ಅಂಜನಾದ್ರಿ (ಕೊಪ್ಪಳ): ಚಳಿಯ ನಡುವೆಯೂ ಬರಿ ಮೈಲಿ ಬೆಟ್ಟವೇರಿದ ಖುಷಿ, ಹನುಮನಾಮ ಜಪದ ಅನುರಣನ, ಸೆಲ್ಫಿ ಸಂಭ್ರಮ, ತಮ್ಮ ನೆಚ್ಚಿನ ನಟರ ಫೋಟೊ ಹಿಡಿದುಕೊಂಡು ಅಭಿಮಾನ
ವ್ಯಕ್ತಪಡಿಸಿದ ಯುವಕರು.
ಈ ಎಲ್ಲ ದೃಶ್ಯಗಳು ಶುಕ್ರವಾರ ಬೆಳಗಿನ ಜಾವ ಕಂಡು ಬಂದಿದ್ದು ಅಂಜನಾದ್ರಿ ಬೆಟ್ಟದಲ್ಲಿ. ಹನುಮ ಮಾಲೆ ವಿಸರ್ಜನೆ ಅಂಗವಾಗಿ ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ಸಂಖ್ಯೆಯ ಭಕ್ತರು ಅದರಲ್ಲಿಯೂ ಯುವಕರೇ ಹೆಚ್ಚಾಗಿ ಬೆಟ್ಟಕ್ಕೆ ಬಂದಿದ್ದರು.
ಪ್ರತಿ ವರ್ಷ ನಿರ್ದಿಷ್ಟ ದಿನದಂದು ಮಾತ್ರ ಮಾಲಾಧಾರಿಗಳು ಮಾಲೆ ವಿಸರ್ಜನೆ ಮಾಡುತ್ತಿದ್ದರು. ಈ ಬಾರಿ ಒಂದು ದಿನ ಮೊದಲೇ ಹನುಮ ವ್ರತದ ಸಮಯದಲ್ಲಿ ಗಂಧದ ಹಾರವನ್ನು ಅಂಜನಾದ್ರಿ ಬೆಟ್ಟದ ಮೇಲೆ ತೆಗೆಯುವ ಮೂಲಕ ವ್ರತ ಪೂರ್ಣಗೊಳಿಸಿದರು. ಹೀಗಾಗಿ ಎರಡೂ ದಿನ ಮಾಲೆ ವಿಸರ್ಜನೆ ಕಾರ್ಯಕ್ರಮ
ಜರುಗಿತು.
ಕಲಬುರಗಿ, ಬೀದರ್, ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಗದಗ, ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಭಕ್ತರು ಇಲ್ಲಿಗೆ ಬಂದಿದ್ದರು. ಹಲವರು ವಾಹನಗಳಲ್ಲಿ ಬಂದರೆ, ಇನ್ನು ಕೆಲವರು ಪಾದಯಾತ್ರೆಯ ಮೂಲಕ ಅಂಜನಾದ್ರಿಗೆ ಬಂದು ಪೂಜಾ ಕೈಂಕರ್ಯ ಪೂರ್ಣಗೊಳಿಸಿದರು. ಐದು ಹಾಗೂ ಒಂಬತ್ತು ದಿನ ಮೈಮೇಲೆ ಕೇಸರಿ ಬಟ್ಟೆ ಹಾಗೂ ಕೊರಳಲ್ಲಿ ಮಾಲೆ ಧರಿಸುವುದು ಹನುಮಮಾಲಾ ವ್ರತ ಪ್ರಮುಖ ಆಚರಣೆಯಾಗಿದೆ.
ತುಂಗಭದ್ರಾ ನದಿಯ ಸಮೀಪದಲ್ಲಿಯೇ ಅಂಜನಾದ್ರಿ ಬೆಟ್ಟ ಇರುವುದರಿಂದ ಸಾವಿರಾರು ಭಕ್ತರು ಗುರುವಾರ ರಾತ್ರಿಯೇ ಇಲ್ಲಿಗೆ ಬಂದು ನದಿಯಲ್ಲಿ ಸ್ನಾನ ಮಾಡಿ ಸೂರ್ಯೋದಯಕ್ಕೂ ಮೊದಲು ಆಂಜನೇಯನ ಮೂರ್ತಿಯ ದರ್ಶನ ಪಡೆದರು. ಬಳಿಕ ಬೆಟ್ಟದ ಮೇಲಿಂದ ಸೊಗಸಾಗಿ ಕಾಣುವ ಸೂರ್ಯೋದಯದ ಸೊಬಗನ್ನೂ ಕಣ್ತುಂಬಿಕೊಂಡರು.
