ADVERTISEMENT

ರಾಸಾಯನಿಕ ಸಿಂಪಡಣೆಗೆ ‘ಡ್ರೋನ್’

ಹಣ, ಸಮಯದ ಉಳಿತಾಯದಿಂದ ರೈತರಿಗೆ ಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2021, 7:05 IST
Last Updated 18 ಫೆಬ್ರುವರಿ 2021, 7:05 IST
ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಭತ್ತದ ಜಮೀನಿಗೆ ರಾಸಾಯನಿಕ ಸಿಂಪಡಣೆಗೆ ದ್ರೋಣ್ ಬಳಕೆ ಮಾಡಿರುವುದು.
ಗಂಗಾವತಿ ತಾಲ್ಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಭತ್ತದ ಜಮೀನಿಗೆ ರಾಸಾಯನಿಕ ಸಿಂಪಡಣೆಗೆ ದ್ರೋಣ್ ಬಳಕೆ ಮಾಡಿರುವುದು.   

ಗಂಗಾವತಿ: ಕೂಲಿಕಾರ್ಮಿಕರ ಸಮಸ್ಯೆ, ಅಧಿಕ ಕೂಲಿ ಹಣ ಪಾವತಿ ಮುಂತಾದವುಗಳಿಂದ ತಪ್ಪಿಸಿಕೊಳ್ಳಲು ರೈತರು ತಾವು ಬೆಳೆದ ಭತ್ತದ ಬೆಳೆಗೆ ರಾಸಾಯನಿಕ ಸಿಂಪಡಿಸಲು ಡ್ರೋನ್ ಬಳಸುತ್ತಿದ್ದಾರೆ.

ತಾಲ್ಲೂಕಿನ ಜಂಗಮರ ಕಲ್ಗುಡಿ, ಹೊಸ್ಕೇರಾ, ಬೂದಗುಂಪಾ, ಶ್ರೀರಾಮನಗರ ಸೇರಿದಂತೆ ನಾನಾ ಭಾಗಗಳಲ್ಲಿ ರೈತರು ಭತ್ತದ ಬೆಳೆಗೆ ಕ್ರಿಮಿನಾಶಕ ಸಿಂಪಡಿಸಲು ಡ್ರೋನ್ ಮೊರೆ ಹೋಗಿದ್ದಾರೆ. ಇದರಿಂದ ಕೂಲಿಕಾರ್ಮಿಕರಿಗಾಗಿ ಕಾಯುವಂತಹ ಪ್ರಮೇಯ ಬರುವುದಿಲ್ಲ ಮತ್ತು ಹೆಚ್ಚಿನ ಕೂಲಿ ಹಣ ನೀಡುವಂತಹ ಪ್ರಸಂಗವೂ ಬರುವುದಿಲ್ಲ ಎನ್ನುತ್ತಾರೆ ಅವರು. ‌

ಜಂಗಮರ ಕಲ್ಗುಡಿ ಗ್ರಾಮದಲ್ಲಿ ಫೆಬ್ರುವರಿ 16ರಂದು 10 ಎಕರೆ ಜಮೀನಿನಲ್ಲಿ ಬೆಳೆದಿರುವ ಭತ್ತಕ್ಕೆ ಪ್ರಾಯೋಗಿಕವಾಗಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಿಸಲಾಯಿತು. ಹಂತ ಹಂತವಾಗಿ ಇತರೆ ಗ್ರಾಮಗಳಿಗೆ ಇದು ವಿಸ್ತರಿಸಲಿದೆ.

ADVERTISEMENT

ಬಾಡಿಗೆ ಡ್ರೋಣ್‌ ಬಳಕೆ : ‘ತಮಿಳುನಾಡಿನಿಂದ ಡ್ರೋನ್ ತರಿಸಲಾಗಿದ್ದು, ಬಾಡಿಗೆ ರೂಪದಲ್ಲಿ ಹಣ ಪಾವತಿಸಲಾಗುತ್ತದೆ. ಪ್ರತಿ ಎಕರೆಗೆ ರಾಸಾಯನಿಕ ಸಿಂಪಡಿಸಲು ₹ 600 ದರ ನಿಗದಿಪಡಿಸಲಾಗಿದೆ. ಬಾಡಿಗೆ ತಂದಿರುವ ಕಂಪನಿಯವರೇ ಡ್ರೋನ್ ನಿರ್ವಹಿಸುತ್ತಾರೆ. ಇದರಿಂದ ಹಣ ಮತ್ತು ಸಮಯದ ಉಳಿತಾಯವಾಗುತ್ತದೆ’ ಎಂದು ರೈತರು ತಿಳಿಸಿದರು.

‘ಪ್ರತಿ ಒಂದು ನಿಮಿಷಕ್ಕೆ 5 ರಿಂದ 6 ಎಕರೆ ಜಮೀನಿಗೆ ರಾಸಾಯನಿಕ ಸಿಂಪಡಿಸುವ ಸಾಮಾರ್ಥ್ಯ ಡ್ರೋನ್ ಹೊಂದಿವೆ. ಒಂದೇ ದಿನಕ್ಕೆ 50 ಎಕರೆ ಜಮೀನು ಸಿಂಪಡಿಸಬಹುದು’ ಎಂದು ಜಂಗಮರ ಕಲ್ಗುಡಿ ಗ್ರಾಮದ ರೈತ ಪ್ರಸಾದ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.