ಕೊಪ್ಪಳ:ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೂಲಿ ಕೆಲಸ ನೀಡಬೇಕು ಎಂದು ಆಗ್ರಹಿಸಿ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳಿಗೆ ಕೂಲಿಕಾರರು ಎಐಡಿಎಸ್‌ಒ ಸಂಘಟನೆ ನೇತೃತ್ವದಲ್ಲಿ ಮನವಿ ಸಲ್ಲಿಸಿದರು.
ತಾಲ್ಲೂಕಿನಲೇಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಈ ಕೂಡಲೇ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೆಲಸ ನೀಡಬೇಕು, ₹289 ಕೂಲಿಯನ್ನು ₹600ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಲಾಯಿತು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ರಮೇಶ್ ವಂಕಲಕುಂಟಿ ಮಾತನಾಡಿ, ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರ್ಕಾರ ಕೂಡಾ ವಾರಂತ್ಯ ಕರ್ಫ್ಯೂ ಘೋಷಣೆ ಮಾಡಿದೆ. ಹೊರಗಡೆ ಎಲ್ಲಿಯೂ ಕೆಲಸ ಸಿಗುತ್ತಿಲ್ಲ. ಕೋವಿಡ್ ಕಾರಣಕ್ಕಾಗಿ ನಗರಗಳಿಗೆ ವಲಸೆ ಹೋಗುವುದು ಕೂಡ ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಕೆಲಸ ಸಹ ಸಿಗದಂತಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಗುವ ಕೆಲಸಗಳು ಜನರ ಬದುಕಿಗೆ ಆಸರೆಯಾಗುತ್ತವೆ ಎಂದು.
ಇನ್ನೂ ಕೂಡ 100 ಮಾನವ ದಿನಗಳನ್ನು ಪೂರೈಸಿಲ್ಲ. ತಕ್ಷಣವೇ ಲೇಬಗೇರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಿಗೆ ಉದ್ಯೋಗ ಖಾತ್ರಿ ಅಡಿಯಲ್ಲಿ ಕೆಲಸ ನೀಡಬೇಕು ಅದೇ ರೀತಿ ಗ್ರಾಮದಲ್ಲಿ ಬಹುತೇಕ ಜನರು ಇಂಗು ಗುಂಡಿ ಮತ್ತು ಎರೆಹುಳು ತೊಟ್ಟಿ ನಿರ್ಮಾಣ ಮಾಡಿದ್ದಾರೆ. ಯಾರಿಗೂ ಸಾಮಗ್ರಿ ವೆಚ್ಚ ಪಾವತಿಯಾಗಿಲ್ಲ. ಆದಷ್ಟು ಬೇಗನೆ ಈ ಹಣವನ್ನು ಅವರವರ ಖಾತೆಗೆ ಜಮಾ ಮಾಡಬೇಕು ಎಂದು ಒತ್ತಾಯಿಸಿದರು. ಈಗಾ ಗಲೇ ನಗರಗಳಲ್ಲಿಕೊರೊನಾಹೆಚ್ಚುತ್ತಿರುವ ಕಾರಣದಿಂದಾಗಿ ನಗರಗಳಿಂದ ಜನರು ಹಳ್ಳಿಗಳಿಗೆ ವಾಪಸ್ಸಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನರೇಗಾದಡಿ ಯಲ್ಲಿರುವ ಮಾನವ ದಿನಗಳನ್ನು 200 ದಿನಕ್ಕೆ ಹೆಚ್ಚಿಸಬೇಕು ಹಾಗೂ ಕೂಲಿಯನ್ನು ₹300ರಿಂದ ₹600ಗೆ ಹೆಚ್ಚಿಸಿ ಜನರಿಗೆ ಅನುಕೂಲ ಮಾಡಬೇಕು ಎಂದರು.
ಸಂಘಟನೆಯ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯರಾದ ಶರಣು ಗಡ್ಡಿ, ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಕಾರ್ಯಕರ್ತರಾದ ಭೀಮೇಶ್, ಗ್ರಾಮಸ್ಥರಾದ ಶಾಂತಮ್ಮ, ಶಿವಪ್ಪ ತೋಟದ, ನಿಂಗಮ್ಮ, ಸೋಮವ್ವ, ಸ್ವಾರೆಮ್ಮ, ಹುಲಿಗೆಮ್ಮ ಇನ್ನು ಅನೇಕರು ಇದ್ದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.