ಹನುಮಸಾಗರ: ಟಿಸಿ (ಟ್ರಾನ್ಸ್‌ಫಾರ್ಮರ್) ದುರಸ್ತಿ ಮಾಡುವ ನೆಪದಲ್ಲಿ ರೈತರಿಂದ ಹೆಚ್ಚು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದ ಮೇಲೆ, ಹನುಮಸಾಗರದ ರೈತರು ಇಂದು ವಿದ್ಯುತ್ ಶಾಖಾಧಿಕಾರಿ ಮೌಲಾಸಾಬ್ ಅವರಿಗೆ ಮುತ್ತಿಗೆ ಹಾಕಿದರು.
ರೈತರು, ಹನುಮಸಾಗರದ ವಸ್ತ್ರದ ಲೇಔಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಸಗಿ ಟಿಸಿ ದುರಸ್ತಿ ಕೇಂದ್ರವು ರೈತರಿಗೆ ಸುಳ್ಳು ಮಾಹಿತಿಗಳನ್ನು ನೀಡಿ ಹೆಚ್ಚುವರಿ ಹಣ ವಸೂಲಿ ಮಾಡುತ್ತಿದೆ ಎಂದು ದೂರು ನೀಡಿದರು. ಈ ಕೇಂದ್ರಕ್ಕೆ ವಿದ್ಯುತ್ ಇಲಾಖೆಯಿಂದ ಅನುಮತಿ ನೀಡಿಲ್ಲ. ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಶಾಖಾಧಿಕಾರಿ ಮೌಲಾಸಾಬ್ ಹಾಗೂ ಕಿರಿಯ ಅಭಿಯಂತರರು ಈ ಬಗ್ಗೆ ಪ್ರತಿಕ್ರಿಯೆ ನೀಡಿ, ’ಪ್ರಸ್ತುತ ಯಾವುದೇ ಟಿಸಿ ಸುಟ್ಟರೆ, 24 ಗಂಟೆಗಳೊಳಗೆ ಟಿಸಿ ಒದಗಿಸುವ ವ್ಯವಸ್ಥೆ ಇದೆ. ರೈತರು ನಮ್ಮ ಗಮನಕ್ಕೆ ತರದೇ ಖಾಸಗಿ ದುರಸ್ತಿ ಕೇಂದ್ರಗಳಿಗೆ ಹೋಗುವುದು ಅವಶ್ಯಕವಿಲ್ಲ. ಕರ್ನಾಟಕದಲ್ಲಿ ಖಾಸಗಿಯವರಿಗೆ ಯಾವುದೇ ಅಧಿಕೃತ ಅನುಮತಿ ನೀಡಿಲ್ಲ’ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಅಧ್ಯಕ್ಷ ಯಮನೂರ ಮಡಿವಾಳರ, ದಾಮೋದರ ಹೈಯಗ್ರೀವ, ಬಸವರಾಜ ಬಾಚಲಾಪೂರ, ದೊಡ್ಡಪ್ಪ ಮಡಿವಾಳರ, ಶಾಮೀದಸಾಬ್, ಭೀಮಪ್ಪ ಜಗಳೂರು, ಕರಿಸಿದ್ದಪ್ಪ ನಿಡುಗುಂದಿ, ಬಸವರಾಜ ಮುಳಗುಂದ, ಹನುಮಂತಪ್ಪ ಗದ್ದಿ, ಹುಸೇನ್ ಸಾಬ್, ಪರಶುರಾಮ ಗಡೇಕಾರ, ಬುಡ್ನೇಸಾಬ್ ಡಾಲಾಯತ ಮತ್ತು ಶಿವಯ್ಯ ಗಂಗಾವತಿಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.