ADVERTISEMENT

ಕಾರಟಗಿ | ಗಂಗೆಸ್ಥಳ ಇಂದು: ಜೋಡು ರಥೋತ್ಸವ ನಾಳೆ

ಕೆ.ಮಲ್ಲಿಕಾರ್ಜುನ
Published 1 ಸೆಪ್ಟೆಂಬರ್ 2025, 7:13 IST
Last Updated 1 ಸೆಪ್ಟೆಂಬರ್ 2025, 7:13 IST
ಶರಣಬಸವೇಶ್ವರರ ಮೂರ್ತಿ
ಶರಣಬಸವೇಶ್ವರರ ಮೂರ್ತಿ   

ಕಾರಟಗಿ: ಪಟ್ಟಣದಲ್ಲಿ ಶರಣಬಸವೇಶ್ವರ ಪುರಾಣ, ಗಂಗಸ್ಥಳಕ್ಕೆ ಹೋಗಿ ಬರುವ ಅದ್ದೂರಿ ಮೆರವಣಿಗೆ, ಜೋಡು ರಥೋತ್ಸವ, ಪುರಾಣ ಮಂಗಲದೊಂದಿಗೆ ಶ್ರಾವಣ ಮಾಸದ ಸಂಭ್ರಮಕ್ಕೆ ತೆರೆ ಬೀಳಲಿದೆ.

ಸೆಪ್ಟೆಂಬರ್‌ 1ರಂದು ಸೋಮವಾರ ಗಂಗೆಸ್ಥಳದ ಮೆರವಣಿಗೆ, ಶರಣಬಸವೇಶ್ವರರ ಬೆಳ್ಳಿ ಮೂರ್ತಿಗಳ ಪಲ್ಲಕ್ಕಿ ಉತ್ಸವದೊಂದಿಗೆ ನಡೆಯುವುದು. ಸೆಪ್ಟೆಂಬರ್‌ 2ರಂದು ಮಂಗಳವಾರ ಅಪಾರ ಭಕ್ತರ ಮಧ್ಯೆ ಜೋಡು ರಥೋತ್ಸವ ನಡೆಯುವುದು.

ಅದ್ದೂರಿ ರಥೋತ್ಸವಕ್ಕೆ ಸಾಕ್ಷಿಯಾಗುವ ಭಕ್ತರು (ಸಂಗ್ರಹ ಚಿತ್ರ)

ಕಳೆದ ವರ್ಷ ಮುಸ್ಲಿಮರು ಪುರಾಣಕ್ಕೆ ಆಗಮಿಸಿ, ಹಿಂದೂಗಳು ಮಸೀದಿಗೆ ತೆರಳಿ ಪರಸ್ಪರ ಸನ್ಮಾನ, ಗೌರವ ಸಮರ್ಪಣೆ ಮಾಡಿ ಭಾವೈಕ್ಯ ಸಾರಿದ್ದರು.

ADVERTISEMENT

ಶ್ರಾವಣದಲ್ಲಿ ನಡೆದಿರುವ ಕಲಬುರಗಿ ಶರಣಬಸವೇಶ್ವರ ಪುರಾಣ ಪ್ರವಚನ ಸುವರ್ಣ ಸಂಭ್ರಮದ ಗಡಿ (51ನೇ ವರ್ಷ) ದಾಟಿದೆ. ಗಂಡನ ಮನೆಗೆ ಹೋದ ಇಲ್ಲಿಯ ಹೆಣ್ಣುಮಕ್ಕಳು ಮನೆಯ ಕಾರ್ಯಕ್ರಮವೆಂಬಂತೆ ಕುಟುಂಬ ಪರಿವಾರದೊಂದಿಗೆ ಆಗಮಿಸಿ, ಸಂಭ್ರಮವನ್ನು ಸವಿದು ತೆರಳುವುದು ಸಂಪ್ರದಾಯವಾಗಿದೆ.

ಕಾರಟಗಿಯ ಆಕರ್ಷಣೀಯ ಕೇಂದ್ರವೆನಿಸಿರುವ ಒಂದೆಡೆ ಇರುವ ವಿವಿಧ ದೇವಸ್ಥಾನಗಳ ಪ್ರಾಂಗಣದ ಹೊರನೋಟ

ಈ ಬಾರಿ ರಥಕ್ಕೆ ಬೆಳ್ಳಿಯ ಕಳಸ ಧಾರಣೆ, ರಥಕ್ಕೆ 4 ಕಲ್ಲಿನ ಗಾಲಿ ಮಾಡಿಸಿರುವುದು ಸಂಭ್ರಮದ ಕಳೆಯನ್ನು ಹೆಚ್ಚಿಸಿದೆ.


