ಕುಷ್ಟಗಿ: ಹತ್ತಿ ರೈತರಿಗೆ ಒಂದು ರೀತಿಯಲ್ಲಿ ಜೂಜಾಟದ ಬೆಳೆ, ನಿರೀಕ್ಷೆಯಂತೆ ಫಸಲು ಬಂದರೆ ಕೈತುಂಬ ರೊಕ್ಕ. ಕುತ್ತು ಬಂದರೆ ರೈತರ ಜೇಬಿಗೆ ಕತ್ತರಿ ಖಾತರಿ. ಆದರೆ ಹತ್ತು ಕುತ್ತು ದಾಟಿ ಬಂದರೂ ಮಾರಲು ಸೂಕ್ತ ಮಾರುಕಟ್ಟೆ ವ್ಯವಸ್ಥೆಯಿಲ್ಲದ ಕಾರಣ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಕೆಳಗೇ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಇದರಿಂದ ರೈತ ಹಾಗೂ ವರ್ತಕ ತೊಂದರೆ ಅನುಭವಿಸುತ್ತಿದ್ದಾರೆ.
ಮೆಕ್ಕೆಜೋಳ, ಬೇವಿನಬೀಜ, ಶೇಂಗಾ ಮಾರಾಟಕ್ಕೆ ಇಲ್ಲಿಯ ಎಪಿಎಂಸಿ ಹೆಸರಾಗಿದ್ದು ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿದೆ. ಆ ಉತ್ಪನ್ನಗಳ ಸಾಲಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಹತ್ತಿ ಜಾಗ ಕಂಡುಕೊಂಡಿದೆ. ಖರೀದಿ ವಿಷಯದಲ್ಲಿ ಕೆಲ ಸಮಸ್ಯೆಗಳನ್ನು ಹೊರತುಪಡಿಸಿದರೆ ರೈತರು ಮತ್ತು ವರ್ತಕರ ನಡುವಿನ ಸಂಬಂಧ ಉತ್ತಮವಾಗಿಯೇ ಇದೆ. ಇತರೆ ಮಾರುಕಟ್ಟೆಗೆ ಹೋಲಿಸಿದರೆ ಹತ್ತಿಗೆ ಯೋಗ್ಯ ದರವೂ ಸಿಗುತ್ತಿದೆ. ಈ ಕಾರಣಕ್ಕೆ ಬಾಗಲಕೋಟೆ ಜಿಲ್ಲೆಯ ಭಾಗಗಳ ಬಹಳಷ್ಟು ರೈತರು ಹತ್ತಿ ಮಾರಾಟಕ್ಕೆ ಇಲ್ಲಿಗೆ ಬರುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿಗೆ ಮಾರುಕಟ್ಟೆ ಪ್ರಾಂಗಣ ಹೊಂದಿಕೊಂಡಿರುವ ಕಾರಣದಿಂದ ಸಂಚಾರಕ್ಕೂ ಅನುಕೂಲವಿದೆ. ಆದರೆ ಹತ್ತಿ ವಹಿವಾಟು ನಡೆಸುವ ಸ್ಥಳದ ಅವ್ಯವಸ್ಥೆ ನಿಯಂತ್ರಿತ ಮಾರುಕಟ್ಟೆ ಕಚೇರಿ ಮುಂದೆಯೇ ಅನಿಯಂತ್ರಿತ, ಅವೈಜ್ಞಾನಿಕ ರೀತಿಯಲ್ಲಿ ನಡೆಯುತ್ತಿದ್ದರೂ ಸಂಬಂಧಿಸಿದವರು ಗಮನಹರಿಸದಿರುವುದು ಮಾರಾಟ ವ್ಯವಸ್ಥೆಯನ್ನೇ ಅಣಕಿಸುವಂತಿದೆ ಎಂಬ ಆರೋಪಗಳು ಸ್ಥಳಕ್ಕೆ ಭೇಟಿ ನೀಡದಾಗ ಕೇಳಿಬಂದವು.
ಅಪಾಯದಲ್ಲೇ ವಹಿವಾಟು: ಮೇಲೆ ಚತುಷ್ಪಥ ಹೆದ್ದಾರಿ ಸೇತುವೆ, ಕಳಗಿನ ಎಡ ಬಲಭಾಗದಲ್ಲಿ ಸರ್ವಿಸ್ ರಸ್ತೆಗಳು, ಮೇಲ್ಸೇತುವೆ ಕೆಳಗಿನ ಜಾಗದಲ್ಲಿ ಮದ್ಯ, ಮಾಂಸ ಸೇರಿದಂತೆ ಹತ್ತಾರು ರೀತಿಯ ವ್ಯಾಪಾರ ವಹಿವಾಟು. ವಾಹನಗಳ ದಟ್ಟಣೆ ಬೇರೆ. ಅಷ್ಟೇ ಅಲ್ಲ ನಿತ್ಯ ನೂರಾರು ಜನರು ಬರಹೋಗುವ ಈ ಸ್ಥಳದಲ್ಲಿಯೇ ಮಲ ಮೂತ್ರ ವಿಸರ್ಜನೆ, ಕಾಲಿಡುವುದಕ್ಕೂ ಹೇಸಿಗೆಬರುವಷ್ಟು ರೀತಿಯಲ್ಲಿ ಮಾಲಿನ್ಯ ಮಡುಗಟ್ಟಿದೆ. ಇಂಥ ಸ್ಥಳದಲ್ಲಿ ಬಿಳಿ ಬಂಗಾರ ಎಂದೇ ಕರೆಯಲಾಗುತ್ತಿರುವ ಹತ್ತಿಯ ವ್ಯಾಪಾರ ನಡೆಯಬೇಕು.
