
ಕೊಪ್ಪಳ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದವರು ಬುಧವಾರ ಗಂಜ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು
ಕೊಪ್ಪಳ: ‘ಜಿಲ್ಲಾ ಸ್ಟೋನ್ ಕ್ರಷರ್ ಸಂಘದವರು ಸಂಸದ ರಾಜಶೇಖರ ಹಿಟ್ನಾಳ ಅವರ ಪ್ರೇರಣಾ ಎಜೆನ್ಸಿ ಮೂಲಕ ಸಾಮಗ್ರಿ ಸರಬರಾಜು ಮಾಡುವುದನ್ನು ಕಡ್ಡಾಯಗೊಳಿಸದೇ ಮೊದಲಿನಂತೆ ಮುಕ್ತ ವಹಿವಾಟು ಮುಂದುವರಿಸಬೇಕು’ ಎಂದು ಆಗ್ರಹಿಸಿ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದವರು ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಟಿಪ್ಪರ್, ಟ್ರಾಕ್ಟರ್ ಹಾಗೂ ಇನ್ನಿತರ ವಾಹನಗಳ ಜೊತೆಗೆ ಅಶೋಕ ವೃತ್ತದಿಂದ ಜಿಲ್ಲಾಡಳಿತ ಭವನದ ತನಕ ಪ್ರತಿಭಟನಾ ಮೆರವಣಿಗೆ ನಡೆಸಿ ಮಾರ್ಗದುದ್ದಕ್ಕೂ ಘೋಷಣೆಗಳನ್ನು ಕೂಗಿದರು. ’ಪ್ರೇರಣಾ ಮೂಲಕ ಸ್ಟೋನ್ ಕ್ರಷರ್‌ಗಳ ಸಾಮಗ್ರಿ ಖರೀದಿ ಗುತ್ತಿಗೆದಾರರ ಪಾಲಿಗೆ ಮರಣಶಾಸನವಾಗಿದ್ದು, ಇದಕ್ಕೆ ಅವಕಾಶ ಕೊಡಬಾರದು’ ಎಂದು ಆಗ್ರಹಿಸಿದರು.
‘ಕ್ರಷರ್ ಸಾಮಗ್ರಿಗಳ ಮಾಲೀಕರು ಮೊದಲು ನೇರವಾಗಿ ನಮಗೇ ಮಾರಾಟ ಮಾಡುತ್ತಿದ್ದರು. ಈಗ ಎಜೆನ್ಸಿ ಮೂಲಕ ಖರೀದಿ ಮಾಡುವಂತೆ ಸೂಚಿಸುತ್ತಿದ್ದಾರೆ. ರಾಜಧನವನ್ನು ಕ್ರಷರ್ ಮಾಲೀಕರು ಕೊಡುತ್ತಿದ್ದು, ಜಿಎಸ್‌ಟಿಯನ್ನು ಪ್ರೇರಣಾ ಸಂಸ್ಥೆಯಿಂದ ಕೊಡುವುದು ಕಾನೂನುಬಾಹಿರವಾಗುತ್ತದೆ. ಸರ್ಕಾರಿ ಕೆಲಸ ಮಾಡುವ ಗುತ್ತಿಗೆದಾರರಿಗೆ ಕೆಎಂಎಂಆರ್‌ಸಿ ಕಾಯ್ದೆಯ ಅಡಿ ಕ್ರಷರ್ ಸಾಮಗ್ರಿ ನಿರಾಕರಿಸಲು ಬರುವುದಿಲ್ಲ. ಈ ಕಾಯ್ದೆ ಪ್ರಕಾರ ಕ್ರಷರ್ ಮಾಲೀಕರೇ ಜಿಎಸ್‌ಟಿ ನೀಡಬೇಕಾಗುತ್ತದೆ’ ಎಂದರು.
ಪ್ರೇರಣಾ ಎಜೆನ್ಸಿ ಮಾಡಿಕೊಂಡಿರುವ ಸಂಸದರು ಈ ಪದ್ಧತಿಯನ್ನು ಏಕಗವಾಕ್ಷಿ ವಿಧಾನ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಇದರಿಂದ ಕ್ರಷರ್ ಮಾಲೀಕರು ಹಾಗೂ ಗುತ್ತಿಗೆದಾರರ ಸಮನ್ವಯತೆಗೆ ಕೊಡಲಿ ಪೆಟ್ಟು ಬೀಳುತ್ತದೆ. ಎಜೆನ್ಸಿ ಮಾಡಿಕೊಂಡು ಸಾರ್ವಜನಿಕರ ಬಳಕೆ ವಸ್ತುಗಳ ಮಾರುಕಟ್ಟೆಯಲ್ಲಿ ಏಕಸ್ವಾಮ್ಯ ಮಾಡಿಕೊಳ್ಳುವುದು ಕೇಂದ್ರ ಸರ್ಕಾರದ ಸ್ಪರ್ಧಾ ಕಾಯ್ದೆ 2002ರ ಪ್ರಕಾರ ಅಕ್ರಮವಾಗಿದೆ. ಇದು ಕೆಎಂಎಂಸಿಆರ್ ಕಾಯ್ದೆ (ತಿದ್ದುಪಡಿ) 2016ರ ಸ್ಪಷ್ಟ ಉಲ್ಲಂಘನೆಯಾಗುತ್ತದೆ ಎಂದು ಹೇಳಿದರು.
ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಸಂಸದ ಹಾಗೂ ಅವರ ಸಹೋದರ ಶಾಸಕ ರಾಘವೇಂದ್ರ ಹಿಟ್ನಾಳ ಜೊತೆ ಮಾತುಕತೆ ನಡೆದರೂ ಪ್ರಯೋಜನವಾಗಿಲ್ಲ ಎಂದರು.
