ADVERTISEMENT

ಪ್ರಸ್ತಾವನೆಗೆ ಕಾಂಗ್ರೆಸ್‌ ವಿರೋಧ, ಹೋರಾಟಕ್ಕೂ ಸಿದ್ಧ

ಗಂಗಾವತಿ ಉಪ ವಿಭಾಗದದಲ್ಲಿ ಕುಷ್ಟಗಿ ತಾಲ್ಲೂಕು ಸೇರ್ಪಡೆ ವಿಚಾರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:13 IST
Last Updated 24 ಸೆಪ್ಟೆಂಬರ್ 2024, 14:13 IST

ಕುಷ್ಟಗಿ: ಗಂಗಾವತಿಯಲ್ಲಿ ಪ್ರತ್ಯೇಕ ಉಪ ವಿಭಾಗ ಕಚೇರಿ ಆರಂಭಿಸಿ ಅದರಲ್ಲಿ ಕುಷ್ಟಗಿ ತಾಲ್ಲೂಕನ್ನು ಸೇರ್ಪಡೆಗೊಳಿಸಿ ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಪಕ್ಷ ಅನಿವಾರ್ಯವಾದರೆ ಉಗ್ರ ಹೋರಾಟ ನಡೆಸಲೂ ಸಿದ್ಧ ಎಂದು ಹೇಳಿದೆ.

ಈ ವಿಷಯ ಕುರಿತು ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮತ್ತು ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ ಇತರರು, ಉಪ ವಿಭಾಗ ಮಾಡುವುದನ್ನು ಸ್ವಾಗತಿಸುತ್ತೇವೆ. ಆದರೆ, ಈ ತಾಲ್ಲೂಕನ್ನು ಸೇರ್ಪಡೆ ಮಾಡುವ ಪ್ರಸ್ತಾವನೆಗೆ ಮಾತ್ರ ವಿರೋಧವಿದೆ ಎಂದು ಹೇಳಿದರು.

ಭೌಗೋಳಿಕವಾಗಿ ಗಂಗಾವತಿ ಕುಷ್ಟಗಿ ತಾಲ್ಲೂಕಿನಿಂದ ಬಹಳಷ್ಟು ದೂರ ಇದೆ. ಅಲ್ಲದೇ ಜಿಲ್ಲಾ ಕೇಂದ್ರದಲ್ಲಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಕಚೇರಿಗಳು ಒಂದೇ ಕಡೆ ಇದ್ದು ಮೇಲ್ಮನವಿ ಸಲ್ಲಿಸುವುದಕ್ಕೆ ತುರ್ತು ಸಂದರ್ಭದಲ್ಲಿ ಅನುಕೂಲವಾಗುತ್ತದೆ. ಗಂಗಾವತಿ ಉಪ ವಿಭಾಗಕ್ಕೆ ಕುಷ್ಟಗಿ ತಾಲ್ಲೂಕು ಸೇರಿಸುವುದಕ್ಕೆ ಇಲ್ಲಿಯ ಅನೇಕ ಸಂಘಟನೆಗಳು, ಹೋರಾಟಗಾರರೂ ವಿರೋಧ ವ್ಯಕ್ತಪಡಿಸಿದ್ದು, ಹೋರಾಟ ನಡೆದರೆ ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದರು.

ADVERTISEMENT

’ಸರ್ಕಾರಕ್ಕೆ ಸಲ್ಲಿಕೆಯಾಗಿರುವ ಪ್ರಸ್ತಾವನೆ ಐದು ವರ್ಷದ ಹಿಂದಿನದು. ಅಲ್ಲದೇ ಕುಷ್ಟಗಿ ತಾಲ್ಲೂಕು ಸೇರ್ಪಡೆಗೆ ತಾವು ಯಾವುದೇ ಸೂಚನೆ ನೀಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಮ್ಮೊಂದಿಗೆ ಮಾತನಾಡಿದ್ದಾರೆ ಎಂದ ಬಯ್ಯಾಪುರ, ಅಗತ್ಯವಾದರೆ ಕುಷ್ಟಗಿ ತಾಲ್ಲೂಕನ್ನು ಕೊಪ್ಪಳ ಉಪ ವಿಭಾಗದಲ್ಲಿಯೇ ಉಳಿಸುವುದಕ್ಕೆ ಕಂದಾಯ ಸಚಿವರಿಗೆ ಪತ್ರ ಬರೆಯುವುದಾಗಿ ತಿಳಿಸಿದ್ದಾರೆ’ ಎಂದು ವಿವರಿಸಿದರು.

