ಯಲಬುರ್ಗಾ: ತಾಲ್ಲೂಕಿನ ಗುನ್ನಾಳ ಗ್ರಾಮದ ಸರ್ಕಾರಿ ಪಾಲಿಟಕ್ನಿಕ್ ಕಾಲೇಜಿನಲ್ಲಿ ಜಿಲ್ಲಾ ಆರೋಗ್ಯ ಇಲಾಖೆ, ತಂಬಾಕು ನಿಯಂತ್ರಣ ಕೋಶ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ತಂಬಾಕು ಸೇವನೆ ಕುರಿತ ಜಾಗೃತಿ ಕಾರ್ಯಕ್ರಮ ಪ್ರಯುಕ್ತ ವಿದ್ಯಾರ್ಥಿಗಳಿಗೆ ಉಪನ್ಯಾಸ ಹಾಗೂ ರಸಪ್ರಶ್ನೆ ಸ್ಪರ್ಧೆ ನಡೆಯಿತು.
ವೈದ್ಯಾಧಿಕಾರಿ ಡಾ.ದಯಾನಂದಸ್ವಾಮಿ ಮಾತನಾಡಿ, ತಂಬಾಕು ಸೇವೆನೆಯಿಂದ ಆರೋಗ್ಯ ಮೇಲೆ ಪರಿಣಾಮ ಬೀರುವ ತೊಂದರೆಗಳ ಬಗ್ಗೆ ಯುವಕರು ತಿಳಿದುಕೊಳ್ಳಬೇಕು. ಅನೇಕರು ದುಷ್ಪರಿಣಾಮದ ಬಗ್ಗೆ ಅರಿವು ಇದ್ದರೂ ಫ್ಯಾಷನ್ ರೀತಿಯಲ್ಲಿ ತಂಬಾಕು ಹಾಗೂ ತಂಬಾಕು ಯುಕ್ತ ಪದಾರ್ಥಗಳ ಸೇವನೆಯಲ್ಲಿ ಆಸಕ್ತಿ ತೋರುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ. ವಿಶೇಷವಾಗಿ ತಂಬಾಕು ಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಿದೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಮಾತನಾಡಿ,‘ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಬಗ್ಗೆ ನಿರಂತರ ಅರಿವು ಕಾರ್ಯಕ್ರಮದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಸಾರ್ವಜನಿಕರು ಹಾಗೂ ಯುವಕರು ಎಚ್ಚೆತ್ತುಕೊಳ್ಳುವುದು ಮುಖ್ಯವಾಗಿದೆ. ವಿಶೇಷವಾಗಿ ಯುವಕರು ಆರೋಗ್ಯ ಸುಧಾರಣೆಗೆ ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸ ಸ್ವಯಂ ಪ್ರೇರಣೆಯಿಂದ ಮಾಡಬೇಕಾಗಿದೆ’ ಎಂದರು.
ರಸಪ್ರಶ್ನೆ ಸ್ಪರ್ಧೆಯಲ್ಲಿ 8ತಂಡಗಳು ಭಾಗವಹಿಸಿದ್ದವು. ಮಂಜುನಾಥ ವಿರುಪಾಕ್ಷಿ ಪ್ರಥಮ (₹500), ರಾಜಬಕ್ಷಿ ಸಂಗಮೇಶ ದ್ವಿತೀಯ(₹300) ಹಾಗೂ ನಿವೇದಿತಾ ಹಾಗೂ ಸೃಷ್ಠಿ ತೃತೀಯ(₹200) ಬಹುಮಾನಗಳನ್ನು ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಎನ್.ಟಿ.ಸಿ.ಪಿ ಕಾರ್ಯಕ್ರಮದ ಸಮಾಜ ಕಾರ್ಯಕರ್ತೆ ಸರಸ್ವತಿ, ಪ್ರಾಂಶುಪಾಲ ವಿಜಯಕುಮಾರ, ಸಲಹೆಗಾರ ಸಂಗಮೇಶ, ಎಸ್.ಟಿ.ಎಸ್ ಕೃಷ್ಣಾಜೀ, ಆರ್.ಕೆ.ಎಸ್.ಕೆ ಆಪ್ತಸಮಾಲೋಚಕ ಮಹೇಶ, ಐ.ಸಿ.ಟಿ.ಸಿ ಆಪ್ತಸಮಾಲೋಚಕ ಬಾಳಪ್ಪ, ಕಾಲೇಜಿನ ಉಪನ್ಯಾಸಕರು, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಲ್ಲಯ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಕಾವೇರಿ, ಸಮುದಾಯ ಆರೋಗ್ಯಾಧಿಕಾರಿ ಮಂಜುಳಾ ಸೇರಿ ಅನೇಕರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.