ADVERTISEMENT

ವಿಜಯನಗರ ಕಾಲುವೆಯಲ್ಲಿ ಹೂಳು: ತುರ್ತು ಕ್ರಮ ಕೈಗೊಳ್ಳುವುದೇ ಇಲಾಖೆ?

​ಪ್ರಜಾವಾಣಿ ವಾರ್ತೆ
Published 21 ಜೂನ್ 2022, 4:35 IST
Last Updated 21 ಜೂನ್ 2022, 4:35 IST
ವಿಜಯ ನಗರ ಕಾಲುವೆಯಲ್ಲಿ ಹೂಳು ತುಂಬಿರುವುದು
ವಿಜಯ ನಗರ ಕಾಲುವೆಯಲ್ಲಿ ಹೂಳು ತುಂಬಿರುವುದು   

ಕೊಪ್ಪಳ: ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿಯಾಗಿರುವ ತುಂಗಭದ್ರ ಅಣೆಕಟ್ಟೆಯ ವಿಜಯನಗರ ಕಾಲುವೆಗಳ ಆಧುನೀಕರಣಕ್ಕೆ ಸರ್ಕಾರ ಕೋಟ್ಯಂತರ ರೂಪಾಯಿ ಖರ್ಚು ಮಾಡಿದರೂ, ಹೂಳು ಹೋಗಿಲ್ಲ.

‘ಕಾಮಗಾರಿ ಬಹುತೇಕ ಈಗ ಪೂರ್ಣಗೊಳ್ಳುವ ಹಂತದಲ್ಲಿದ್ದು, ಒಂದು ವರ್ಷದ ಅವಧಿಯಲ್ಲಿ ಶೇ 60ರಷ್ಟು ಹೂಳು ತುಂಬಿಕೊಂಡಿದೆ. ಕರ್ನಾಟಕ ನೀರಾವರಿ ನಿಗಮ ನಿಗದಿಪಡಿಸಿರುವ ವಿನ್ಯಾಸದಂತೆ ಕಾಮಗಾರಿ ನಡೆಸಲಾಗುತ್ತಿದೆ ಎಂದು ಗುತ್ತಿಗೆ ಪಡೆದ ಕಂಪನಿ ಹೇಳುತ್ತಿದೆ. ಈ ಕಾಲುವೆಗಳು ಭೂಮಿಯ ಮೇಲ್ಮಟ್ಟ ದಿಂದ ಸುಮಾರು 6ರಿಂದ 8 ಅಡಿಗಳ ಕೆಳಭಾಗದಲ್ಲಿ ಹರಿದುಹೋಗುತ್ತವೆ. ಆದರೆ, ಕೇವಲ ನಾಲ್ಕು ಅಡಿಗಳ ಎತ್ತರದಲ್ಲಿ ಕಾಂಕ್ರಿಟ್‌ ಹಾಕಲಾಗಿದೆ. ಈ ಕಾಲುವೆಗಳ ಎರಡೂ ಕಡೆಯ ಗೋಡೆಗಳು ಮತ್ತು ಕೆಳಭಾಗದಲ್ಲಿ ಸ್ಟೀಲ್‌ ತಂತಿ ಹಾಕಿಲ್ಲ‘ ಎಂದುಕರ್ನಾಟಕ ರಾಜ್ಯ ಗುತ್ತಿಗೆ ಕಾರ್ಮಿಕರ ಸಲಹಾ ಮಂಡಳಿ ಸದಸ್ಯ ಪಂಪಾಪತಿ ರಾಟಿ ಆರೋಪಿಸಿದ್ದಾರೆ.

‘ಅವೈಜ್ಞಾನಿಕವಾಗಿದ್ದರೂ ಕಾಮಗಾರಿ ಮುಂದುವರಿದಿದ್ದು ಮುಂದಿನ ದಿನಗಳಲ್ಲಿ ರೈತರಿಗೆ ಸುಗಮವಾಗಿ ನೀರು ಕೊಡಲು ತೊಂದರೆಯಾಗುತ್ತದೆ. ಇದರಿಂದ ಹೊಲ ಗದ್ದೆಗಳಿಗೆ ನೀರು ಹರಿಸುವ ಕಾರ್ಮಿಕರಿಗೂ, ರೈತರಿಗೂ ಸಮಸ್ಯೆ ಎದುರಾಗುತ್ತದೆ. ಜನ ಪ್ರತಿನಿಧಿಗಳು ಸ್ಥಳ ಪರಿಶೀಲಿಸಿ ತಕ್ಷಣ ಕ್ರಮ ಕೈಗೊಳ್ಳಬೇಕು‘ ಎಂದು ಅವರು ಆಗ್ರಹಿಸಿದ್ದಾರೆ.

ADVERTISEMENT

ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಅಗಳಕೇರಾ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಮರೇಶ್ ’ಕಾಲುವೆಯಲ್ಲಿ ಹೂಳು ತುಂಬಿರುವ ವಿಚಾರ ನನ್ನ ಗಮನಕ್ಕೆ ಬಂದಿದೆ. ಮಂಗಳವಾರ ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆಯ ಬಳಿಕ ಸ್ಥಳ ಪರಿಶೀಲನೆ ಮಾಡುತ್ತೇನೆ‘ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.