
ಸಾಂದರ್ಭಿಕ ಚಿತ್ರ
ಕೊಪ್ಪಳ: ಎಂಟರಿಂದ ಒಂಬತ್ತು ತಿಂಗಳುಗಳ ಕಾಲ ಗರ್ಭದಲ್ಲಿ ಹೊತ್ತು ಹೆತ್ತು ಸಾಕಷ್ಟು ನೋವುಂಡು ಹೆರಿಗೆ ಮಾಡಿಸಿಕೊಂಡ ತಾಯಿಗೆ ತನ್ನ ಕೂಸು ಬೇಡವಾಗುತ್ತಿರುವ ಘಟನೆಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಇತ್ತೀಚೆಗೆ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನದ ಪ್ರಸಾದ ನಿಲಯದ ಸಮೀಪದ ಮುಳ್ಳುಕಂಟೆಯಲ್ಲಿ ನವಜಾತು ಹೆಣ್ಣು ಶಿಶು ಪತ್ತೆಯಾಗಿತ್ತು. ಸಾರ್ವಜನಿಕರ ಕಾಳಜಿಯಿಂದ ಮಗುವನ್ನು ಮಕ್ಕಳ ರಕ್ಷಣಾ ಅಧಿಕಾರಿಗಳು ಸಂರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ನೋವುಂಡ ತಾಯಿ ಮಗವನ್ನೂ ನೋವಿನ ಕೂಪಕ್ಕೆ ತಳ್ಳಿದ್ದಳು.
ಅನೈತಿಕ ಸಂಬಂಧ ಅಥವಾ ಒಪ್ಪಿತವಿಲ್ಲದ ಬಾಂಧವ್ಯಗೆ ಸಿಲುಕಿ ಮಗುವನ್ನು ಹೇರಲಾಗದೆ, ಹೇರಿದರೂ ಜೊತೆಯಲ್ಲಿಟ್ಟುಕೊಂಡು ಸಾಕಲಾಗದೆ ಅನಾಥರನ್ನಾಗಿ ಬಿಟ್ಟು ಹೋಗಲಾಗುತ್ತಿದೆ. ಇಂಥ ತಂದೆ–ತಾಯಿಯಿಂದ ಪರಿತ್ಯಕ್ತವಾದ ನವಜಾತ ಶಿಶುಗಳ ರಕ್ಷಣೆಗಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಲವು ಕ್ರಮಗಳನ್ನು ಕೈಗೊಂಡರೂ ಜನ ಅದರ ಪ್ರಯೋಜನ ಪಡೆದುಕೊಳ್ಳುತ್ತಿಲ್ಲ.
ಜಿಲ್ಲೆಯಲ್ಲಿ 2015ರಿಂದ 2025ರ ತನಕದ ಅವಧಿಯಲ್ಲಿ ಪೋಷಕರಿಗೆ ಬೇಡವಾದ 71 ಜನಮಕ್ಕಳು ಸಿಕ್ಕಿದ್ದು, ಇದರಲ್ಲಿ ಕೆಲವರು ಹೆತ್ತವರೇ ತಮ್ಮ ಮಕ್ಕಳನ್ನು ಮಕ್ಕಳ ರಕ್ಷಣಾ ಸಿಬ್ಬಂದಿಗೆ ಒಪ್ಪಿಸಿದ್ದಾರೆ. ಇನ್ನೂ ಕೆಲವರು ಮಕ್ಕಳ ಸಮಿತಿಗೆ ನೀಡಿದ್ದಾರೆ. ಕಾನೂನುಬದ್ಧವಾಗಿಯೇ ಮಕ್ಕಳ ದಾಖಲಾತಿ ಮಾಡಿಕೊಂಡು ಅವರ ಲಾಲನೆ ಹಾಗೂ ಪೋಷಣೆಯನ್ನು ಸರ್ಕಾರದ ವತಿಯಿಂದ ಮಾಡಲಾಗುತ್ತದೆ. 71 ಮಕ್ಕಳಲ್ಲಿ 53 ಜನ ಮಕ್ಕಳನ್ನು ದೇಶ ಹಾಗೂ ವಿದೇಶಗಳಿಗೆ ದತ್ತು ನೀಡಲಾಗಿದೆ.
