಹಿರಿಶಾಂತವೀರ ಸ್ವಾಮೀಜಿ, ಒಪ್ಪತೇಶ್ವರ ಸ್ವಾಮೀಜಿ, ಮರುಳಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಅತ್ಯಾನಂದ ಭಾರತಿ ಸ್ವಾಮೀಜಿ, ಗೋಣಿ ಬಸವೇಶ್ವರ ಸ್ವಾಮೀಜಿ, ಮೃತ್ಯುಂಜಯ ಶಿವಾಚಾರ್ಯರು ಸೇರಿದಂತೆ ವಿವಿಧ ಮಠಾಧೀಶರು, ಗಣ್ಯರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.