ಮೂರ್ನಾಲ್ಕು ದಶಕಗಳ ಹಿಂದೆ ತಾಲ್ಲೂಕಿನ ಬಹಳಷ್ಟು ಪ್ರದೇಶದಲ್ಲಿ ಜವಾರಿ ಡಿಸಿಎಚ್ ಇತರೆ ತಳಿ ಹತ್ತಿ ಮಳೆಯಾಶ್ರಿತ ಮತ್ತು ಕೊಳವೆಬಾವಿ ನೀರಾವರಿ ಆಶ್ರಯದಲ್ಲಿ ಬೆಳೆಯಲಾಗುತ್ತಿತ್ತು. ಎರಡು ಹತ್ತಿ ಮಿಲ್‌ಗಳೂ ಇದ್ದವು. ನಂತರದ ಅವಧಿಯಲ್ಲಿ ಹತ್ತಿ ಬೇಳೆಯುವ ಕ್ಷೇತ್ರವೂ ಕಡಿಮೆಯಾಗಿ ಮಿಲ್‌ಗಳೂ ಬಂದ್ ಆದವು. ಆದರೆ ಇತ್ತೀಚಿನ ಕೆಲ ವರ್ಷಗಳಲ್ಲಿ ಹತ್ತಿ ಬೆಳೆಯುವ ಕ್ಷೇತ್ರ ಮತ್ತು ಮಾರಾಟ ವ್ಯವಸ್ಥೆ ಮತ್ತೆ ಚಿಗುರೊಡೆದಿದೆ. ಬೀಜೋತ್ಪಾದನೆಯಲ್ಲಿ ಬಹಳಷ್ಟು ರೈತರು ತೊಡಗಿರುವುದರಿಂದ ವಾಣಿಜ್ಯ ಹತ್ತಿ ಕ್ಷೇತ್ರ ಕಡಿಮೆಯಾಗಿದ್ದರೂ ಸುಮಾರು 8,000 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯಲಾಗುತ್ತಿದೆ.
ಬೆಂಕಿ ಭಯ: ನಿತ್ಯ ಸುಮಾರು 60-70 ಟನ್ ಪ್ರಮಾಣದಷ್ಟು ಹತ್ತಿ ಪಟ್ಟಣದಿಂದ ಬೇರೆ ಬೇರೆ ನಗರಗಳ ಮಾರಾಟ ಕೇಂದ್ರಗಳಿಗೆ ಹೋಗುತ್ತಿದೆ. ಬೆಳಿಗ್ಗೆಯಿಂದ ವ್ಯಾಪಾರ ನಡೆದರೆ ರಾತ್ರಿಒಳಗೆ ಹತ್ತಿ ಇಲ್ಲಿ ಇರುವಂತಿಲ್ಲ. ಅನೇಕ ಕುತ್ತುಗಳ ಪೈಕಿ ಹತ್ತಿಗೆ ಬೆಂಕಿಯೂ ಒಂದು. ಫ್ಲೈಓವರ್ ಮೇಲೆ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ, ಯಾರಾದರೂ ಒಂದು ಬೀಡಿ, ಸಿಗರೇಟ್ ಬಿಸಾಡಿದರೆ ಸಾಕು ಅಗ್ನಿ ಅನಾಹುತ ಸಂಭವಿಸುತ್ತದೆ ಎನ್ನುವ ಆತಂಕ ಕಾಡುತ್ತಿದೆ.