ಎಲ್ಲಿಯೂ ಗೊಂದಲವಾಗದಂತೆ ಎಚ್ಚರಿಕೆ ವಹಿಸಲು ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್‌ನ ಕಾರ್ಯಕರ್ತರು ಸ್ವಯಂ ಸೇವಕರಾಗಿ ಕೆಲಸ ಮಾಡಿದರು. ಮಾಲಾಧಾರಿಗಳು ಕೇಸರಿ ಬಾವುಟ ಹಾರಿಸಿದರು. ಕೆಲವು ಮಕ್ಕಳು ಆಂಜನೇಯನ ವೇಷ ತೊಟ್ಟು ಗಮನ ಸೆಳೆದರು.
ಹೊರಜಿಲ್ಲೆಗಳಿಂದ ಬಂದ ಭಕ್ತರಿಗೆ ಉಳಿದುಕೊಳ್ಳಲು ಅಂಜನಾದ್ರಿ ಸುತ್ತಮುತ್ತಲಿನ ಗ್ರಾಮಸ್ಥರೇ ತಮ್ಮೂರಿನ ಸಾರ್ವಜನಿಕ ಸ್ಥಳದಲ್ಲಿ ವ್ಯವಸ್ಥೆ ಮಾಡಿದ್ದರು. ಕೊಪ್ಪಳ
ದಿಂದ ಅಂಜನಾದ್ರಿಗೆ ತೆರಳುವ ಮಾರ್ಗಮಧ್ಯದ ಹುಲಿಗಿ ಕ್ರಾಸ್‌ನಿಂದ ಅಂಜನಾದ್ರಿ ತನಕ ಗ್ರಾಮಸ್ಥರು ಆಶ್ರಯ ನೀಡಿ, ಫಲಾಹಾರ, ಪಾನೀಯ, ಬಿಸ್ಕೆಟ್ ಹೀಗೆ ಅನೇಕ ಸೌಲಭ್ಯಗಳ ಸೇವೆ ಕಲ್ಪಿಸಿದ್ದರು.
ಬೆಟ್ಟದ ಮೇಲಿನಿಂದ ಕಾಣುವ ತುಂಗಭದ್ರಾ ನದಿಯ ಮೋಹಕ ನೋಟ, ಕಣ್ಣು ಹಾಯಿಸಿದಷ್ಟೂ ಕಾಣುತ್ತಿದ್ದ ಅದರ ಸುತ್ತಲಿನ ಹಸಿರು ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿಯಂತಿತ್ತು. ಮಾಲಾಧಾರಿಗಳು ಮಾತ್ರವಲ್ಲದೇ ಮಹಿಳೆಯರು ಹಾಗೂ ಮಕ್ಕಳು ಕೂಡ ಬಂದಿದ್ದರು. ಸಮಯ ಎಂಟಾದರೂ ಮುಸುಕುತ್ತಿದ್ದ ಮಂಜಿನ ದಟ್ಟಣೆ ಮತ್ತು ನದಿಯ ಸೊಬಗನ್ನು ಜನ ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ಚಿತ್ರಣ ಕಂಡು ಬಂದಿತು.
ಚಿತ್ರನಟರಾದ ದರ್ಶನ್ ಹಾಗೂ ದಿವಂಗತ ಪುನೀತ್ ರಾಜಕುಮಾರ ಅವರ ಅಭಿಮಾನಿಗಳು ಬೆಟ್ಟವೇರುವ ಮಾರ್ಗದಲ್ಲಿಯೇ ಶಕ್ತಿ ಪ್ರದರ್ಶನ ಮಾಡಿದರು. ಪುನೀತ್ ಅಭಿಮಾನಿಗಳು ಜೋರಾಗಿ ಜೈಕಾರ ಹಾಕಿದರೆ ದರ್ಶನ್ ಅಭಿಮಾನಿಗಳು ಕೂಡ ಗಟ್ಟಿ ಧ್ವನಿಯಲ್ಲಿ ಘೋಷಣೆ ಮೊಳಗಿಸಿದರು. ವ್ಯವಸ್ಥೆ: ವಿವಿಧೆಡೆಯಿಂದ ಬಂದಿದ್ದ ಭಕ್ತರಿಗೆ ವೇದಪಾಠ ಶಾಲೆಯ ಆವರಣದಲ್ಲಿ ಗುರುವಾರ ರಾತ್ರಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು. ಗೋಧಿ ಹುಗ್ಗಿ ಅನ್ನ ಸಾರು ಹಾಗೂ ಟೊಮೆಟೊ ಪಲ್ಲೆ ಉಣಬಡಿಸಲಾಯಿತು.
