ADVERTISEMENT

ಮಕ್ಕಳ ಸಂರಕ್ಷಣೆಗೆ ಬದ್ಧತೆ ಅಗತ್ಯ: ಶೇಖರಗೌಡ ರಾಮತ್ನಾಳ

ಯಲಬುರ್ಗಾ: ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:58 IST
Last Updated 12 ಫೆಬ್ರುವರಿ 2026, 6:58 IST
ಯಲಬುರ್ಗಾ ಪಟ್ಟಣದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಚಾಲನೆ ನೀಡಿದರು
ಯಲಬುರ್ಗಾ ಪಟ್ಟಣದಲ್ಲಿ ಆಯೋಜಿಸಿದ್ದ ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಚಾಲನೆ ನೀಡಿದರು   

ಯಲಬುರ್ಗಾ: ಪಟ್ಟಣದ ಬಾಬು ಜಗಜೀವನರಾವ್ ಸಮುದಾಯ ಭವನದಲ್ಲಿ ಮಕ್ಕಳ ಹಕ್ಕುಗಳ ಕುರಿತ ಜಾಗೃತಿ ಕಾರ್ಯಕ್ರಮ ನಡೆಯಿತು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಾಣಾ ಘಟಕ ಹಾಗೂ ಪಟ್ಟಣ ಪಂಚಾಯಿತಿ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮಕ್ಕೆ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಹಲ್ಲೆ, ಕಿರುಕುಳ ಮತ್ತು ಇನ್ನಿತರ ದೌರ್ಜನ್ಯಗಳನ್ನು ತಡೆಗಟ್ಟಲು ಹಾಗೂ ಮಕ್ಕಳಿಗೆ ಸೂಕ್ತ ರಕ್ಷಿಸಲು ಸರ್ಕಾರವು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಲಾಗಿದೆ’ ಎಂದು ಹೇಳಿದರು.

ADVERTISEMENT

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಕನಿಷ್ಟ 20 ವರ್ಷದಿಂದ ಜೀವಾವಧಿ ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿದೆ. ರಾಷ್ಟ್ರೀಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ವೆ 2019-20ರನ್ವಯ ಜಿಲ್ಲೆಯಲ್ಲಿ 18ವರ್ಷದೊಳಗೆ ಮದುವೆಯಾದ ವಯಸ್ಕ ಮಹಿಳೆಯರ ಪ್ರಮಾಣ ಶೇ27.1ರಷ್ಟಿದೆ. ರಾಜ್ಯದ ಪ್ರಮಾಣ ಶೇ21.4, ಇದು ರಾಜ್ಯದ ಸರಾಸರಿಗಿಂತಲೂ ಶೇ6ರಷ್ಟು ಹೆಚ್ಚಳವಾಗಿದೆ. ಜಿಲ್ಲೆಯಲ್ಲಿ 18ರಿಂದ 19ವರ್ಷದೊಳಗಿನ ಬಾಲಗರ್ಭಿಣಿಯರಾಗಿರುವ ಪ್ರಮಾಣ ಶೇ 8.5 ಇದ್ದು, ರಾಜ್ಯದ ಸರಾಸರಿ ಶೇ 7ರಷ್ಟಿದ್ದು ಇದು ಕೂಡಾ ಶೇ1.5 ಅಧಿಕವಾಗಿದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ ತೀವ್ರ ಕಳವಳ ಹುಟ್ಟಿಸದೇ ಇರಲಾರದು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚೆತ್ತುಕೊಳ್ಳಬೇಕಾಗಿದೆ’ ಎಂದರು.

ಯಲಬುರ್ಗಾ ತಹಶೀಲ್ದಾರ್ ಮುರಳಿಧರರಾವ್ ಕುಲಕರ್ಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಬಬಲಾದಿ, ಯಲಬುರ್ಗಾ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಟ್ಟದೇಶ ಮಾಳೆಕೊಪ್ಪ, ಕಾರ್ಮಿಕ ನಿರೀಕ್ಷಕ ನಿವೇದಿತಾ, ತಾಲ್ಲೂಕು ವೈದ್ಯಾಧಿಕಾರಿ ಡಾ. ನೇತ್ರಾವತಿ ಹಿರೇಮಠ, ಪ್ರೌಢಶಾಲಾ ವಿಭಾಗ ವಲಯ ಸಂಪನ್ಮೂಲ ವ್ಯಕ್ತಿ ಶರಣಗೌಡ ಪೊಲೀಸ್‌ಪಾಟೀಲ್ ಸೇರಿ ಅನೇಕರು ಇದ್ದರು.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ರಕ್ಷಣಾಧಿಕಾರಿ (ಸಾಂಸ್ಥಿಕ) ರವಿಕುಮಾರ ಪವಾರ ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು. ರಕ್ಷಣಾಧಿಕಾರಿ (ಅಸಾಂಸ್ಥಿಕ) ರವಿ ಬಡಿಗೇರ ನಿರೂಪಿಸಿದರು. ಆಫೀಸರ್ ಶಿವಲೀಲಾ ವನ್ನೂರು, ಪ್ರತಿಭಾ ಕಾಶಿಮಠ ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.