ADVERTISEMENT

ಗಂಗಾವತಿ | ಶಾಲೆಯಲ್ಲಿ ಮಕ್ಕಳ ಉಳಿತಾಯ ಬ್ಯಾಂಕ್

ಸವಳ ಕ್ಯಾಂಪ್: ಮಕ್ಕಳಿಂದ ಹಣ ಉಳಿತಾಯಕ್ಕೆ ಶಿಕ್ಷಕರಿಂದ ವಿನೂತನ ಪ್ರಯತ್ನ

ಎನ್.ವಿಜಯ್
Published 1 ಮಾರ್ಚ್ 2025, 6:16 IST
Last Updated 1 ಮಾರ್ಚ್ 2025, 6:16 IST
ಗಂಗಾವತಿ ತಾಲ್ಲೂಕಿನ ಸವಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿತಾಯ ಹಣ ತುಂಬಲು  ನಿಂತಿರುವ ವಿದ್ಯಾರ್ಥಿಗಳು
ಗಂಗಾವತಿ ತಾಲ್ಲೂಕಿನ ಸವಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿತಾಯ ಹಣ ತುಂಬಲು  ನಿಂತಿರುವ ವಿದ್ಯಾರ್ಥಿಗಳು   

ಗಂಗಾವತಿ: ಇಂದಿನ ಉಳಿತಾಯ ನಾಳೆಯ ಆಪತ್ತಿಗೆ ಸಹಕಾರಿ ಎಂಬ ಧ್ಯೇಯದಡಿ ಮಕ್ಕಳಲ್ಲಿ ವಿದ್ಯಾರ್ಥಿ ದೆಸೆಯಿಂದಲೇ ಹಣ ಉಳಿತಾಯ‌ ಮಾಡುವ ಮನೋಭಾವ ಬೆಳೆಸುವ ಉದ್ದೇಶದಿಂದ ತಾಲ್ಲೂಕಿನ ಸವಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಬ್ಯಾಂಕ್ ಆರಂಭವಾಗಿದೆ.

ಗ್ರಾಮದ  ಶಾಲೆಯಲ್ಲಿ ಒಟ್ಟು 22 ವಿದ್ಯಾರ್ಥಿಗಳು ಕಲಿಯುತ್ತಿದ್ದು, ಈ ವಿದ್ಯಾರ್ಥಿಗಳ ಪೈಕಿ 19 ಮಂದಿ ಶಾಲಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ಎಲ್ಲರಿಗೂ ಬ್ಯಾಂಕ್ ಮಾದರಿಯಲ್ಲಿಯೇ ಪಾಸ್ ಬುಕ್ ವಿತರಿಸಲಾಗಿದೆ. 

ಪಾಸ್ ಪುಸ್ತಕದಲ್ಲಿ ವಿದ್ಯಾರ್ಥಿ ಹೆಸರು, ಭಾವಚಿತ್ರ, ಶಾಲಾ ವಿವರ, ಖಾತೆ ಸಂಖ್ಯೆ, ದಿನಾಂಕ, ಜಮಾ, ಖರ್ಚು, ಉಳಿಕೆ ಮೊತ್ತ ಸೇರಿ ಸಹಿಯನ್ನು ಒಳಗೊಂಡಿದೆ. ಮುಂದಿನ ದಿನಗಳಲ್ಲಿ ಮೊಬೈಲ್ ಮೈಮನಿ ಆ್ಯಪ್‌ನ ಬಳಸಿ, ಬ್ಯಾಂಕ್ ರನ್ ಮಾಡುವುದಾಗಿ ಶಿಕ್ಷಕರು ಇಂಗಿತ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಶಾಲೆಯ ಮಕ್ಕಳ ಪಾಲಕರು ಬಹುತೇಕ ಕೂಲಿ ಕಾರ್ಮಿಕರಾಗಿದ್ದು, ಬದುಕಿನ ಬಂಡಿ ಸಾಗಿಸುವುದೇ ಕಷ್ಟಕರವಾಗಿದೆ. ಹಾಗಾಗಿ ಮಕ್ಕಳಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಜತೆಗೆ ವ್ಯವಹಾರಿಕ ಜ್ಞಾನ ಹೆಚ್ಚಿಸಿ, ಹಣ ಉಳಿತಾಯ ಮಾಡಿಸಲಾಗುತ್ತಿದ್ದು, ಉಳಿತಾಯದ ಹಣವು ಕಲಿಕಾ ಪರಿಕರಗಳ ಖರೀದಿಗೆ, ಮುಂದಿನ ಶಿಕ್ಷಣಕ್ಕೆ ಅನುಕೂಲವಾಗಲಿ ಎಂದು ಶಾಲಾ ಬ್ಯಾಂಕ್ ರಚಿಸಲಾಗಿದೆ ಎನ್ನುತ್ತಾರೆ’ ಅತಿಥಿ ಶಿಕ್ಷಕಿ ಮಾಲಾಶ್ರೀ.

