
ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನೆಲ್ಲೆಡೆ ಸೋಮವಾರ ಬೆಳಗಿನ ಜಾವ ಧಾರಾಕಾರವಾಗಿ ಮಳೆ ಸುರಿದಿದ್ದು ಜನರು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
ಕೆಲ ದಿನಗಳಿಂದ ಬಿಡುವ ಪಡೆದಿದ್ದ ರೋಹಿಣಿ ಮಳೆ ಈಗ ಉತ್ತಮ ರೀತಿಯಲ್ಲಿ ಸುರಿದಿದ್ದು, ಹಳ್ಳಕೊಳ್ಳ, ಕೆರೆಗಳಿಗೆ ನೀರು ಬಂದಿದೆ. ಅನೇಕ ಚೆಕ್‌ಡ್ಯಾಂಗಳು ತುಂಬಿ ಹರಿದಿವೆ. ಹೊಲಗದ್ದೆಗಳ ಬದುಗಳು, ತಗ್ಗು ಪ್ರದೇಶಗಳಲ್ಲಿ ಬಹಳಷ್ಟು ನೀರು ಸಂಗ್ರಹವಾಗಿದೆ.
ತಾಲ್ಲೂಕಿನ ತಾವರಗೇರಾ ಮಳೆಮಾಪನ ಕೇಂದ್ರದಲ್ಲಿ ಅತಿ ಹೆಚ್ಚು 65 ಮಿ.ಮೀ ಮಳೆ ದಾಖಲಾಗಿದೆ. ಕುಷ್ಟಗಿ ಮಳೆ ಮಾಪನ ಕೇಂದ್ರದಲ್ಲಿ 16 ಮಿ.ಮೀ, ಹನುಮಸಾಗರದಲ್ಲಿ 28.1 ಮಿ.ಮೀ, ಹನುಮನಾಳದಲ್ಲಿ 33 ಮಿ.ಮೀ, ದೋಟಿಹಾಳದಲ್ಲಿ 43.2 ಮಿ.ಮೀ ಹಾಗೂ ಕಿಲಾರಟ್ಟಿಯಲ್ಲಿ 31.8 ಮಿ.ಮೀ ಪ್ರಮಾಣದಲ್ಲಿ ಮಳೆ ದಾಖಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ಬಹುತೇಕ ಪ್ರದೇಶದಲ್ಲಿ ಬಿತ್ತನೆಯಾಗಿದ್ದು ನಾಟಿದ ಬೆಳೆಗಳಿಗೆ ಹಾಗೂ ಇನ್ನೂ ಬಿತ್ತನೆಯಾಗಬೇಕಿರುವ ಪ್ರದೇಶಕ್ಕೆ ಮಳೆಯ ಅಗತ್ಯವಿತ್ತು. ಈಗ ಉತ್ತಮ ಮಳೆ ಬಂದಿರುವುದರಿಂದ ಹೆಚ್ಚಿನ ತೇವಾಂಶ ಉಂಟಾಗಿದ್ದು ಬಹಳಷ್ಟು ಅನುಕೂಲವಾಗಿದೆ ಎಂದು ರೈತರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.