ADVERTISEMENT

ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ; ಸಡಗರ

ಕ್ರಿಸ್‌ಮಸ್‌ ಅಂಗವಾಗಿ ಮನೆಮಾಡಿದ ಸಂಭ್ರಮ, ಯುವಜನತೆಯ ಸೆಲ್ಫಿ ಸಡಗರ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 5:26 IST
Last Updated 26 ಡಿಸೆಂಬರ್ 2025, 5:26 IST
ಕೊಪ್ಪಳದ ಎಸ್‌ಎಫ್‌ಎಸ್‌ ಚರ್ಚ್‌ನಲ್ಲಿ ಫಾದರ್‌ ಜಬಮಲೈ ಎ. ಅವರು ಕ್ರಿಸ್‌ಮಸ್‌ ಅಂಗವಾಗಿ  ಸಮುದಾಯದ ಜನರಿಗೆ ಆಶೀರ್ವಾದ ಮಾಡಿದರು
ಕೊಪ್ಪಳದ ಎಸ್‌ಎಫ್‌ಎಸ್‌ ಚರ್ಚ್‌ನಲ್ಲಿ ಫಾದರ್‌ ಜಬಮಲೈ ಎ. ಅವರು ಕ್ರಿಸ್‌ಮಸ್‌ ಅಂಗವಾಗಿ  ಸಮುದಾಯದ ಜನರಿಗೆ ಆಶೀರ್ವಾದ ಮಾಡಿದರು   

ಕೊಪ್ಪಳ: ಕ್ರೈಸ್ತರ ಪಾಲಿನ ಪವಿತ್ರ ಹಬ್ಬವಾದ ಕ್ರಿಸ್‌ಮಸ್‌ ಆಚರಣೆ ನಗರದಲ್ಲಿ ಗುರುವಾರ ಸಂಭ್ರಮದಿಂದ ನೆರವೇರಿತು. ಕ್ರೈಸ್ತ ಸಮುದಾಯದವರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಹಬ್ಬದ ಮುನ್ನಾದಿನವಾದ ಬುಧವಾರ ಮಧ್ಯರಾತ್ರಿಯೇ ಇಲ್ಲಿನ ನಗರಸಭೆ ಹಿಂಭಾಗದಲ್ಲಿರುವ ಕ್ರಿಸ್ತಜ್ಯೋತಿ ಇಸಿಐ ಚರ್ಚ್‌, ಬಿ.ಟಿ. ಪಾಟೀಲ ನಗರದಲ್ಲಿರುವ ಸೇಂಟ್‌ ಫ್ರಾನ್ಸಿಸ್‌ ಡೆಸೆಲ್ಸ್‌ (ಎಸ್‌ಎಫ್‌ಎಸ್‌) ಚರ್ಚ್‌ ಹಾಗೂ ಗಣೇಶನಗರದಲ್ಲಿ ಫುಲ್ ಗಾಸ್ಪೆಲ್ ಚರ್ಚ್ ಆಫ್ ಕ್ರೈಸ್ಟ್ ಚರ್ಚ್ ಹೀಗೆ ಅನೇಕ ಕಡೆ ಕ್ರೈಸ್ತ ಸಮುದಾಯದ ಜನ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. 

ವಿದ್ಯುತ್‌ ದೀಪಗಳ ಅಲಂಕಾರ, ಆಕಾಶದೀಪಗಳ ತೋರಣ, ಆಲಂಕಾರಿಕ ವಸ್ತುಗಳಿಂದ ಸಿಂಗಾರಗೊಂಡಿದ್ದ ಚರ್ಚ್‌ಗಳಲ್ಲಿ ಬುಧವಾರ ರಾತ್ರಿ 12 ಗಂಟೆಯಾಗುತ್ತಿದ್ದಂತೆ ಕ್ರೈಸ್ತ ಧರ್ಮೀಯರು ಒಟ್ಟಾಗಿ ಪ್ರಾರ್ಥನೆ ಸಲ್ಲಿಸಿದರು. ಕ್ಯಾರಲ್ (ಭಕ್ತಿಗೀತೆ) ಹಾಡುವ ಮೂಲಕ ಯೇಸುಕ್ರಿಸ್ತನನ್ನು ನೆನೆದರು. ಗುರುವಾರ ಬೆಳಿಗ್ಗೆಯೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಚರ್ಚ್‌ಗಳ ಮುಂದಿನ ಅಲಂಕಾರದಲ್ಲಿ ಯುವಜನತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.

ADVERTISEMENT

ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಸೇರಿದಂತೆ ಅನೇಕರು ಜ್ಯೋತಿ ಇ.ಸಿ.ಐ ಚರ್ಚ್‌ಗೆ ಭೇಟಿ ನೀಡಿ ಕ್ರೈಸ್ತರಿಗೆ ಶುಭಾಶಯ ಕೋರಿದರು. ಹಬ್ಬಕ್ಕೂ ಮೂರ್ನಾಲ್ಕು ದಿನಗಳ ಮೊದಲು ಗಣೇಶ ನಗರದ ಫುಲ್ ಗಾಸ್ಪೆಲ್ ಚರ್ಚ್ ಆಫ್ ಕ್ರೈಸ್ಟ್‌ ವತಿಯಿಂದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಕ್ರಿಸ್‌ಮಸ್‌ ಅಂಗವಾಗಿ ಈ ಚರ್ಚ್‌ನ ಪಾಸ್ಟರ್‌ ಪೀಟರ್ ಜೇಮ್ಸ್ ಮುಂದಾಳತ್ವದಲ್ಲಿ ಕಾರ್ಯಕ್ರಮ ನಡೆದಿತ್ತು.