‘ಪೋಷಕರಿಗೆ ಬೇಡವಾದ ಮಕ್ಕಳನ್ನು ಸರ್ಕಾರವೇ ಸಾಕುತ್ತದೆ. ಇದಕ್ಕಾಗಿ ಮಕ್ಕಳ ಸಹಾಯವಾಣಿ, ಮಕ್ಕಳ ಕಲ್ಯಾಣ ಸಮಿತಿ ಹಾಗೂ ಮಮತೆಯ ತೊಟ್ಟಿಲು ಇದ್ದರೂ ಪೋಷಕರು ಬಳಸಿಕೊಳ್ಳುತ್ತಿಲ್ಲ. ಜಾತ್ರೆ, ದೊಡ್ಡ ಕಾರ್ಯಕ್ರಮಗಳು ಹಾಗೂ ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಇದರ ಬಗ್ಗೆ ಜಾಗೃತಿ ಮೂಡಿಸಿದರೂ ಜನ ತಿಳಿದುಕೊಳ್ಳುತ್ತಿಲ್ಲ. ಮಕ್ಕಳಿಲ್ಲದೆ ಕೊರಗುತ್ತಿರುವ ಅನೇಕ ದಂಪತಿ ಇದ್ದಾರೆ. ಅಂಥವರ ಕೊರಗು ನೀಗಿಸಲು ಮಕ್ಕಳು ಬೇಡದ ಪೋಷಕರು ಮುಂದಾಗಬೇಕು, ದೂರದ ಊರು ಅಥವಾ ದೇಶದಲ್ಲಿ ತಮ್ಮ ಮಕ್ಕಳು ಚೆಂದವಾಗಿ ಬೆಳೆಯುತ್ತವೆ. ಇದರ ಬಗ್ಗೆ ಅರಿತುಕೊಳ್ಳಬೇಕು’ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪೂಜಾರ ಮನವಿ ಮಾಡಿದ್ದಾರೆ.
ಮಗು ಸಿಕ್ಕರೆ ಸಹಾಯವಾಣಿ 1098 ಕರೆ ಮಾಡಲು ಮನವಿ ಕೊಪ್ಪಳ ಜಿಲ್ಲೆಯಲ್ಲಿವೆ 12 ಮಮತೆಯ ತೊಟ್ಟಿಲು ಕಾನೂನು ಪ್ರಕಾರವೇ ದತ್ತು ನೀಡುವ ಅಧಿಕಾರಿಗಳು
ತಾವು ಹೆತ್ತ ಮಕ್ಕಳ ಬಗ್ಗೆ ತಾಯಂದಿರಿಗೂ ಕಾಳಜಿ ಇರಬೇಕು. ಜಿಲ್ಲಾಡಳಿತದ ವತಿಯಿಂದಲೂ ಇದರ ಬಗ್ಗೆ ಇನ್ನಷ್ಟು ಜಾಗೃತಿ ಮೂಡಿಸಲಾಗುವುದು.ಡಾ. ಸುರೇಶ ಇಟ್ನಾಳ ಜಿಲ್ಲಾಧಿಕಾರಿ
ಮಕ್ಕಳನ್ನು ಒಪ್ಪಿಸುವವರ ಮಾಹಿತಿ ಗೋಪ್ಯ
ಸರ್ಕಾರದ ವತಿಯಿಂದ ಜಿಲ್ಲೆಯ ಪ್ರಮುಖ 12 ಸ್ಥಳಗಳಲ್ಲಿ ಮಮತೆಯ ತೊಟ್ಟಿಲುಗಳನ್ನು ಇರಿಸಲಾಗಿದೆ. ತಮಗೆ ಬೇಡವಾದ ಮಗುವನ್ನು ಅಂಥ ತೊಟ್ಟಿಲಲ್ಲಿ ಹಾಕಿದರೆ ಅಥವಾ ಮಕ್ಕಳ ರಕ್ಷಣಾ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದರೆ ಅಂಥ ಮಗುವನ್ನು ಸರ್ಕಾರವೇ ಸಾಕುತ್ತದೆ. ಅಧಿಕಾರಿಗಳ ಕೈಗೆ ಮಕ್ಕಳನ್ನು ಒಪ್ಪಿಸುವ ಪೋಷಕರ ಮಾಹಿತಿಯನ್ನು ಗೋಪ್ಯವಾಗಿ ಇರಿಸಲಾಗುತ್ತದೆ. ತಮ್ಮ ತಪ್ಪಿನ ಅರಿವಾಗಿ ಪೋಷಕರಿಗೆ ತಮ್ಮ ಮಗುವನ್ನು ವಾಪಸ್ ಪಡೆದುಕೊಳ್ಳಬೇಕು ಎನಿಸಿದರೆ ಎರಡು ತಿಂಗಳ ತನಕವೂ ಅವಕಾಶವಿದೆ. ಇದನ್ನು ಬಳಸಿಕೊಂಡು ನವಜಾತ ಶಿಶುಗಳ ಬದುಕು ಉಳಿಸಬೇಕು ಎನ್ನುವುದು ಅಧಿಕಾರಿಗಳ ಮನವಿಯಾಗಿದೆ.
ಇನ್ನೂ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ
ಡಿ. 30ರಂದು ಹುಲಿಗಿಯಲ್ಲಿ ಮುಳ್ಳುಕಂಟೆಯಲ್ಲಿ ಪತ್ತೆಯಾಗಿದ್ದ ನವಜಾತ ಶಿಶುವಿಗೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಹಾಗೂ ಮಗುವಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ದತ್ತು ಕೇಂದ್ರದಲ್ಲಿ ಪೋಷಣೆಗಾಗಿ ದಾಖಲು ಮಾಡಿಕೊಳ್ಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.