ಗಂಗಾವತಿ: ‘ದೇವದಾಸಿ ಮಹಿಳೆಯರ ಮತ್ತು ಅವರ ಕುಟುಂಬ ಸದಸ್ಯರ ಮರುಸಮೀಕ್ಷೆ ನಡೆಸುತ್ತಿದ್ದು ಇದರಲ್ಲಿ ಕೆಲ ತೊಡಕುಗಳಿವೆ. ಸರ್ಕಾರ ಅವುಗಳನ್ನ ಸರಿಪಡಿಸಿ ಮರು ಸಮೀಕ್ಷೆ ಕೈಗೊಳ್ಳಬೇಕು’ ಎಂದು ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ರಾಜ್ಯ ಗೌರವಾಧ್ಯಕ್ಷ ಯು. ಬಸವರಾಜ ಹೇಳಿದರು.
ನಗರದ ತಾ.ಪಂ ಆವರಣದ ಕೃಷ್ಣದೇವರಾಯ ಕಲಾ ಭವನದಲ್ಲಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘಟನೆಯಿಂದ ಸೋಮವಾರ ನಡೆದ ಜಿಲ್ಲಾಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಸರ್ಕಾರ ನಡೆಸುತ್ತಿರುವ ಆನ್‌ಲೈನ್ ಸಮೀಕ್ಷೆಯಿಂದ ಸಾಕಷ್ಟು ತೊಂದರೆ ಆಗಲಿದೆ. ಸಮೀಕ್ಷೆಯಿಂದ ಸಂಬಧಿಸಿದವರು ಹೊರ ಉಳಿಯದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಅಂಗನವಾಡಿ ಕೇಂದ್ರಗಳ ಸಹಾಯಕರಿಂದ ಮರು ಸಮೀಕ್ಷೆ ಮಾಡಿಸಿ ಅರ್ಜಿಗಳನ್ನು ತುಂಬಿಸಬೇಕು. ಈ ಬಗ್ಗೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು’ ಎಂದರು.
‘ಸಮೀಕ್ಷೆಯಲ್ಲಿ ವಯಸ್ಸಿನ ಮಿತಿ ಹಾಕಬಾರದು. ಮೃತ ದೇವದಾಸಿ ಮಹಿಳೆ ಕುಟುಂಬದ ಸದಸ್ಯರನ್ನು ಸಹ ಸಮೀಕ್ಷೆ ವ್ಯಾಪ್ತಿಗೆ ಒಳಪಡಿಸಬೇಕು. ಅವರ ಪುನರ್ವಸತಿಗೆ, ಜೀವನೋಪಾಯಕ್ಕೆ ಭೂಮಿ ಒದಗಿಸಬೇಕು. ದೇವದಾಸಿ ನಿರುದ್ಯೋಗ ಮಕ್ಕಳಿಗೆ ಮಾಸಿಕ ಭತ್ಯೆ ನೀಡಬೇಕು. ಅವಿದ್ಯಾವಂತ ಮಕ್ಕಳಿಗೆ ನರೇಗಾ ಯೋಜನೆಯಡಿ 150 ದಿನಗಳ ಕಡ್ಡಾಯ ಕೆಲಸ ಒದಗಿಸಬೇಕು. ಈ ಬಗ್ಗೆ ನಾವೆಲ್ಲರೂ ಒಗ್ಗಟ್ಟಾಗಿ ಹೋರಾಟ ನಡೆಸಿದಾಗ ಮಾತ್ರ ಬದಲಾವಣೆ ಸಾಧ್ಯ’ ಎಂದು ಹೇಳಿದರು.
ದಲಿತ ಹಕ್ಕುಗಳ ಹೋರಾಟ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರಾಜಣ್ಣ, ದೇವದಾಸಿ ಮಹಿಳಾ ವಿಮೋಚನಾ ಸಂಘಟನೆ ರಾಜ್ಯಾಧ್ಯಕ್ಷೆ ಜಿ.ಹುಲಿಗೆಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ಮಂಜುನಾಥ ಡಗ್ಗಿ, ಹುಸೇನಪ್ಪ, ಸುಂಕಪ್ಪ ಗದಗ, ಭಾಗಮ್ಮ, ಐಯಮ್ಮ, ರಾಜಮ್ಮ, ಗಂಗಮ್ಮ, ಮಲ್ಲಮ್ಮ ಸೇರಿ ದೇವದಾಸಿ ಮಹಿಳೆಯರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.