ಪುರಾಣ ಪ್ರವಚನದ ನಿಮಿತ್ತ ಸಾಮೂಹಿಕ ವಿವಾಹ, ಸೀಮಂತ ಕಾರ್ಯಕ್ರಮ, ಸಾವಿರಾರು ಮಹಿಳೆಯರಿಗೆ ಉಡಿ ತುಂಬುವುದು, ಪ್ರತಿ ಮನೆಯ ಮಹಿಳೆಯರು ಶೇಂಗಾ ಹೋಳಿಗೆ ಸಹಿತ ವಿವಿಧ ವಸ್ತುಗಳ ಸಮರ್ಪಣೆ, ನಿತ್ಯ ಅನ್ನ ಸಂತರ್ಪಣೆಯಂತಹ ಅನೇಕ ಭಕ್ತಿಯ ಪ್ರಕ್ರಿಯೆಗಳು ಸರದಿಯಲ್ಲಿ ನಡೆಯುತ್ತಿವೆ.

ಗಂಗಾವತಿ ಆರಾಧ್ಯ ದೈವ ಖ್ಯಾತಿಯ ಚನ್ನಬಸವತಾತನವರು ಹಿಂದೆ ಪಟ್ಟಣದಲ್ಲಿ ‘ಗಂಗಾವತಿ ಛೋಟಾ ಬಾಂಬೆ, ಕಾರಟಗಿ ಕಲ್ಯಾಣ ಕೇಂದ್ರ’ ಆಗುತ್ತೆ ಎಂದಿದ್ದರಂತೆ. ಅವರ ವಾಣಿ ಸಾಕಾರಗೊಂಡಿದೆ ಎಂಬುದು ಜನರ ನಂಬಿಕೆಯಾಗಿದೆ.

ಜೋಡು ರಥ: ಪುರಾಣ ಪ್ರವಚನ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ತೇರು ಎಳೆಯುವುದು ಶ್ರೇಷ್ಠ ಎಂಬ ಭಾವನೆ, ಪ್ರೇರಣೆ ಎಂದುಕೊಂಡ ದಿ. ಕೊಟ್ರಬಸಪ್ಪ ಸಜ್ಜನ್‌ ರಥ ಮಾಡಿಸಿದ್ದರು.
‘ಸ್ವಂತ ಹಣ ವ್ಯಯಿಸಿ ತೇರು ಮಾಡಿಸುವ ಸಂಕಲ್ಪದೊಂದಿಗೆ ಮುಂದಾದೆ, ಆತ್ಮೀಯರು ದೈವದ ಪಾಲುದಾರಿಕೆ ಅವಶ್ಯಕ ಎಂದು ಮನವೊಲಿಸಿದ್ದರಿಂದ ಅನೇಕರು ತೇರು ನಿರ್ಮಾಣಕ್ಕೆ ದೇಣಿಗೆ ನೀಡಿದರು. 1999ರಿಂದ ಜೋಡು ರಥೋತ್ಸವ ಜನಸಾಗರದ ಮಧ್ಯೆ ನಡೆಯುತ್ತಿದೆ’ ಎಂದು ಮೆಲುಕು ಹಾಕಿದರು.
ಇದೇ ಸೋಮವಾರ ಗಂಗಾಪೂಜೆ ಸಲ್ಲಿಸಿ, ಪಲ್ಲಕ್ಕಿ ಸೇವೆಯೊಂದಿಗೆ ಗಂಗೆಸ್ಥಳದ ಅದ್ದೂರಿ ಮೆರವಣಿಗೆ ತುಂಗಭದ್ರಾ ಕಾಲುವೆಯಿಂದ ಆರಂಭಗೊಳ್ಳುವುದು. ಪಟ್ಟಣ ಸಹಿತ ವಿವಿಧೆಡೆಯ ಹತ್ತಾರು ಸಾವಿರ ಭಕ್ತರು ಪಾಲ್ಗೊಳ್ಳುವರು.


ಊರ ಜಾತ್ರೆ ಎಲ್ಲಾ ಜಾತಿ ಜನಾಂಗದವರು ಪಾಲ್ಗೊಳ್ಳುವುದು ವಿಶೇಷ. ಇಂಥಹ ಉತ್ಸವಗಳಿಂದ ಶಾಂತಿ ನೆಲೆಸುವುದು. ಎಲ್ಲೆಡೆಯೂ ಇವು ನಡೆಯಬೇಕು.
ಮುತ್ತಯ್ಯಸ್ವಾಮಿ ಪ್ರಧಾನ ಅರ್ಚಕ
ಮಹಾದ್ವಾರ ಅಡುಗೆ ಮನೆ ಬೆಳ್ಳಿ ಅಳವಡಿಕೆ ಸಹಿತ ಅನೇಕ ಅಭಿವೃದ್ಧಿ ಕೆಲಸ ಮಾಡಿದ್ದೇವೆ. ಜನರ ಹಣ ಜನರ ಅನುಭವಿಸುವಿಕೆಗೇ ವಿನಿಯೋಗಿಸಿದ್ದಕ್ಕೆ ಸಂತೃಪ್ತಿ ಇದೆ
ಕುಳಗಿ ಗುಂಡಪ್ಪ ಪುರಾಣ ಸಮಿತಿ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.