ಕೊಪ್ಪಳ: ರಾಜ್ಯ ಸರ್ಕಾರ 18 ವರ್ಷಗಳ ಬಳಿಕ ಮಾಜಿ ದೇವದಾಸಿಯರ ಪುನರ್ ಸಮೀಕ್ಷೆ ಆರಂಭಿಸಿದ್ದು ಜಿಲ್ಲೆಯ ಒಂದಷ್ಟು ತಾಲ್ಲೂಕುಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾದರೆ, ಇನ್ನಷ್ಟು ಕಡೆ ಮಾಹಿತಿ ನೀಡಲು ಹಿಂದೇಟು ಹಾಕುತ್ತಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯಲ್ಲಿ ಮರು ಸಮೀಕ್ಷೆ ಸೆ. 15ರಿಂದ ಆರಂಭವಾಗಿದ್ದು, 45 ದಿನಗಳಲ್ಲಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿದೆ. ರಾಜ್ಯ ಸರ್ಕಾರ 1993-94ರಲ್ಲಿ ಮೊದಲ ಬಾರಿಗೆ ಹಾಗೂ 2007-08ರಲ್ಲಿ ಕೊನೆಯ ಬಾರಿಗೆ ಸಮೀಕ್ಷೆ ನಡೆಸಿತ್ತು. ಆಗ ವ್ಯಾಪಕವಾಗಿದ್ದ ದೇವದಾಸಿ ಪದ್ಧತಿಗೆ ಕಡಿವಾಣ ಹಾಕಲು ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದ್ದರೂ ಕೆಲವರು ಸಮೀಕ್ಷೆಯಿಂದ ಹೊರಗಡೆ ಉಳಿದಿದ್ದಾರೆ ಎನ್ನುವ ದೂರುಗಳಿದ್ದವು. ಆದ್ದರಿಂದ ಮರು ಸಮೀಕ್ಷೆಗೆ ಅನೇಕ ವರ್ಷಗಳಿಂದ ಆಗ್ರಹ ಕೇಳಿ ಬರುತ್ತಿತ್ತು.
18 ವರ್ಷಗಳ ಹಿಂದೆ ನಡೆದಿದ್ದ ಸಮೀಕ್ಷೆಯಲ್ಲಿ ಜಿಲ್ಲೆಯಲ್ಲಿ 6018 ಮಹಿಳೆಯರು ದೇವದಾಸಿಯರು ಎಂದು ಗುರುತಿಸಿಕೊಂಡಿದ್ದರು. ಅದರಲ್ಲಿ ಈಗ 2,900 ಜನ ಮಾತ್ರ ಜೀವಂತವಾಗಿದ್ದು, ಪ್ರಸ್ತುತ 1193 ಜನರ ದತ್ತಾಂಶ ಸಂಗ್ರಹ ಕಾರ್ಯ ಮುಗಿದಿದೆ. ಕೆಲಸ ಪೂರ್ಣಗೊಳಿಸಲು ಇನ್ನು 15 ದಿನಗಳಷ್ಟೇ ಉಳಿದಿವೆ.
ಹಿಂದಿನ ಸಮೀಕ್ಷೆಯಿಂದ ಹೊರಗುಳಿದ ಮಾಜಿ ದೇವದಾಸಿಯರು ಈ ಬಾರಿ ಸೇರ್ಪಡೆಯಾಗಬೇಕು ಎನ್ನುವ ಕಾರಣಕ್ಕಾಗಿ ಆಯಾ ತಾಲ್ಲೂಕು ವ್ಯಾಪ್ತಿಯ ಸಿಡಿಪಿಒ ಕಚೇರಿಗಳಲ್ಲಿ ದತ್ತಾಂಶ ದಾಖಲಿಸಲಾಗುತ್ತಿದೆ. ಆ ಮಹಿಳೆಯರೇ ಖುದ್ದು ಕಚೇರಿಗೆ ಬಂದು ದತ್ತಾಂಶದ ಮಾಹಿತಿ ನೀಡಬೇಕು. ಮೊದಲು ಕೆವೈಸಿ ದಾಖಲಿಸಿ ಫೋಟೊ ತೆಗೆದುಕೊಂಡು ಶೈಕ್ಷಣಿಕ, ಆರ್ಥಿಕ ಪರಿಸ್ಥಿತಿ, ವಸತಿ ಸೌಲಭ್ಯ, ಹೊಲ, ಜೀವನಕ್ಕೆ ಆಧಾರ, ಆರೋಗ್ಯದ ವಿಷಯದ ಕುರಿತು ಮಾಹಿತಿ ಪಡೆಯಲಾಗುತ್ತಿದೆ. ಮಾಜಿ ದೇವದಾಸಿ ಮಹಿಳೆಯಿಂದ ಹುಟ್ಟಿದ ಮಕ್ಕಳ ಹಾಗೂ ಸೊಸೆಯಂದಿರ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಸಮೀಕ್ಷೆಗೆ ಒಳಪಟ್ಟರೆ ತಮಗೆ ಅಥವಾ ಕುಟುಂಬದವರಿಗೆ ಸರ್ಕಾರಿ ಸೌಲಭ್ಯಗಳು ಸಿಗುತ್ತವೆ ಎನ್ನುವ ನಿರೀಕ್ಷೆಯಿಂದ ಸ್ವಯಂಪ್ರೇರಿತರಿಂದ ಬಂದು ಬಹಳಷ್ಟು ಜನ ಮಾಹಿತಿ ಒದಗಿಸುತ್ತಿದ್ದು, ಇನ್ನು ಕೆಲವರು ಮಾಹಿತಿ ನೀಡಲು ಹಿಂದೇಟು ಹಾಕುತ್ತಿರುವುದಾಗಿ ತಿಳಿದು ಬಂದಿದೆ. ಜಿಲ್ಲೆಯ ಕೊಪ್ಪಳ ತಾಲ್ಲೂಕು ವ್ಯಾಪ್ತಿಯಲ್ಲಿ 348, ಕುಷ್ಟಗಿ ತಾಲ್ಲೂಕಿನಲ್ಲಿ 268 ಮತ್ತು ಗಂಗಾವತಿ ವ್ಯಾಪ್ತಿಯಲ್ಲಿ 246 ಮಹಿಳೆಯರು ಮಾಹಿತಿ ಹಂಚಿಕೊಂಡಿದ್ದಾರೆ. ಆದ್ದರಿಂದ ನಿಗದಿತ ಅವಧಿಯ ಒಳಗೆ ಸಮೀಕ್ಷಾ ಕಾರ್ಯ ಪೂರ್ಣಗೊಳ್ಳುವುದು ಅನುಮಾನ ಎಂದು ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.