ADVERTISEMENT

ಪೊಲೀಸರಿಂದ ವಿಶಿಷ್ಟ ಪ್ರಯೋಗ | ನಿಯಮ ಉಲ್ಲಂಘನೆಗೆ ಗೋಣಿ ಚೀಲ ತೊಡುವ ಶಿಕ್ಷೆ

ಧಗೆ ತಾಳದೆ ಪರಿತಾಪ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 12:41 IST
Last Updated 23 ಏಪ್ರಿಲ್ 2020, 12:41 IST
ಗೋಣಿಯಿಂದ ತಯಾರಿಸಿದ ಪಿಪಿಇ ಕಿಟ್‍ ಧರಿಸಿ ಅಶೋಕ ವೃತ್ತದಲ್ಲಿ ಸಂಚರಿಸುತ್ತಿರುವ ವಾಹನ ಸವಾರರು
ಗೋಣಿಯಿಂದ ತಯಾರಿಸಿದ ಪಿಪಿಇ ಕಿಟ್‍ ಧರಿಸಿ ಅಶೋಕ ವೃತ್ತದಲ್ಲಿ ಸಂಚರಿಸುತ್ತಿರುವ ವಾಹನ ಸವಾರರು   

ಕೊಪ್ಪಳ: ಅನವಶ್ಯಕವಾಗಿ ಹೊರಗಡೆ ಸಂಚರಿಸುವ ಜನರನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸರುಕೊರೊನಾ ಚಿಕಿತ್ಸೆ ನೀಡುವ ವೈದ್ಯರ ಪಿಪಿಇ ಕಿಟ್‌ ಮಾದರಿಯ ಗೋಣಿ ಚೀಲ ಹಾಕಿ ವಿಶಿಷ್ಟ ಜಾಗೃತಿ ಮೂಡಿಸಿದರು.

ಜನರ ನಿರ್ಲಕ್ಷ್ಯದಿಂದ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ವೈದ್ಯರು ಹಗಲು, ರಾತ್ರಿ ಚಿಕಿತ್ಸೆಗೆ ಗಾಳಿಯಾಡದ ಕಿಟ್‌ಗಳನ್ನು ಹಾಕಿಕೊಂಡು ಚಿಕಿತ್ಸೆ ನೀಡುತ್ತಿದ್ದಾರೆ. ತಮಗೆ ಆಗುತ್ತಿರುವ ಹಿಂಸೆಯನ್ನು ತಡೆದುಕೊಂಡು ಜನರ ಆರೋಗ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಆದ್ದರಿಂದ ಜನರು ಅವರಿಗೆ ಇನ್ನಷ್ಟು ತೊಂದರೆ ನೀಡಬಾರದು ಎಂಬ ಉದ್ದೇಶದಿಂದ ಈ ನಕಲಿ ಕಿಟ್‌ಗಳನ್ನು ಹಾಕುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಿದರು.

ನಗರದ ಅಶೋಕ ವೃತ್ತದಲ್ಲಿ ಗುರುವಾರ ನಗರ ಠಾಣೆ ಸಿಪಿಐ ಮೌನೇಶ್ ಅವರ ನೇತೃತ್ವದಲ್ಲಿ ರಸ್ತೆಯಲ್ಲಿ ಅನಾವಶ್ಯಕವಾಗಿ ಸಂಚರಿಸುವ ವಾಹನ ಸವಾರರನ್ನು ತಡೆದು ಅವರಿಗೆಗೋಣಿಚೀಲದ ಕಿಟ್‍ಗಳನ್ನು ಹಾಕಿಸಿಸಾಲಾಗಿ ನಿಲ್ಲಿಸಿದರು.

ADVERTISEMENT

ಗೋಣಿ ಚೀಲದಿಂದಲೇ ತಯಾರಿಸಿದಪ್ಯಾಂಟ್, ಅಂಗಿ, ಮಾಸ್ಕ್ ಹಾಗೂ ಕೈಗವುಸ ಧರಿಸಿದ್ದ ವಾಹನ ಸವಾರರು, ರಸ್ತೆಯಲ್ಲಿ ಸಂಚರಿಸುತ್ತಿದ್ದ ಇನ್ನುಳಿದ ವಾಹನ ಸವಾರರಿಗೆ ‘ರಸ್ತೆಯಲ್ಲಿ ಸಂಚರಿಸಬಾರದು. ಸಂಚರಿಸಿದ್ದೇ ಆದಲ್ಲಿ ತಮಗೆ ಆದ ಗತಿಯೇ ನಿಮಗೂ ಆಗಲಿದೆ‘ ಎಂದು ಎಚ್ಚರಿಕೆ ನೀಡುತ್ತಿದ್ದುದು ಕಂಡು ಬಂತು.

ಈ ಕುರಿತು ಮಾತನಾಡಿದ ನಗರ ಠಾಣೆ ಸಿಪಿಐ ಮೌನೇಶ್, 'ನಮ್ಮ ಸೇವೆಗೆಂದೇ ಇರುವ ವೈದ್ಯರು ಪಿಪಿಇ ಕಿಟ್‍ಗಳನ್ನು ದಿನಗಟ್ಟಲೆ ಧರಿಸಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಕೇವಲ 15 ನಿಮಿಷ ಧರಿಸಿದ ಇವರಿಗೆ ಬೆವರಿನ ಸಂಕಟವಾಗುತ್ತಿದೆ. ವೈದ್ಯರ ಕಷ್ಟವನ್ನು ಸಾರ್ವಜನಿಕರಿಗೆ ತಿಳಿಯಪಡಿಸುವುದು ನಮ್ಮ ಉದ್ದೇಶವಾಗಿದೆ. ಅಲ್ಲದೆ ಎಲ್ಲೆಂದರಲ್ಲಿ ಸಂಚರಿಸಿ ಕೊರೊನಾ ರೋಗಿಗಳಾಗಬೇಡಿ, ಆ ಮೂಲಕ ವೈದ್ಯರಿಗೆ ಕಷ್ಟ ನೀಡಬೇಡಿ' ಎಂಬುವುದು ನಮ್ಮ ಕಳಕಳಿಯ ಮನವಿ ಎಂದರು.

ಪಿಪಿಇ ಕಿಟ್‍ಗಳನ್ನು ಧರಿಸುವ ಶಿಕ್ಷೆಗೆ ಗುರಿಯಾಗಿದ್ದ ವಾಹನ ಸವಾರರು ಮಾತನಾಡಿ, ಪಿಪಿಇ ಕಿಟ್‍ಗಳ ಬಗ್ಗೆ ಕೇಳಿದ್ದೆವು ಆದರೆ ಧರಿಸಿರಲಿಲ್ಲ. ಇಷ್ಟೊಂದು ಭಯಾನಕವಾಗಿರುತ್ತದೆ ಎಂದು ಧರಿಸಿದ ಮೇಲೆಯೇ ಅನುಭವಕ್ಕೆ ಬಂದಿದೆ. ತಪ್ಪಿನ ಅರಿವಾಗಿದೆ. ಪ್ರಾಯಶ್ಚಿತವಾಗಿ ಇನ್ನುಳಿದ ವಾಹನ ಸವಾರರಿಗೂ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದೇವೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.