’ಒಂದೊಮ್ಮೆ ಕುಷ್ಟಗಿ ತಾಲ್ಲೂಕನ್ನು ಕೈಬಿಟ್ಟರೂ ಕನಕಗಿರಿ, ಕಾರಟಗಿ ಮತ್ತು ಗಂಗಾವತಿ ತಾಲ್ಲೂಕುಗಳು ಭೌಗೋಳಿಕವಾಗಿ ಹೆಚ್ಚು ಪ್ರದೇಶ ಹೊಂದಿರುವುದರಿಂದ ಗಂಗಾವತಿ ಉಪ ವಿಭಾಗಕ್ಕೆ ಸಮಸ್ಯೆ ಆಗುವುದಿಲ್ಲ’ ಎಂದರು.

ಈ ಬಗ್ಗೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಪಕ್ಷದ ವತಿಯಿಂದ ಮನವಿ ಸಲ್ಲಿಸುತ್ತೇವೆ. ಈ ತಾಲ್ಲೂಕಿನ ಜನರ ಹಿತಾಸಕ್ತಿ ಕಡೆಗಣಿಸುವುದಕ್ಕೆ ಸಾಧ್ಯವೇ ಇಲ್ಲ. ಈ ವಿಷಯದಲ್ಲಿ ಸರ್ಕಾರ ನಮ್ಮ ಮನವಿಗೆ ಓಗೂಡದಿದ್ದರೆ ಪಕ್ಷ ರಾಜಕಾರಣವನ್ನು ಬದಿಗಿರಿಸಿ ಜನಾಂದಲೋಲನ ನಡೆಸುವುದು ಅನಿವಾರ್ಯವಾಗಲಿದೆ’ ಎಂದು ತಿಳಿಸಿದರು.

ಪ್ರಮುಖರಾದ ಮಾಲತಿ ನಾಯಕ, ವಿಜಯ ನಾಯ್ಕ, ಶಾರದಾ ಕಟ್ಟಿಮನಿ, ಮೈನುದ್ದೀನ್‌ ಮುಲ್ಲಾ, ಕಲ್ಲಪ್ಪ ತಳವಾರ, ಪ್ರಕಾಶ ರಾಠೋಡ, ಮುತ್ತಣ್ಣ ಕರಡಿ, ಮಹಾಂತೇಶ ಅಗಸಿಮುಂದಿನ, ಸೋಮಶೇಖರ ವೈಜಾಪುರ, ಯಂಕಪ್ಪ ಚವ್ಹಾಣ, ವಕೀಲರಾದ ಅಮರೇಗೌಡ ಪಾಟೀಲ, ಶಂಕರಗೌಡ ಪಾಟೀಲ ಇತರರು ಹಾಜರಿದ್ದರು.

ರೈತ ಸಂಘದ ಹೇಳಿಕೆ: ರಾಜ್ಯ ರೈತ ಸಂಘದ ಅಧ್ಯಕ್ಷ ನಜೀರಸಾಬ್ ಮೂಲಿಮನಿ ಮಾತನಾಡಿ ’ಕುಷ್ಟಗಿ ತಾಲ್ಲೂಕನ್ನು ಕೊಪ್ಪಳ ಉಪ ವಿಭಾಗದಲ್ಲಿಯೇ ಮುಂದುವರಿಸಬೇಕು’ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.