ಅಂಜನಾದ್ರಿ ಬೆಟ್ಟವೇರುವ ಆರಂಭದ ಪಾದಗಟ್ಟೆ ಬಳಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿತ್ತು. ಅಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಟ್ಟದ ಮೇಲೆ ಗರ್ಭಗುಡಿಯಲ್ಲಿ ತರಹೇವಾರಿ ಹೂಗಳಿಂದ ಅಲಂಕಾರ ಮಾಡಲಾಗಿತ್ತು. ಗುರುವಾರ ಆರಂಭವಾದ ದರ್ಶನ ಶುಕ್ರವಾರ ಸಂಜೆಯಾದರೂ ಮುಂದುವರಿದಿತ್ತು.
ಭಕ್ತರಿಗೆ ನೀಡಲು ಲಾಡು ಆಂಜನೇಯನ ಫೋಟೊ ಹಾಗೂ ತೀರ್ಥ ಸೇರಿ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯ ದೇವಸ್ಥಾನದ ವತಿಯಿಂದ ಕಿಟ್ ತಯಾರಿಸಿ ₹100 ದರ ನಿಗದಿ ಮಾಡಲಾಗಿತ್ತು. ಕಳೆದ ವರ್ಷ ಈ ಕಿಟ್‌ಗೆ ₹50 ಇತ್ತು. ಇದಕ್ಕೆ ಭಕ್ತರ ಆಕ್ಷೇಪ ವ್ಯಕ್ತಪಡಿಸಿ ಆಕ್ರೋಶಗೊಂಡರು. ಅಧಿಕಾರಿಗಳು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.
’ಗಂಗಾವತಿ: ‘ಮಾಲಾಧಾರಿಗಳು ಹಿಂದೂ ಧರ್ಮದ ರಕ್ಷಣೆಗಾಗಿ ಹನುಮಮಾಲೆ ಧರಿಸಬೇಕೇ ಹೊರತು ವೈಯಕ್ತಿಕ ದೈವಭಕ್ತಿಗಾಗಿ ಅಲ್ಲ. ಮಾಲಾಧಾರಣೆ ಎರಡು ದಿನಗಳ ಕಾಯಕವಾಗದೆ ಅಧರ್ಮದ ವಿರುದ್ಧ ಹೋರಾಡುವ ನಿರಂತರ ಪ್ರಕ್ರಿಯೆಯಾಗಬೇಕು’ ಎಂದು ವಿಶ್ವ ಹಿಂದೂ ಪರಿಷತ್ ದಕ್ಷಿಣ ಪ್ರಾಂತದ ಪ್ರಮುಖ ಮಂಜುನಾಥ ಹೇಳಿದರು.
ಇಲ್ಲಿನ ಜಗಜೀವನರಾಮ್ ವೃತ್ತದ ಬಳಿ ವಿಎಚ್‌ಪಿ ಹಾಗೂ ಬಜರಂಗದಳ ಸಹಯೋಗದಲ್ಲಿ ಶುಕ್ರವಾರ ನಡೆದ ಹನುಮಮಾಲಾ ಅಭಿಯಾನದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿ ‘ಆಂಜನೇಯ ಆದಿಪುರುಷ ಧರ್ಮ ರಕ್ಷಕ ದುಷ್ಟ ಸಂಹಾರಕ ದೈವ ಪ್ರತೀಕ. ಮಾಲಾಧಾರಿಗಳು ಆಂಜನೇಯನನ್ನು ಸ್ಮರಿಸುವ ಜೊತೆಗೆ ಅವರ ಗುಣಗಳನ್ನು ರೂಢಿಸಿಕೊಳ್ಳಬೇಕು. ಈ ಮೂಲಕ ಹಿಂದೂ ಧರ್ಮದ ವಿರುದ್ಧ ನಡೆಯುತ್ತಿರುವ ಅಧರ್ಮದ ಘಟನೆಗಳ ಅಂತ್ಯಕ್ಕಾಗಿ ಹೋರಾಟ ನಡೆಸಬೇಕು’ ಎಂದು ಕರೆ ನೀಡಿದರು. ‘ಭಾರತದಲ್ಲಿ ಈಚೆಗೆ ಹಿಂದೂ ಧರ್ಮದಿಂದ ಅನ್ಯಧರ್ಮಕ್ಕೆ ಮತಾಂತರ ವಾಗುವವರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಡಿವಾಣ ಹಾಕಿ ಬಜರಂಗದಳದವರು ಮತಾಂತರವಾದವರನ್ನು ವಾಪಸ್ ಕರೆತರುವ ಕೆಲಸ ಮಾಡಬೇಕು’ ಎಂದರು.