ಗುತ್ತಿಗೆದಾರರ ಸಂಘದ ಖಜಾಂಚಿ ಮಲ್ಲಯ್ಯ ಲಕ್ಮಾಪುರಮಠ, ಗುತ್ತಿಗೆದಾರರ ಸಂಘದ ವಿವಿಧ ತಾಲ್ಲೂಕುಗಳ ಅಧ್ಯಕ್ಷರಾದ ರಾಜಶೇಖರ (ಗಂಗಾವತಿ), ಕೃಷ್ಣ ಇಟ್ಟಂಗಿ (ಕೊಪ್ಪಳ), ಸುಖರಾಜ ತಾಳಕೇರಿ (ಕುಷ್ಟಗಿ), ಯಮನೂರಪ್ಪ ನಡುವಿನಮನಿ (ಯಲಬುರ್ಗಾ), ಶರಣಬಸವರಾಜ ಹೂಗಾರ (ಕನಕಗಿರಿ–ಕಾರಟಗಿ), ಅಯ್ಯನಗೌಡ ಕೆಂಚಣ್ಣನವರ, ಸಂಘದ ಕಾರ್ಯದರ್ಶಿ ದೇವಪ್ಪ ಅರಕೇರಿ, ಎಲ್.ಎಂ. ಮಲ್ಲಯ್ಯ, ಎಸ್. ಪ್ರಸಾದ, ವಿನೋದ ಪೂಜಾರ, ಅಂದಪ್ಪ ಹೊಂಬಳ್ಳಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಗುತ್ತಿಗೆದಾರರ ಪ್ರಮುಖ ಬೇಡಿಕೆಗಳು
* ಸಣ್ಣ ಮತ್ತು ಕೆಕೆಆರ್‌ಡಿಬಿ ಕಾಮಗಾರಿಗಳನ್ನು ₹5 ಕೋಟಿಯಿಂದ ₹10 ಕೋಟಿ ಪ್ಯಾಕೇಜ್ ಮಾಡಿ ಟೆಂಡರ್ ಕರೆಯಲಾಗುತ್ತಿದ್ದು ಇದರಿಂದ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಇದನ್ನು ನಿಲ್ಲಿಸಬೇಕು.
* ಹೊರರಾಜ್ಯಗಳ ಮತ್ತು ಜಿಲ್ಲೆಗಳ ಹೆಚ್ಚಿನ ಗುತ್ತಿಗೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದು ಅದನ್ನು ನಿರ್ಬಂಧಿಸಬೇಕು.
* ಶಾಸಕರ ಶಿಫಾರಸಿನ ಮೇರೆಗೆ ಜಿಲ್ಲಾಡಳಿತ ಬಹುತೇಕ ಕಾಮಗಾರಿಗಳನ್ನು ಕೆಆರ್‌ಐಡಿಎಲ್ ಹಾಗೂ ನಿರ್ಮಿತಿ ಕೇಂದ್ರಗಳಿಗೆ ನೀಡುತ್ತಿದ್ದು ಇದರಿಂದ ಸಣ್ಣ ಗುತ್ತಿಗೆದಾರರಿಗೆ ಕೆಲಸವಿಲ್ಲದಂತಾಗಿದೆ. ನೇರವಾಗಿ ಸಂಸ್ಥೆಗಳಿಗೆ ಕಾಮಗಾರಿ ನೀಡುವ ಬದಲು ಸರ್ಕಾರಿ ಸಂಸ್ಥೆಗಳಿಗೆ ಟೆಂಡರ್ ಮೂಲಕ ಕೊಡಬೇಕು.
‘ಉದ್ರಿ ವ್ಯವಹಾರಕ್ಕೆ ಅವಕಾಶವಿಲ್ಲ‘
ಕೊಪ್ಪಳ: ’ಯಾರ ಮಧ್ಯಸ್ಥಿಕೆಯೂ ಇಲ್ಲದೆ ನೇರವಾಗಿ ನಾವೇ ಕ್ರಷರ್ ಸಾಮಗ್ರಿ ಮಾರಾಟ ಮಾಡುತ್ತೇವೆ. ಆದರೆ ಉದ್ರಿ ವ್ಯವಹಾರಕ್ಕೆ ಅವಕಾಶವಿಲ್ಲ’ ಎಂದು ಕ್ರಷರ್ ಮಾಲೀಕರ ಸಂಘದ ಅಧ್ಯಕ್ಷ ರಾಜು ನಾಲ್ವಾಡ ಹೇಳಿದರು. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ‘ಗುತ್ತಿಗೆದಾರರು ಅನಗತ್ಯವಾಗಿ ಸಂಸದ ಹಾಗೂ ಪ್ರೇರಣಾ ಎಜೆನ್ಸಿ ಹೆಸರು ಎಳೆದು ತರುತ್ತಿದ್ದಾರೆ. ನಾವು ವಿದ್ಯುತ್ ಬಿಲ್ ಕೂಡ ಪಾವತಿಸಲು ಸಾಧ್ಯವಾಗದಷ್ಟು ಸಂಕಷ್ಟದಲ್ಲಿದ್ದೇವೆ. ಈ ಸ್ಥಿತಿ ಸುಧಾರಿಸಿಕೊಳ್ಳಲು ನಾವೇ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಗುತ್ತಿಗೆದಾರರು ತಮಗೆ ಎಲ್ಲಿ ಬೇಕೊ ಅಲ್ಲಿ ಖರೀದಿಸಲು ಅವಕಾಶವಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.