ADVERTISEMENT

ಗಂಗಾವತಿ: ಮೋಟಾರ್‌ ವಾಹನ ಕಾಯ್ದೆ ತಿದ್ದುಪಡಿ ಹಿಂಪಡೆಯಲು ಆಗ್ರಹ

ವಾಹನ ಮಾಲೀಕರ, ಚಾಲಕರ ಸಂಘದಿಂದ ಅನಿರ್ದಿಷ್ಟಾವಧಿ ಧರಣಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2024, 6:41 IST
Last Updated 21 ಜನವರಿ 2024, 6:41 IST
ಗಂಗಾವತಿ ತಾಲ್ಲೂಕು ಲಾರಿ ಮಾಲೀಕರ ಮತ್ತು ವಾಹನ ಚಾಲಕರ ಸಂಘದ ಸದಸ್ಯರು ಎಪಿಎಂಸಿ ಲಾರಿ ಯಾರ್ಡ್ ಬಳಿ ಶನಿವಾರ ಧರಣಿ ನಡೆಸಿದರು
ಗಂಗಾವತಿ ತಾಲ್ಲೂಕು ಲಾರಿ ಮಾಲೀಕರ ಮತ್ತು ವಾಹನ ಚಾಲಕರ ಸಂಘದ ಸದಸ್ಯರು ಎಪಿಎಂಸಿ ಲಾರಿ ಯಾರ್ಡ್ ಬಳಿ ಶನಿವಾರ ಧರಣಿ ನಡೆಸಿದರು   

ಗಂಗಾವತಿ: ಅಪಘಾತ ಮಾಡಿ ಪರಾರಿಯಾಗುವ (ಹಿಟ್ ಅಂಡ್ ರನ್‌) ಪ್ರಕರಣಗಳಿಗೆ ಕಠಿಣ ಶಿಕ್ಷೆ ವಿಧಿಸುವ  ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ತಾಲ್ಲೂಕು ಲಾರಿ ಮಾಲೀಕರು ಮತ್ತು ವಾಹನ ಚಾಲಕ ಸಂಘದ ಸದಸ್ಯರು ಗಂಗಾವತಿಯ ಎಪಿಎಂಸಿ ಲಾರಿ ಯಾರ್ಡ್ ಬಳಿ ಶನಿವಾರ ಅನಿರ್ದಿಷ್ಟಾವಧಿ ಧರಣಿ ನಡೆಸಿದರು.

ಸಂಘದ ಅಧ್ಯಕ್ಷ ಸುರೇಶ ಸಿಂಗನಾಳ ಮಾತನಾಡಿ, ಕೇಂದ್ರ ಸರ್ಕಾರ ಭಾರತೀಯ ನ್ಯಾಯ ಸಂಹಿತೆಯ ಕಲಂ 106ರ ಉಪವಿಧಿ 1 ಮತ್ತು 2ಕ್ಕೆ ತಂದಿರುವ ತಿದ್ದುಪಡಿ ವಾಹನ ಚಾಲಕರು, ಮಾಲೀಕರಿಗೆ ಮಾರಕವಾಗಿ ಪರಿಣಮಿಸಿ, ವೃತ್ತಿಯಿಂದ ಹೊರಗುಳಿಯುವಂತೆ ಮಾಡಿದೆ. ಲಾರಿಗಳು ರಸ್ತೆಗಳಿದರೆ ಸಾಕು ಆರ್‌ಟಿಒ, ಪೊಲೀಸ್, ಜಿಎಸ್ಟಿ ಅಧಿಕಾರಿಗಳು ಎಲ್ಲೆಂದರಲ್ಲೆ ವಾಹನಗಳನ್ನು ತಡೆದು ಚಾಲಕರಿಗೆ ಕಿರುಕುಳ ನೀಡುತ್ತಿರುವ ಪರಿಣಾಮ ಬೇಸತ್ತು ವಾಹನ ಚಲಾಯಿಸಲು ಚಾಲಕರೇ ಬರುತ್ತಿಲ್ಲ. ಇಂತಹ ಸನ್ನಿವೇಶದಲ್ಲಿ  ಅಪಘಾತ ಮಾಡಿ ಪರಾರಿಯಾಗುವ ಪ್ರಕರಣಗಳಿಗೆ ₹ 7 ಲಕ್ಷ ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸಿದರೆ, ಚಾಲಕರು ಜೀವನ ಹೇಗೆ ನಡೆಸಬೇಕು ಎಂದು ಪ್ರಶ್ನಿಸಿದರು.

ಕೇಂದ್ರದ ಕಾಯ್ದೆ ತಿದ್ದುಪಡಿಯ ಕ್ರಮ ಖಂಡಿಸಿ ಜ.17ರಿಂದ ರಾಜ್ಯದ ಎಲ್ಲ ತಾಲ್ಲೂಕಿಗಳಲ್ಲಿ ವಾಹನ ಮಾಲೀಕರರ ಮತ್ತು ಚಾಲಕರ ಸಂಘಗಳು ಪ್ರತಿಭಟನೆಗಳು ನಡೆಸುತ್ತಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಿಂಚತ್ತು ತಲೆಕೆಡಿಸಿ ಕೊಳ್ಳುತ್ತಿಲ್ಲ. ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ADVERTISEMENT

ವಾಹನ ಚಾಲಕರ ಸಂಘದ ಅಧ್ಯಕ್ಷ ಯೂಸುಫ್ ಸಂಪಂಗಿ ಮಾತನಾಡಿ,  ಅಧಿಕಾರಿಗಳು ಸಾರ್ವಜನಿಕರ ವಾಹನ ಚಾಲಕರನ್ನು ಎಲ್ಲೆಂದರಲ್ಲೆ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರೆ. ಇವುಗಳಿಗೆ ಕಡಿವಾಣ ಬೀಳಬೇಕು. ರಾಜ್ಯದ ಗಡಿಭಾಗದಲ್ಲಿ ಎಲ್ಲ ಸಾರಿಗೆ ಇಲಾಖೆ ತಪಾಸಣೆ ಠಾಣೆಗಳನ್ನು ತೆರವುಮಾಡಬೇಕು.  ಕಪ್ಪುಪಟ್ಟಿ ಹೆಸರಿನಲ್ಲಿನ ವಾಣಿಜ್ಯ ವಾಹನಗಳಿಗೆ ಎಫ್‌ಸಿ ಮತ್ತು ಪರ್ಮಿಟ್‌ ನವೀಕರಣ ನಿರಾಕರಣೆ ನಿಲ್ಲಿಸಬೇಕು. ಡಿಎಸ್‌ಎ ಕೇಸುಗಳನ್ನು ವಾಹನ ಮಾಲೀಕರು ತಮ್ಮ ಮೂಲ ಕಚೇರಿಯಲ್ಲಿ ಮುಗಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು ಎಂದರು.

ಸಂಘದ ಉಪಾಧ್ಯಕ್ಷ ಪ್ರಾಣೇಶರಾವ್ ತಾಂದಳೆ, ಕಾರ್ಯದರ್ಶಿ ಶಬ್ಬಿರ್ ಮನಿಯಾರ್, ಖಜಾಂಚಿ ಅಮರಪ್ಪ ಮಳಗಿ, ವಾಹನ ಚಾಲಕರ ಸಂಘದ ಉಪಾಧ್ಯಕ್ಷ ಮುತ್ತಣ್ಣ, ರೆಹಮಾನ್, ನಾಗರಾಜ, ಲತೀಫ್, ಮೆಹಬೂಬ, ಗೋಪಾಲ ಸೇರಿ ವಾಹನ ಚಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.