ವಿಎಚ್‌ಪಿ ಉತ್ತರ ಪ್ರಾಂತದ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ ಕಾರ್ಯದರ್ಶಿ ಶಿವಕುಮಾರ ಭೋಳಶೆಟ್ಟಿ ಬಜರಂಗದಳ ಧರ್ಮ ಪ್ರಸಾರ ವಿಭಾಗದ ರಾಜ್ಯ ಸಂಯೋಜಕ ಸೂರ್ಯನಾರಾಯಣ ಉತ್ತರ ಪ್ರಾಂತ ಸಂಯೋಜಕ ಪುಂಡಲೀಕ ದಳವಾಯಿ ಶಾಸಕ ಜಿ. ಜನಾರ್ದನ ರೆಡ್ಡಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ರಾಜವಂಶಸ್ಥೆ ಲಲಿತಾರಾಣಿ ಪಾಲ್ಗೊಂಡಿದ್ದರು.
ಗಂಗಾವತಿ: ಹನುಮಮಾಲಾ ವಿಸರ್ಜನೆ ಅಂಗವಾಗಿ ಶುಕ್ರವಾರ ನಗರದಲ್ಲಿ ನಡೆದ ಸಂಕೀರ್ತನಾ ಯಾತ್ರೆಯ ಮೆರವಣಿಗೆ ರಾಮ ಹನುಮನ ನಾಮ ಸ್ಮರಣೆಯಲ್ಲಿ ಅದ್ದೂರಿಯಾಗಿ ಜರುಗಿತು. ಎಪಿಎಂಸಿ ಸಮುದಾಯ ಭವನದಿಂದ ಆರಂಭವಾದ ಯಾತ್ರೆ ಮೆರವಣಿಗೆ ಸಿಬಿಎಸ್ ವೃತ್ತ ಮಹಾವೀರ ಗಾಂಧಿ ಅಂಬೇಡ್ಕರ್ ವೃತ್ತ ಮಾರ್ಗವಾಗಿ ಬಾಬು ಜಗಜೀವನರಾಮ್ ವೃತ್ತಕ್ಕೆ ತಲುಪಿ ಸಮಾರೋಪವಾಯಿತು. ಯಾತ್ರೆಗೆ ಮಾಜಿ ಶಾಸಕ ಪರಣ್ಣ ಮುನವಳ್ಳಿ ಹನುಮಮಾಲೆ ಧರಿಸಿ ಪಾಲ್ಗೊಂಡರು.
ಶಾಸಕ ಜಿ.ಜನಾರ್ದನ ರೆಡ್ಡಿ ಸಿಬಿಎಸ್ ವೃತ್ತದ ಬಳಿ ಯಾತ್ರೆಯಲ್ಲಿ ಭಾಗವಹಿಸಿದರು. ಗಾಂಧಿವೃತ್ತದ ಬಳಿ ಮುಸ್ಲಿಂ ಸಮುದಾಯದ ಕೆಲ ಮುಖಂಡರು ಮಾಲಾಧಾರಿಗಳಿಗೆ ಹೂ ಮಳೆ ಸುರಿಸಿ ಸ್ವಾಗತಿಸಿದರು. ಮೆರವಣಿಗೆ ಆರಂಭದಿಂದ ಅಂತ್ಯದವರೆಗೆ ರಸ್ತೆಯುದ್ದಕ್ಕೂ ಬೆಳಗಾವಿ ಭಾಗದ ಮಾಲಾಧಾರಿಗಳು ಭಜನೆಯ ಮೂಲಕ ರಾಮನಾಮ ಹನುಮನಾಮ ಸ್ಮರಿಸುತ್ತಾ ಕುಣಿದರು. ಯುವ ಮಾಲಾಧಾರಿಗಳು ಆಂಜನೇಯ ಭಾವಚಿತ್ರವಿರುವ ಕೇಸರಿ ಧ್ವಜಗಳನ್ನು ಹಾರಾಡಿಸಿದರು. ಮುಂಜಾಗ್ರತಾ ಕ್ರಮವಾಗಿ ಜಾಮಿಯಾ ಮಸೀದಿ ಬಳಿ ಖುದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಬಂದೋಬಸ್ತ್‌ನ ಮುಂಚೂಣಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.