ADVERTISEMENT

ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ: ಉಳಿದ ಗಂಗಾವತಿ ಕುತೂಹಲ 

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2023, 5:58 IST
Last Updated 25 ಮಾರ್ಚ್ 2023, 5:58 IST
ಬಸವರಾಜ ರಾಯರಡ್ಡಿ
ಬಸವರಾಜ ರಾಯರಡ್ಡಿ   

ಕೊಪ್ಪಳ: ಜಿಲ್ಲೆಯ ಒಟ್ಟು ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಕ್ಷೇತ್ರಗಳಿಗೆ ಕಾಂಗ್ರೆಸ್ ಶನಿವಾರ ಟಿಕೆಟ್‌ ಘೋಷಿಸಿದ್ದು, ಗಂಗಾವತಿಯ ಕುತೂಹಲ ಮುಂದುವರಿದಿದೆ.

ಹಾಲಿ ಶಾಸಕರಾದ ಕೆ. ರಾಘವೇಂದ್ರ ಹಿಟ್ನಾಳ (ಕೊಪ್ಪಳ), ಅಮರೇಗೌಡ ಬಯ್ಯಾಫುರ (ಕುಷ್ಟಗಿ), ಮಾಜಿ ಸಚಿವರಾದ ಬಸವರಾಜ ರಾಯರಡ್ಡಿ (ಯಲಬುರ್ಗಾ) ಮತ್ತು ಶಿವರಾಜ ತಂಗಡಗಿ (ಕನಕಗಿರಿ ಮೀಸಲು ಕ್ಷೇತ್ರ) ಅವರಿಗೆ ಟಿಕೆಟ್‌ ಘೋಷಣೆ ಮಾಡಲಾಗಿದೆ.

ಗಂಗಾವತಿಯಲ್ಲಿ ಇಕ್ಬಾಲ್‌ ಅನ್ಸಾರಿ, ಮಲ್ಲಿಕಾರ್ಜುನ ನಾಗಪ್ಪ ಮತ್ತು ಎಚ್‌.ಆರ್‌. ಶ್ರೀನಾಥ್‌ ಮೂವರು ಆಕಾಂಕ್ಷಿಗಳು ಇರುವ ಕಾರಣ ಪೈಪೋಟಿ ಹೆಚ್ಚಿದೆ. ’ನಮ್ಮಿಬ್ಬರಲ್ಲಿ ಒಬ್ಬರಿಗೆ ಟಿಕೆಟ್‌ ಕೊಡಲೇಬೇಕು’ ಎಂದು ಶ್ರೀನಾಥ್‌ ಹಾಗೂ ನಾಗಪ್ಪ ಇಬ್ಬರೂ ಪಟ್ಟು ಹಿಡಿದಿದ್ದಾರೆ. ಇವರಿಬ್ಬರ ಒಗ್ಗಟ್ಟಿನ ನಡುವೆಯೇ ಟಿಕೆಟ್‌ ಗಿಟ್ಟಿಸಲು ಅನ್ಸಾರಿ ಇನ್ನಿಲ್ಲದ ಕರಸತ್ತು ನಡೆಸಿದ್ದು, ಈಗಾಗಲೇ ಮೂವರೂ ಪ್ರಚಾರ ಆರಂಭಿಸಿದ್ದಾರೆ. ಹೀಗಾಗಿ ಹೈಕಮಾಂಡ್ ಯಾರಿಗೆ ಮಣೆ ಹಾಕುತ್ತದೆ ಎನ್ನುವ ಕುತೂಹಲವಿದೆ.

ADVERTISEMENT

ಕಾಯುವ ತಂತ್ರ: ಈಗಲೇ ಟಿಕೆಟ್‌ ಘೋಷಣೆ ಮಾಡಿದರೆ ಉಳಿದವರು ಅಸಮಾಧಾನಗೊಳ್ಳುತ್ತಾರೆ. ಆಕಾಂಕ್ಷಿಗಳು ಬೇರೆ ಪಕ್ಷಗಳತ್ತ ಮುಖ ಮಾಡುತ್ತಾರೆ ಎನ್ನುವ ಕಾರಣದಿಂದಲೂ ಹೈಕಮಾಂಡ್‌ ಗಂಗಾವತಿ ಕ್ಷೇತ್ರದ ಟಿಕೆಟ್‌ ಘೋಷಣೆಗೆ ಕಾದು ನೋಡುವ ತಂತ್ರ ಅನುಸರಿಸುತ್ತಿದೆ ಎಂದು ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಹೇಳುತ್ತಾರೆ.

‘ಪಕ್ಷ ಸಾಕಷ್ಟು ಬೆಳೆದಿದೆ. ಸಂಘಟನೆಯೂ ಉತ್ತಮವಾಗಿದೆ ಎನ್ನುವುದಕ್ಕೆ ಗಂಗಾವತಿಯಲ್ಲಿ ಏರ್ಪಟ್ಟಿರುವ ಪೈಪೋಟಿಯೇ ಸಾಕ್ಷಿ. ಪಕ್ಷ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದೆ. ಉಳಿದ ಆಕಾಂಕ್ಷಿಗಳನ್ನು ಸಮಾಧಾನ ಪಡಿಸಲಿದೆ’ ಎಂದು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.