ಶಾಲಾ ಬ್ಯಾಂಕಿನ ವ್ಯವಸ್ಥೆ: ಶಾಲಾ ಬ್ಯಾಂಕ್ ವ್ಯವಸ್ಥೆಯ ಭಾಗವಾಗಿ ಶಿಕ್ಷಕರು ಶಾಲೆಯಲ್ಲಿ ಹಣ ಸಂಗ್ರಹಿಸಲು ಒಂದು ಗಾಡ್ರೇಜ್, ವಿವರ ಬರೆಯಲು ಬ್ಯಾಂಕ್ ಮಾದರಿಯಲ್ಲಿಯೇ ಲೆಡ್ಜರ್ ಪುಸ್ತಕ ಇಟ್ಟಿದ್ದಾರೆ. ಹಣ ಉಳಿತಾಯ ಮಾಡುವ ವಿದ್ಯಾರ್ಥಿಗಳು ಬೆಳಿಗ್ಗೆ 9.30 ರಿಂದ 9.45 ಒಳಗಾಗಿ ತಮಗೆ ನೀಡಿದ ಬ್ಯಾಂಕ್ ಖಾತೆ ಪುಸ್ತಕದ ಜತೆಗೆ ಹಣ ನೀಡಿ ಶಿಕ್ಷಕರಿಂದ ಜಮಾ ವಿವರ ನಮೂದಿಸಿಕೊಳ್ಳಬೇಕು. ನಿತ್ಯ ₹1ರಿಂದ ₹100 ರವರೆಗೆ ಹಣವನ್ನು ಪಾವತಿಸಲು ಅವಕಾಶವಿದೆ.

2025ರ ಜನವರಿ 30ರಂದು ಶಾಲಾ ಬ್ಯಾಂಕ್ ಆರಂಭಿಸಲಾಗಿದ್ದು, ಫೆಬ್ರುವರಿ ಅಂತ್ಯದ ವೇಳೆಗೆ 19 ವಿದ್ಯಾರ್ಥಿಗಳಿಂದ ಬ್ಯಾಂಕಿನಲ್ಲಿ ₹848 ಹಣ ಉಳಿತಾಯವಾಗಿದೆ. ಇದರಲ್ಲಿ ವಿದ್ಯಾರ್ಥಿ ಯಮನೂರ ₹129, ಅರುಣಾ ₹112, ಮಲ್ಲಿಕಾರ್ಜುನ ₹92 ಸೇರಿ ₹848 ಸಂಗ್ರಹವಾಗಿದೆ.

ಯಾವುದಕ್ಕೆ ಖರ್ಚು: ಶಾಲಾ ಮಕ್ಕಳಿಂದ ಅನವಶ್ಯಕ ಖರ್ಚು ತಪ್ಪಿಸಲು ರಚಿಸಿ ಶಾಲಾ ಬ್ಯಾಂಕ್, ಮಕ್ಕಳು ಉಳಿತಾಯದ ಹಣವನ್ನು ನೋಟ್‌ಬುಕ್, ಪೆನ್ಸಿಲ್, ಪೆನ್‌, ರಬ್ಬರ್, ಶಾರ್ಪನರ್‌, ಮಗ್ಗಿಪುಸ್ತಕ ಖರೀದಿಗೆ ಮಾತ್ರ  ನೀಡಲಾಗುತ್ತದೆ. ಇತರೆ ತಿಂಡಿ ತಿನಿಸುಗಳಿಗೆ ನಯಾ ಪೈಸೆ ನೀಡುವುದಿಲ್ಲ. ಮುಂದಿನ ಶಿಕ್ಷಣ ಹಾಗೂ ಅನಿವಾರ್ಯ ಕಾರಣಗಳಿಂದ ಶಾಲೆಯಿಂದ ವರ್ಗಾವಣೆಯಾದರೆ ಮಾತ್ರ ವಿದ್ಯಾರ್ಥಿಯ ಎಲ್ಲ ಹಣವನ್ನು ಹಿಂದಿರುಗಿಸಲಾಗುತ್ತಿದೆ.

