ADVERTISEMENT

ಇಂಧನ ಬೆಲೆ ಹೆಚ್ಚಳ ಖಂಡಿಸಿ ಕಾಂಗ್ರೆಸ್‌ನಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 11:56 IST
Last Updated 12 ಜೂನ್ 2021, 11:56 IST
ಕುಷ್ಟಗಿಯಲ್ಲಿ ಇಂಧನ ಬೆಲೆ ಹೆಚ್ಚಳ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಹಾಗೂ ಇತರರು ಭಾಗವಹಿಸಿದ್ದರು
ಕುಷ್ಟಗಿಯಲ್ಲಿ ಇಂಧನ ಬೆಲೆ ಹೆಚ್ಚಳ ಖಂಡಿಸಿ ನಡೆಸಿದ ಪ್ರತಿಭಟನೆಯಲ್ಲಿ ಶಾಸಕ ಅಮರೇಗೌಡ ಬಯ್ಯಾಪುರ ಹಾಗೂ ಇತರರು ಭಾಗವಹಿಸಿದ್ದರು   

ಕುಷ್ಟಗಿ: ‘ಇಂಧನ ಬೆಲೆಯನ್ನು ನಿರಂತರವಾಗಿ ಹೆಚ್ಚಿಸುವ ಮೂಲಕ ಕೇಂದ್ರ ಸರ್ಕಾರ ಜನರ ಬದುಕನ್ನು ಅಧೋಗತಿಗೆ ತಂದಿದೆ. ಪ್ರಧಾನಿ ಅಧಿಕಾರ ತ್ಯಜಿಸಲಿ’ ಎಂದು ಶಾಸಕ ಅಮರೇಗೌಡ ಬಯ್ಯಾಪುರ ಒತ್ತಾಯಿಸಿದರು.

ಇಂಧನ ಬೆಲೆ ಹೆಚ್ಚಳ ಖಂಡಿಸಿ ಪಟ್ಟಣದ ವಿವಿಧ ಬಂಕ್‌ಗಳ ಬಳಿ ಕಾಂಗ್ರೆಸ್‌ ಪಕ್ಷದ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

ಪೆಟ್ರೊಲ್‌ ದರ ಈಗ ಮೂರಂಕಿ ದಾಟಿರುವುದರಿಂದ ಸಹಜವಾಗಿ ಖಾದ್ಯತೈಲ ಸೇರಿ ಅಗತ್ಯ ವಸ್ತುಗಳ ದರದಲ್ಲಿ ಭಾರಿ ಏರಿಕೆಯಾಗಿದೆ. ಇದರಿಂದ ಜನಸಾಮಾನ್ಯರು, ಬಡವರು, ಕೂಲಿಕಾರ್ಮಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕಚ್ಚಾ ತೈಲದ ಬೆಲೆಯಲ್ಲಿ ಬಹಳಷ್ಟು ಇಳಿಕೆಯಾಗಿದ್ದರೂ ಕೂಡ ದೇಶದಲ್ಲಿ ಇಂಧನ ದರವನ್ನು ಅನಗತ್ಯವಾಗಿ ಹೆಚ್ಚಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಬಡವರನ್ನು ಕೊಳ್ಳೆ ಹೊಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಪ್ರತಿಭಟನೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ಸೋಮಶೇಖರ ವೈಜಾಪೂರ, ಇಮಾಮಸಾಬ ಗರಡಿಮನಿ, ಬಾಬುಸಾಬ ಮತ್ತು ಪಕ್ಷದ ಕಾರ್ಯಕರ್ತರು ಇದ್ದರು.

ಅದೇ ರೀತಿ ವಿವಿಧ ಬಂಕ್‌ಗಳ ಬಳಿ ಕಾಂಗ್ರೆಸ್‌ ಕಾರ್ಯಕರ್ತರು ಸಹ ಪಕ್ಷದ ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.

ನಿಯಮ ಉಲ್ಲಂಘನೆ: ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಶಾಸಕ ಅಮರೇಗೌಡ ಬಯ್ಯಾಪುರ, ಕಾಂಗ್ರೆಸ್‌ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ನಿಯಮ ಉಲ್ಲಂಘಿಸಿ ಪ್ರತಿಭಟನೆ ನಡೆಸಿರುವುದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ನಿಯಮಗಳು ಎಲ್ಲರಿಗೂ ಒಂದೇ ಆಗಿರುತ್ತವೆ. ಆದರೆ ಅನುಮತಿ ಇಲ್ಲದೆಯೇ ನಡೆಸಿದ ಪ್ರತಿಭಟನೆಯಲ್ಲಿ ಶಾಸಕರೂ ಪಾಲ್ಗೊಂಡು ನಿಯಮ ಉಲ್ಲಂಘಿಸಿರುವುದು ಎಷ್ಟು ಸರಿ ಎಂದು ಹೆಸರು ಪ್ರಕಟಿಸಲು ಇಚ್ಛಿಸದ ಸಾರ್ವಜನಿಕರು ಹೇಳಿದರು.

ಈ ಕುರಿತು ಪ್ರತಿಕ್ರಿಯಿಸಿದ ಸರ್ಕಲ್‌ ಇನ್‌ಸ್ಪೆಕ್ಟರ್ ಎಸ್‌.ಆರ್‌.ನಿಂಗಪ್ಪ,‘ಪ್ರತಿಭಟನೆಗೆ ಕಾಂಗ್ರೆಸ್‌ ಪಕ್ಷ ರಾಜ್ಯಮಟ್ಟದಲ್ಲಿಯೇ ಅನುಮತಿ ಪಡೆದಿರುತ್ತದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.