ADVERTISEMENT

ಹನುಮಸಾಗರ: ಪ್ರತಿದಿನದ ಸಂಚಾರವೇ ಸವಾಲು

ಹನುಮಸಾಗರ: ರಸ್ತೆ ಗುಂಡಿಗಳ ಬಾಧೆ ತೀವ್ರ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2025, 6:16 IST
Last Updated 8 ಡಿಸೆಂಬರ್ 2025, 6:16 IST
ಮುಖ್ಯ ರಸ್ತೆಯ ಗುಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡಿರುವುದು.
ಮುಖ್ಯ ರಸ್ತೆಯ ಗುಂಡಿಯಲ್ಲಿ ಕೊಳಚೆ ನೀರು ತುಂಬಿಕೊಂಡಿರುವುದು.   

ಹನುಮಸಾಗರ: ಇಲ್ಲಿನ ಪ್ರಮುಖ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ರಸ್ತೆ ಮೇಲಿನ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಾಗಿದೆ. ಸ್ಥಳೀಯರು ಸಂಚರಿಸಲು ಜೀವ ಕೈಯಲ್ಲಿ ಹಿಡುಕೊಂಡು ಸಾಗುವ ದುಸ್ಥಿತಿ ಬಂದಿದೆ.

ಗ್ರಾಮ ಪ್ರವೇಶಿಸುತ್ತಿದ್ದಂತೆ ರಸ್ತೆ ತುಂಬ ಗುಂಡಿಗಳದ್ದೇ ದರ್ಬಾರ್‌. ಕೆಇಬಿ ಕಚೇರಿ ಮುಂದಿನ ರಸ್ತೆಯಲ್ಲಿ ಗುಂಡಿಗಳು ವಾಹನ ಸವಾರರಿಗಾಗಿ ಕಂಟಕವಾಗಿದ್ದು, ಪ್ರತಿದಿನವೂ ದ್ವಿಚಕ್ರ ಸವಾರರು ಬುದ್ದು ಗಾಯಗೊಳ್ಳುತ್ತಿರುವ ಘಟನೆಗಳು ದಿನಂಪ್ರತಿ ಹೆಚ್ಚುತ್ತಿವೆ.

ಗ್ರಾಮದಲ್ಲಿನ ರಸ್ತೆ ಸಮಸ್ಯೆಗಳಿಗೆ ಗ್ರಾ.ಪಂ ಕೆಲವೆಡೆ ಮಣ್ಣು ತುಂಬಿ ತಾತ್ಕಾಲಿಕ ಪರಿಹಾರ ಕಲ್ಪಿಸಿತ್ತು. ಆದರೇ ಮೋರಿಯ ನೀರು ಬಂದ ತಕ್ಷಣ, ರಸ್ತೆಯಲ್ಲಿನ ನೀರು ಕೊಚ್ಚಿ ಹೋಗಿದ್ದು, ರಸ್ತೆಗಳು ಮೊದಲಿನ ಸ್ಥಿತಿಯಲ್ಲಿಯೇ ಮುಂದುವರೆದಿದೆ. ‘ಗುಂಡಿಗಳಲ್ಲಿ ಮಣ್ಣು ತುಂಬುವ ಮೂಲಕ ಎರಡು ದಿನದ ಕ್ರಮ ನಮಗೆ ಬೇಡ. ನಮಗೆ ಶಾಶ್ವತ ರಸ್ತೆ ಮಾಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ADVERTISEMENT

ರಸ್ತೆಗಳ ದುಸ್ಥಿತಿಯ ಬಗ್ಗೆ ಹಲವು ಬಾರಿ ಪಿಡಬ್ಲ್ಯೂಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಕೂಡ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ರಸ್ತೆ ಮೇಲೆ ನಿತ್ಯ ಸಂಚಾರ ಮಾಡುವ ಬೈಕ್ ಸವಾರರು, ರೈತರು, ಮಹಿಳೆಯರು ಸಾಹಸ ಮಾಡುತ್ತಲೇ ರಸ್ತೆ ದಾಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಆಂಬ್ಯುಲೆನ್ಸ್‌ಗಳು ಹಾಗೂ ತುರ್ತು ಸೇವೆಗಳ ವಾಹನಗಳ ಸೇವೆ ಸಹ ವಿಳಂಬಕ್ಕೆ ಹಾಳಾದ ರಸ್ತೆಗಳೇ ಕಾರಣ ಎನ್ನುತ್ತಾರೆ ಗ್ರಾಮಸ್ಥರು.

ಹದಗೆಟ್ಟ ರಸ್ತೆಯಿಂದಾಗಿ ಪ್ರತಿದಿನ ಸಣ್ಣಪುಟ್ಟ ಅಪಘಾತಗಳು ದಾಖಲಾಗುತ್ತದೆ. ರಸ್ತೆ ಮೇಲಿನ ಗುಂಡಿಗಳು ನೀರಿನಿಂದ ತುಂಬಿದ್ದು, ರಸ್ತೆಯ ನಿಜಸ್ವರೂಪವೇ ಕಾಣದಂತಾಗಿರುವುದು ಜೀವಕ್ಕೆ ಅಪಾಯಕಾರಿಯಾದ ಸ್ಥಿತಿ ನಿರ್ಮಾಣವಾಗಿದೆ.

ಸಂಬಂಧಿಸಿದ ಇಲಾಖೆ ಅಧಿಕಾರಿಗಳು ತಕ್ಷಣ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಹನುಮಸಾಗರದ ಜನರ ಕಷ್ಟಕ್ಕೆ ಪರಿಹಾರ ನೀಡಬೇಕು ಎನ್ನುತ್ತಾರೆ ಸ್ಥಳೀಯರು.

ಹದಗೆಟ್ಟ ರಸ್ತೆ ಕುರಿತು ಲೋಕೋಪಯೋಗಿ ಇಲಾಖೆಯ ಎಇಇ ಸುಧಾಕರ ಕಾತರಕಿ ಅವರಿಗೆ ಹಲವು ಬಾರಿ ಕರೆ ಮಾಡಿದರೂ ಕರೆಯನ್ನು ಸ್ವೀಕರಿಸುತ್ತಿಲ್ಲ

ಪ್ರತಿದಿನ ಶಾಲೆಗೆ ಹೊರಡುವಾಗ ರಸ್ತೆ ಗುಂಡಿಗಳಿಂದ ತೊಂದರೆಯಾಗುತ್ತಿದೆ. ಗುಂಡಿಗಳನ್ನು ತಪ್ಪಿಕೊಳ್ಳುತ್ತ ಶಾಲೆಗೆ ಬರಲು ಹರಸಾಹಸಪಡುವಂತಾಗಿದೆ
ಸುರೇಶ ಶಿಕ್ಷಕ
ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಬೈಕ್ ಸವಾರರಿಗೆ ಕಷ್ಟವಾಗಿದೆ. ಅನೇಕರು ಬೈಕ್ ಮೇಲಿಂದ ಬಿದ್ದು ಗಾಯಗೊಂಡಿರುವುದನ್ನು ನೋಡಿದ್ದೇನೆ.
ಮುತ್ತಣ್ಣ ಗ್ರಾಮಸ್ಥ 
ಹಾಳಾದ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು. ಗ್ರಾಪಂ ಮಣ್ಣು ಹಾಕುವುದರ ಮೂಲಕ ತಾತ್ಕಾಲಿಕ ಪರಿಹಾರ ನೀಡುತ್ತಿದೆ ಹೊರತು ಶಾಶ್ವತ ಪರಿಹಾರ ಹುಡುಕುತ್ತಿಲ್ಲ.
ಮೆಹಬೂಬ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.