ಕೊಪ್ಪಳದ ಇಸಿಐ ಚರ್ಚ್‌ಗೆ ಭೇಟಿ ನೀಡಿದ ಶಾಸಕ ರಾಘವೇಂದ್ರ ಹಿಟ್ನಾಳ ಅವರಿಗೆ ಕ್ರೈಸ್ತ ಸಮುದಾಯದವರು ಕೇಕ್‌ ತಿನಿಸಿದರು
ಕೊಪ್ಪಳದ ಗಣೇಶನಗರದಲ್ಲಿ ಫುಲ್ ಗಾಸ್ಪೆಲ್ ಚರ್ಚ್‌ನಲ್ಲಿ  ಪಾಸ್ಟರ್‌ ಪೀಟರ್‌ ಜೇಮ್ಸ್‌ ಅವರು ಹಬ್ಬದ ಅಂಗವಾಗಿ ಸಂದೇಶ ನೀಡಿದರು
ಕೊಪ್ಪಳದ ನವನಗರದ ಇರುವಾತನು ಚರ್ಚ್‌ನಲ್ಲಿ ಜಿಲ್ಲಾ ಪಾಸ್ಟರ್ಸ್ ಸಂಘ ಹಾಗೂ ಭ್ರಾತೃತ್ವ ಸಮಿತಿ  ವತಿಯಿಂದ ಕ್ರಿಸ್‌ಮಸ್‌ ಆಚರಣೆ ನಡೆಯಿತು
ಯೇಸುಕ್ರಿಸ್ತನ ಜನನವನ್ನು ಈ ತಿಂಗಳ ಪೂರ್ತಿ ಆಚರಣೆ ಮಾಡುವುದರಿಂದ ಕ್ರೈಸ್ತ ತಿಂಗಳ ಎಂದು ಕರೆಯುತ್ತೇವೆ. ಕ್ರಿಸ್‌ಮಸ್‌ ಹಬ್ಬವು ಬಡವರ ದೀನದಲಿತರು ಹೀಗೆ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎನ್ನುವ ಸಂದೇಶ ನೀಡುತ್ತದೆ.
ಚನ್ನಬಸಪ್ಪ ಅಪ್ಪಣವರ ಪಾಸ್ಟರ್ಸ್‌ ಸಂಘದ ಜಿಲ್ಲಾಧ್ಯಕ್ಷ

ಯೇಸುಕ್ರಿಸ್ತ ಮಾನವತಾವಾದಿ: ಶೀಲವಂತರ ಕೊಪ್ಪಳ: ‘ಯೇಸುಕ್ರಸ್ತ ಮಹಾ ಮಾನವತಾವಾದಿಯಾಗಿದ್ದಾರೆ’ ಎಂದು ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ್ ಶೀಲವಂತರ್ ಹೇಳಿದರು. ಇಲ್ಲಿನ ನವನಗರದ ಇರುವಾತನು ಚರ್ಚ್‌ನಲ್ಲಿ ಜಿಲ್ಲಾ ಪಾಸ್ಟರ್ಸ್ ಸಂಘ ಹಾಗೂ ಭ್ರಾತೃತ್ವ ಸಮಿತಿ ಸಹಯೋಗದಲ್ಲಿ ನಡೆದ ಸೌಹಾರ್ದತ ಪ್ರೇರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ‘ಜನರ ಏಳಿಗೆಗಾಗಿ ಹೋರಾಡಿ ಮಡಿದ ಅವರಿಗೆ ಎಂದೂ ಸಾವಿಲ್ಲ. ಅವರು ಸತ್ತ ನಂತರವೂ ಎಲ್ಲರೊಳಗೂ ಮರುಜನ್ಮ ಪಡೆದಿದ್ದಾರೆ’ ಎಂದರು. ಗೀತಾ ಮದಕಟ್ಟಿ ರಾಘು ಮದಕಟ್ಟಿ ಮಲ್ಲಿಕಾರ್ಜುನ ಜಾಲಿಹಾಳ ಹನುಮಂತ ಜಾಲಿಹಾಳ ಬಸವರಾಜ್ ಜಾಲಿಹಾಳ ಇಸರೈಲ್ ನಾಡರ ಲಕ್ಷ್ಮಣ ಗುಳೇದಗುಡ್ಡ ವೀರೇಶ ತಾವರಗೇರ ಮಂಜುನಾಥ್ ಗುಳೇದಗುಡ್ಡ ಪ್ರವೀಣ್ ಸೇರಿ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.