ಪಾಲಕರಿಂದ ಮೆಚ್ಚುಗೆ: ಶಾಲೆಯಲ್ಲಿ ಈಚೆಗೆ ನಡೆದ ಪಾಲಕರ ಸಭೆಯಲ್ಲೇ ಎಸ್‌ಡಿಎಂಸಿ ಅಧ್ಯಕ್ಷರಿಂದ ಮಕ್ಕಳ ಹಣ ಉಳಿತಾಯದ ಶಾಲಾ ಬ್ಯಾಂಕ್ ಉದ್ಘಾಟನೆ ಮಾಡಿಸಿದ್ದು, ಶಿಕ್ಷಕರ ವಿನೂತನ ಪ್ರಯತ್ನಕ್ಕೆ ಪಾಲಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಈ ಹಿಂದೆ ಮಕ್ಕಳಿಗೆ ಹಣ ನೀಡಿದರೆ ಅಂಗಡಿಗಳಲ್ಲಿ ತಿಂಡಿ-ತಿನಿಸುಗಳ ಖರೀದಿಗೆ ಓಡುತ್ತಿದ್ದರು. ಇದೀಗ ಮಕ್ಕಳು ನಾವು ನೀಡಿದ ಹಣ ಉಳಿತಾಯ ಮಾಡುತ್ತಿರುವುದು ತುಂಬ ಖುಷಿ ಕೊಡುತ್ತಿದೆ’ ಎಂದು ಪಾಲಕರಾದ ಯಮನೂರ, ವೆಂಕಟೇಶ, ಹುಲಿಗೆಮ್ಮ, ರತ್ನಮ್ಮ ಹೇಳಿದರು.

ಗಂಗಾವತಿ ತಾಲ್ಲೂಕಿನ ಸವಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿತಾಯ ಹಣ ತುಂಬಲು  ನಿಂತಿರುವ ವಿದ್ಯಾರ್ಥಿಗಳು
ಬ್ಯಾಂಕ್ ಮಾದರಿಯಂತೆ ಶಾಲಾ ಬ್ಯಾಂಕಿನ ವಿದ್ಯಾರ್ಥಿಗಳ ಪಾಸ್ ಬುಕ್
ಗಂಗಾವತಿ ತಾಲ್ಲೂಕಿನ ಸವಳ ಕ್ಯಾಂಪ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಳಿತಾಯ ಹಣ ತುಂಬಲು ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿಗಳು

ಶಾಲಾ ಬ್ಯಾಂಕಿನಲ್ಲಿ 19 ವಿದ್ಯಾರ್ಥಿಗಳ ಖಾತೆ ಬ್ಯಾಂಕ್ ಮಾದರಿಯಲ್ಲಿಯೇ ಕಾರ್ಯ ನಿರ್ವಹಣೆ ಪಾಲಕರಿಂದ ಮೆಚ್ಚುಗೆ

ಈ ಹಿಂದೆ ಮನೆಯಲ್ಲಿ ನನಗೆ ಹಣ ನೀಡಿದರೇ ಅಂಗಡಿ ತಿನಿಸುಗಳಿಗೆ ಖರ್ಚು ಮಾಡುತ್ತಿದ್ದೆ. ಬ್ಯಾಂಕ್ ರಚನೆ ನಂತರ ಹಣ ಉಳಿತಾಯ ಮಾಡುತ್ತಿದ್ದು ಆ ಹಣದಿಂದ ಅಗತ್ಯವಿದ್ದಾಗ ಪೆನ್‌ ಪೆನ್ಸಿಲ್ ನೋಟ್ ಬುಕ್ ಖರೀದಿ ಮಾಡುತ್ತಿದ್ದೇನೆ.
ಯಮನೂರ 4ನೇ ತರಗತಿ ವಿದ್ಯಾರ್ಥಿ ಸವಳ ಕ್ಯಾಂಪ್ ಸರ್ಕಾರಿ ಶಾಲೆ
ಮಕ್ಕಳಿಂದ ವ್ಯರ್ಥ ಖರ್ಚು ತಡೆದು ಹಣ ಉಳಿತಾಯ ಮಾಡುವ ಮನೋಭಾವ ಬೆಳೆಸುವ ಉದ್ದೇಶದಿಂದ ಶಾಲಾ ಬ್ಯಾಂಕ್ ಆರಂಭಿಸಿದ್ದು ವಿದ್ಯಾರ್ಥಿಗಳಿಂದ ಪಾಲಕರಿಂದ ಉತ್ತಮ ಸಹಕಾರ ದೊರೆಯುತ್ತಿದೆ. ಈ ಹಿಂದೆ ಭಟ್ಟರನರಸಾಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿದ್ದಾಗಲೂ ಸಹ ಶಾಲಾ ಬ್ಯಾಂಕ್ ಆರಂಭಿಸಿದ್ದೆ.
ಸುರೇಶ್ ಜಿ.ಎಸ್ ಶಿಕ್ಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.