ಹತ್ತಿಗೆ ಕುಷ್ಟಗಿ ಮಾರುಕಟ್ಟೆ ಉತ್ತಮವಾಗಿದೆ ಈ ಬಾರಿ ಮಳೆಯಿಂದ ಸಾಕಷ್ಟು ಹಾನಿಗೊಳಗಾದರೂ ಅಲ್ಪಸ್ವಲ್ಪ ಇಳುವರಿ ಬಂದಿದೆ. ದರ ವಿಷಯದಲ್ಲೂ ವ್ಯಾಪಾರಸ್ಥರಿಂದ ರೈತರಿಗೆ ತೊಂದರೆಯಾಗಿಲ್ಲ.ಹನುಮಪ್ಪ ಹಿರೇತಳವಾರ ಗುಡಿಕಲಕೇರಿ ರೈತ
ರೈತರಿಗೆ ಹತ್ತಾರು ತೊಂದರೆ ಕಷ್ಟಪಟ್ಟು ಬೆಳೆದು ಮಾರಲು ತಂದರೆ ಎಪಿಎಂಸಿಯಲ್ಲಿಯೂ ಸಮಸ್ಯೆ. ಒಟ್ಟಿನ ಮ್ಯಾಲೆ ರೈತರ ತೊಂದ್ರಿ ಬಗಿಹರಸೋರು ಯಾರಿಲ್ಲ ನೋಡ್ರಿ.ಫಕೀರಗೌಡ ಈಳಗೇರ ಕೋಳಿಹಾಳ ರೈತ
ಹತ್ತಿ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಪ್ರಾಂಗಣದಲ್ಲಿನ ಜಾಗ ಕಡಿಮೆ ಇದೆ ಆದರೂ ಸೂಕ್ತಕಡೆ ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ.ಸುರೇಶ ತಂಗನೂರು ಎಪಿಎಂಸಿ ಕಾರ್ಯದರ್ಶಿ
ನಾಲ್ಕು ವರ್ಷಗಳ ಹಿಂದೆ ಕ್ವಿಂಟಲ್‌ಗೆ ₹11 ಸಾವಿರ ಬೆಲೆ ಇತ್ತು ಈಗ ಆರೇಳು ಸಾವಿರ ರೂಪಾಯಿಗೆ ಬಂದಿದೆ. ಅಷ್ಟೇ ಅಲ್ಲ ಮೊದಲು ಹೆಚ್ಚಿನ ಬೆಲೆ ಕೊಡುವುದಾಗಿ ಹೇಳುವ ವರ್ತಕರು ತಂದ ನಂತರ ನೆಪ ಹೇಳಿ ಕಡಿಮೆ ಬೆಲೆಗೆ ಕೇಳುತ್ತಾರೆಪರಸಪ್ಪ ಶಿರಗುಂಪಿ ರೈತ
ಅನಧಿಕೃತ ಮಾರಾಟ ಸ್ಥಳಕ್ಕೂ ಶುಲ್ಕ
ಮೇಲ್ಸೇತುವೆ ಕೆಳಗೆ ನಡೆಯುವ ವಹಿವಾಟು ಅನಧಿಕೃತ. ವರ್ತಕರಿಂದ ಎಪಿಎಂಸಿ ಶುಲ್ಕ ವಸೂಲಿ ಮಾಡುತ್ತಿದೆ. ಪುರಸಭೆಯವರು ನಿತ್ಯವೂ ನೆಲಬಾಡಿಗೆ ಪಡೆಯುತ್ತಿದ್ದಾರೆ. ಆದರೆ ಮಾರಾಟಕ್ಕೆ ಎಪಿಎಂಸಿ ಸೂಕ್ತ ಸ್ಥಳ ಕಲ್ಪಿಸುವುದನ್ನು ಮರೆತಿದ್ದರೆ ನೈರ್ಮಲ್ಯ ವ್ಯವಸ್ಥೆ ಕಸ ಸಂಗ್ರಹಣೆ ವಿಷಯದಲ್ಲೂ ಪುರಸಭೆ ನಿರ್ಲಕ್ಷ್ಯವಹಿಸಿರುವುದು ಕಂಡುಬಂದಿತು.
ಟೆಂಡರ್ ಪ್ರಕ್ರಿಯೆ ವ್ಯಾಪ್ತಿಗೇಕಿಲ್ಲ?
ನಿಯಂತ್ರಿತ ಮಾರುಕಟ್ಟೆ ವ್ಯಾಪ್ತಿಯಲ್ಲಿದ್ದರೂ ಹತ್ತಿಗೆ ಬಹಿರಂಗ ಹರಾಜು ಅಥವಾ ಟೆಂಡರ್ ಪದ್ಧತಿ ಅನುಸರಿಸುತ್ತಿಲ್ಲ. ಬಹುತೇಕ ವಹಿವಾಟು ಬಿಳಿಹಾಳೆಯ ಮೇಲೆಯೇ ನಡೆಯುತ್ತಿದ್ದು ಎಪಿಎಂಸಿ ಗಮನಕ್ಕೂ ಬರುವುದಿಲ್ಲ ಎಂಬ ದೂರುಗಳಿವೆ. ಟೆಂಡರ್ ನಡೆದರೆ ಹೆಚ್ಚಿನ ಖರೀದಿದಾರರು ಇಲ್ಲಿಗೆ ಬರಬೇಕು ಅಂದರ ಸ್ಪರ್ಧಾತ್ಮಕ ಬೆಲೆ ರೈತರಿಗೆ ಸಿಗಬಹುದು. ಮಾರಾಟಕ್ಕೆ ಜಾಗವೇ ಇಲ್ಲವೆಂದರೆ ಇನ್ನು ಟೆಂಡರ್ ಪ್ರಕ್ರಿಯೆ ನಡೆಸುವುದಾದರೂ ಎಲ್ಲಿ? ಎಂಬ ಆಕ್ಷೇಪ ವ್ಯಾಪಾರಿಗಳದ್ದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.